ನಿರ್ದಿಷ್ಟ ಗುರಿ ಇಟ್ಟುಕೊಳ್ಳಲು ವಿದ್ಯಾರ್ಥಿಗಳಿಗೆ ರಶ್ಮಿ ವಿ. ಮಹೇಶ್ ಕರೆ

ಈ ಸುದ್ದಿಯನ್ನು ಶೇರ್ ಮಾಡಿ

bgs

ಹಾಸನ, ಅ.17- ನಿರ್ದಿಷ್ಟ ಗುರಿ ಇಟ್ಟುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಬಿಬಿಎಂಪಿ ವಿಶೇಷ ಆಯುಕ್ತರಾದ ರಶ್ಮಿ ವಿ. ಮಹೇಶ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಬಿಜಿಎಸ್ ಸ್ಟಡಿ ಸೆಂಟರ್ ವತಿಯಿಂದ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಹಲವಾರು ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿವೆ. ನಮ್ಮ ಸಾಮಥ್ರ್ಯಕ್ಕೆ ತಕ್ಕ ಪರೀಕ್ಷೆ ಆರಿಸಿಕೊಂಡು ಅದರತ್ತಲೇ ಗಮನ ಕೇಂದ್ರೀಕರಿಸಿ ಅಧ್ಯಯನ ನಡೆಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.

ಇಂದು ಇಂಜಿನಿಯರಿಂಗ್, ಮೆಡಿಕಲ್ ಮತ್ತಿತರ ವೃತ್ತಿಪರ ಕೋರ್ಸ್‍ಗಳನ್ನು ಹೊರತುಪಡಿಸಿ ಇತರೆ ಕೋರ್ಸ್‍ಗಳ ವಿದ್ಯಾರ್ಥಿಗಳನ್ನು ಸಮಾಜ ನಿಷ್ಪ್ರಯೋಜಕರು ಎನ್ನುವ ರೀತಿ ನೋಡುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳು ಹಾಗೂ ಬ್ಯಾಂಕಿಂಗ್ ವಲಯ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಸ್ಥಾನಕ್ಕೇರುವ ಅವಕಾಶವಿದೆ ಎಂದು ಸಲಹೆ ಮಾಡಿದರು.ತಾಳ್ಮೆ, ಛಲ ಮತ್ತು ಸಾಮಥ್ರ್ಯ ಇದ್ದರೆ ಮನೆಯಲ್ಲೇ ಕುಳಿತು ಓದಿ ಐಎಎಸ್ ಪಾಸು ಮಾಡಬಹುದು. ಯಶಸ್ಸಿನಲ್ಲಿ ಶ್ರಮದ ಪಾಲು ಶೇಕಡ 95 ರಷ್ಟಿರುತ್ತದೆ. ಅದೃಷ್ಟದ ಪಾಲು ಶೇ.5ರಷ್ಟು ಮಾತ್ರ ಎಂದು ಕಿವಿಮಾತು ಹೇಳಿದರು.ಓದುವ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಅನುಸರಿಸಿ, ಸ್ವಂತ ಟಿಪ್ಪಣಿ ಮಾಡಿಕೊಳ್ಳಿ, ನಿತ್ಯ ಕನಿಷ್ಠ 3 ದಿನಪತ್ರಿಕೆಗಳನ್ನು ಓದಿ, ಭೂಪಟಗಳ ಮೇಲೆ ಕಣ್ಣಾಡಿಸಿ ದೇಶ-ಪ್ರದೇಶಗಳ ಬಗ್ಗೆ ತಿಳಿಯಿರಿ, ಪ್ರಸಕ್ತ ವಿದ್ಯಮಾನಗಳ ಚರ್ಚೆಗಳನ್ನು ಗಮನಿಸಿ, ಆತ್ಮವಿಸ್ವಾಸ ಬೆಳೆಸಿಕೊಳ್ಳಿ ಎಂದು ಸಲಹೆ ಮಾಡಿದರು.

ಶ್ರೀ ಆದಿಚುಂಚನಗಿರಿಯ ಹಾಸನ ಶಾಖಾ ಮಠದ ಶ್ರೀೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕೆಂದೇ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳನ್ನು ತೆರೆದಿದ್ದಾರೆ. ಅದರ ಸದುಪಯೋಗಪಡೆದುಕೊಂಡು ಬದುಕಿನಲ್ಲಿ ಉನ್ನತ ಸ್ಥಾನಕ್ಕೇರಿ ಎಂದು ಶುಭ ಹಾರೈಸಿದರು. ಬಿಜಿಎಸ್ ಸ್ಟಡಿ ಸೆಂಟರ್ ನಿರ್ದೇಶಕ ಡಾ. ಹೆಚ್.ಕೆ. ಕುಶಾಲಪ್ಪ ಸ್ವಾಗತಿಸಿದರು. ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಕರಿಸಿದ್ದಪ್ಪ ದಂಪತಿಯನ್ನು ಶ್ರೀ ಮಠದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.ಶಾಸಕ ಹೆಚ್.ಎಸ್. ಪ್ರಕಾಶ್ , ಹಾಸನ ಉಪವಿಭಾಗಾಧಿಕಾರಿ ಡಾ. ಹೆಚ್.ಎಲ್. ನಾಗರಾಜ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಮೊಹಮದ್ ರೋಷನ್, ಮೈಸೂರು ಕಾವೇರಿ ನೀರಾವರಿ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಡಿ. ರವಿಕುಮಾರ್, ಚಿಕ್ಕಮಗಳೂರು ಕಾರ್ಪೋರೇಶನ್  ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಆರ್.ಕೆ. ಬಾಲಚಂದ್ರ, ಚಿಕ್ಕಮಗಳೂರು ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ಬರಾಯ ಭಾಗವಹಿಸಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin