ನಿಲ್ಲದ ಮುನಿರತ್ನ-ಪಾಲಿಕೆ ಸದಸ್ಯರ ಮುಸುಕಿನ ಗುದ್ದಾಟ, ಸಂಧಾನಕ್ಕೆ ಜಾರ್ಜ್ ನಿರಾಸಕ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Drinking

ಬೆಂಗಳೂರು, ಜು.11- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಹಾಗೂ ಮೂವರು ಮಹಿಳಾ ಪಾಲಿಕೆ ಸದಸ್ಯರ ಮುಸುಕಿನ ಗುದ್ದಾಟ ಮುಂದುವರೆದಿದ್ದು, ರಾಜಿ ಮಾಡಲು ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೇ ಮನಸ್ಸಿಲ್ಲದಂತಾಗಿದೆ. ಕಳೆದ ಒಂದು ವರ್ಷದಿಂದ ಮಹಿಳಾ ಕಾರ್ಪೊರೇಟರ್ ಹಾಗೂ ಶಾಸಕರ ನಡುವಿನ ಶೀತಲ ಸಮರ ನಡೆದೇ ಇತ್ತು. ಕಳೆದ ಎರಡು ಪಾಲಿಕೆಯ ಮಾಸಿಕ ಸಭೆಯಲ್ಲಿ ಇದು ಉಲ್ಬಣಗೊಂಡು ತಾರಕೆಕ್ಕೇರಿತ್ತು.
ಮೂವರು ಮಹಿಳಾ ಸದಸ್ಯರಾದ ಆಶಾ ಸುರೇಶ್, ಮಮತಾವಾಸುದೇವ್, ಮಂಜುಳಾ ನಾರಾಯಣಸ್ವಾಮಿ ಅವರು ಎರಡು ಪಾಲಿಕೆ ಸಭೆಗಳಲ್ಲಿ ತಮ್ಮ ಕ್ಷೇತ್ರದ ಶಾಸಕರ ವಿರುದ್ಧ ದನಿ ಎತ್ತಿ ಪ್ರತಿಭಟನೆ ಮಾಡಿದ್ದರು.

ತೀವ್ರ ಸ್ವರೂಪ ಪಡೆದ ಪ್ರತಿಭಟನೆಯಲ್ಲಿ ಫೆನಾಯಿಲ್‍ಕುಡಿದು ಆತ್ಮಹತ್ಯೆಯಂತಹ ಪ್ರಹಸನ ಕೂಡ ನಡೆದಿತ್ತು. ಕ್ಷೇತ್ರದಲ್ಲಿ ಕಾರ್ಪೊರೇಟರ್ ಗಳಾಗಿರುವ ನಮಗೆ ಯಾವುದೇ ಬೆಲೆ ಇಲ್ಲದಂತೆ ಶಾಸಕರು ಮಾಡಿದ್ದಾರೆ. ಸೋತವರಿಗೆ ಮನ್ನಣೆ ನೀಡುತ್ತಿದ್ದಾರೆ. ವಿನಾಕಾರಣ ನಮ್ಮ ಮೇಲೆ ದೂರುಗಳನ್ನು ದಾಖಲಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಯಾವುದೇ ಕಾಮಗಾರಿಗಳನ್ನು ನಮ್ಮ ವಾರ್ಡ್‍ನಲ್ಲಿ ನಡೆಸಲು ಬಿಡುತ್ತಿಲ್ಲ. ಜನಪ್ರತಿನಿಧಿಗಳಾಗಿರುವ ನಮ್ಮ ಫೋಟೋಗಳನ್ನು ಹಾಕಲು ಬಿಡುತ್ತಿಲ್ಲ. ನಮ್ಮನ್ನು ಸಾಯಲು ಬಿಡಿ ಎಂದು ಮಾಸಿಕ ಸಭೆಯಲ್ಲಿ ಈ ಮೂವರು ಕಾರ್ಪೊರೇಟ್ ಗಳು ತಮ್ಮ ಅಳಲು ತೋಡಿಕೊಂಡಿದ್ದರು.

ಇವರ ಬೆಂಬಲಕ್ಕೆ ನಿಂತ ಜೆಡಿಎಸ್, ಬಿಜೆಪಿ ಸದಸ್ಯರು ಸಭೆಯಲ್ಲಿ ತೀವ್ರ ಪ್ರತಿಭಟನೆ ನಡೆಸಿದರು. ಪಾಲಿಕೆಯ ಒಳಗೂ, ಹೊರಗೂ ಪ್ರತಿಭಟನೆ ನಡೆದಿತ್ತು. ಶಾಸಕರು ಮತ್ತು ಪಾಲಿಕೆಯ ಸದಸ್ಯರ ನಡುವೆ ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಮೇಯರ್ ಜಿ.ಪದ್ಮಾವತಿ ಅವರು ನೀಡಿದ್ದರು. ರಾಜೀಸಂಧಾನದ ಸಭೆ ನಡೆಸುವ ಮನಸ್ಸು ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್ ಅವರಿಗೆ ಇದ್ದಂತಿಲ್ಲ. ಜೂನ್ ತಿಂಗಳಾಂತ್ಯದಲ್ಲಿ ಮಾಸಿಕ ಸಭೆ ನಡೆದ ಸಂದರ್ಭದಲ್ಲಿ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದ್ದರಾದರೂ ಈವರೆಗೆ ಅಂತಹ ಮಾತುಕತೆ ನಡೆದಿಲ್ಲ.

ಸಧ್ಯದಲ್ಲೇ ನಡೆಯಲಿರುವ ಪಾಲಿಕೆ ಸಭೆಯಲ್ಲಿ ಮತ್ತೆ ಗಲಾಟೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಕುಡಿಯುವ ನೀರು, ಮೂಲಭೂತ ಸೌಕರ್ಯಗಳು, ಸಂಪನ್ಮೂಲ ಕ್ರೂಢೀಕರಣ, ಸ್ವಚ್ಛತೆ, ರಸ್ತೆಗಳ ಅಭಿವೃದ್ಧಿಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಬೇಕು. ಆದರೆ, ಕಳೆದ ಎರಡೂ ಸಭೆಗಳಲ್ಲಿ ರಾಜರಾಜೇಶ್ವರಿನಗರದ ಶಾಸಕರು ಮತ್ತು ಮೂವರು ಮಹಿಳಾ ಕಾರ್ಪೊರೇಟರ್ ಗಳ ಸಮಸ್ಯೆಯೇ ಪ್ರಧಾನವಾಗಿ ಚರ್ಚೆಯಾಗಿದೆ. ನಗರದ ಒಂದು ಸಮಸ್ಯೆ ಬಗ್ಗೆಯೂ ಚರ್ಚೆಯಾಗಿಲ್ಲ. ಈ ಬಾರಿಯೂ ಅದೇ ರಗಳೇ ಮುಂದುವರೆಯುವ ಸಾಧ್ಯತೆ ಇದೆ.

ಮಹಿಳಾ ಕಾರ್ಪೊರೇಟರ್ ಗಳ ಮೇಲೆ ದೂರು ದಾಖಲಾಗಿದೆ. ರಾಜೀ ಸಂಧಾನವಾದರೆ ದೂರುಗಳನ್ನು ಹಿಂತೆಗೆದುಕೊಳ್ಳಬೇಕು. ಅದಕ್ಕೆ ಶಾಸಕರು ಒಪ್ಪಿದಂತಿಲ್ಲ. ಇದಾಗದಿದ್ದರೆ ಉಸ್ತುವಾರಿ ಸಚಿವರು ಮಾತುಕತೆ ನಡೆಸುವ ಸಾಧ್ಯತೆ ಇಲ್ಲ. ಹಾವು ಸಾಯದ ಕೋಲು ಮುರಿಯದ ಪರಿಸ್ಥಿತಿಯಂತಾಗಿದೆ. ಒಟ್ಟಾರೆ ಬಿಬಿಎಂಪಿ ಎರಡೂ ಸಭೆಗಳು ಒಂದು ಕ್ಷೇತ್ರದ ಶಾಸಕರು, ಮೂವರು ಪಾಲಿಕೆ ಸದಸ್ಯರ ಪ್ರತಿಷ್ಠೆಗೆ ಹಾಳಾಗಿದೆ. ಮೂರನೆ ಸಭೆಯೂ ಕೂಡ ಅದೇ ಹಾದಿ ಹಿಡಿಯುವ ಸಾಧ್ಯತೆ ಇದೆ. ಜವಾಬ್ದಾರಿಯುತ ಜನಪ್ರತಿನಿಧಿಗಳು, ಅಧಿಕಾರ ಗದ್ದುಗೆ ಹಿಡಿದಿರುವವರು ಈ ಸಮಸ್ಯೆಗೆ ಇತಿಶ್ರೀ ಹಾಡಿ ನಗರದ ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾ ಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin