ನಿಧಿ ಆಸೆಗಾಗಿ ಇತಿಹಾಸ ಪ್ರಸಿದ್ಧ ದೇವರ ಶಿಲೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು
ತುಮಕೂರು, ಆ.11- ನಿಧಿ ಆಸೆಗಾಗಿ ಇತಿಹಾಸ ಪ್ರಸಿದ್ಧ ಹುಚ್ಚಂಗಿ ಗ್ರಾಮದ ಗವಿರಂಗನಾಥ ಸ್ವಾಮಿ ದೇವರ ಶಿಲೆಯನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ತಾಲೂಕಿನ ಹುಚ್ಚಂಗಿ ಗ್ರಾಮದ ಬಂಡೆಯ ಒಳಭಾಗದಲ್ಲಿರುವ ಶ್ರೀ ಗವಿರಂಗನಾಥ ಸ್ವಾಮಿ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿರುವ ದುಷ್ಕರ್ಮಿಗಳು ದೇವರ ಕೈಯಿ, ಪಾದಗಳು, ತಲೆ ಎಲ್ಲವನ್ನೂ ವಿರೂಪಗೊಳಿಸಿದ್ದಾರೆ. ಈ ಘಟನೆ ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದೆ.
ಈಗಾಗಲೇ ಎರಡು-ಮೂರು ಬಾರಿ ಈ ರೀತಿ ಘಟನೆಗಳು ಸಂಭವಿಸುತ್ತಲೇ ಇವೆ. ಕಳೆದ ವರ್ಷವಷ್ಟೆ 2 ರಿಂದ 3 ಲಕ್ಷ ಹಣದಲ್ಲಿ ಭಕ್ತಾದಿಗಳು ದೇವಾಲಯವನ್ನು ಅಭಿವೃದ್ಧಿಪಡಿಸಿದ್ದರು. ಸುಮಾರು 350 ರಿಂದ 400 ವರ್ಷ ಇತಿಹಾಸ ಹೊಂದಿರುವ ಈ ದೇವಾಲಯಕ್ಕೆ ಬಸವನಬೆಟ್ಟ ಎಂದು ಕರೆಯಲಾಗುತ್ತದೆ. ರೈತರು ಈ ದೇವಸ್ಥಾನಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಹರಕೆ ಕಟ್ಟಿಕೊಂಡರೆ ಜಾನುವಾರುಗಳಿಗೆ ಯಾವುದೇ ಕಾಯಿಲೆಗಳು ಬರುವುದಿಲ್ಲ ಎಂಬುದು ಈ ಭಾಗದ ಜನರ ನಂಬಿಕೆ.
ನಿಧಿಗಾಗಿ ಅಥವಾ ಕಲ್ಲು ಗಣಿಗಾರಿಕೆಗಾಗಿ ಈ ಕೃತ್ಯ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಬಂಡೆಯ ಮೇಲೆ ಕ್ರಷರ್ನವರು ಕಣ್ಣಿಟ್ಟಿದ್ದು, ಇಲ್ಲಿರುವ ದೇವರನ್ನು ವಿರೂಪಗೊಳಿಸಿದರೆ ಭಕ್ತರು ಬರುವುದಿಲ್ಲ. ಕಲ್ಲು ಗಣಿಗಾರಿಕೆ ನಡೆಸಲು ಅನುಕೂಲವಾಗುತ್ತದೆ ಎಂದು ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದೆಂದು ಆರೋಪಿಸಲಾಗಿದೆ. ಈ ಸಂಬಂಧ ಪೋರಾ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.