ನಿವೃತ್ತ ಕ್ರಿಕೆಟಿಗ ಆದಿಶೇಷ್ ಅಗಲಿಕೆಗೆ ಸಂತಾಪ

ಈ ಸುದ್ದಿಯನ್ನು ಶೇರ್ ಮಾಡಿ

LT-Adhishesha

ಚನ್ನಪಟ್ಟಣ, ನ.25- ಆಲ್‍ರೌಂಡ್ ಆಟಗಾರರಾಗಿ ಕರ್ನಾಟಕ ಹಾಗೂ ದಕ್ಷಿಣ ವಲಯ ತಂಡವನ್ನು ಪ್ರತಿನಿಧಿಸುತ್ತಿದ್ದ ಖ್ಯಾತ ನಿವೃತ್ತ ಕ್ರಿಕೆಟಿಗ ಎಲ್.ಟಿ.ಆದಿಶೇಷ ಅವರು ಇಂಗ್ಲೆಂಡ್‍ನ ಲಿವರ್‍ಪೂಲ್‍ನ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದು, ಚನ್ನಪಟ್ಟಣದ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಮೂಲತಃ ಮದ್ದೂರು ತಾಲ್ಲೂಕು ದೇಶಹಳ್ಳಿ ಮೂಲದವರಾದ ಕಲ್ಯಾಣಮ್ಮನವರ ಸುಪುತ್ರ ಆದಿಶೇಷ ಅವರು ತಾಲ್ಲೂಕಿನ ಹೆಸರಾಂತ ಜಮೀನುದಾರರಾದ ಚಿಕ್ಕಮಳೂರು ಪುಟ್ಟಸ್ವಾಮಿಗೌಡರ ಪುತ್ರ ಸಿ.ಚೂಡಯ್ಯನವರ ಪತ್ನಿ ದಿ.ಮಾಲತಿಯವರ ಖಾಸ ಸೋದರರಾಗಿದ್ದರು.

ಮಧ್ಯಮ ಹಂತದ ಬ್ಯಾಟ್ಸ್‍ಮನ್‍ರಾಗಿ, ಆಲ್‍ರೌಂಡರ್ ಆಗಿಯೂ ಕರ್ನಾಟಕ ರಣಜಿ ತಂಡವನ್ನು ಪ್ರತಿನಿಧಿಸುತ್ತಿದ್ದ ಆದಿಶೇಷ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಆಡಿದಂತಹ 18 ಪ್ರಥಮದರ್ಜೆಯ ಕ್ರಿಕೆಟ್ ಪಂದ್ಯಗಳಲ್ಲಿ 990 ರನ್‍ಗಳನ್ನು ಸರಾಸರಿ 38.07ರಷ್ಟು ಅನುಪಾತದಲ್ಲಿ ಹಾಗೂ ವೇಗದ ಬೌಲರ್ ಆಗಿ 23 ವಿಕೆಟ್‍ಗಳನ್ನು ಗಳಿಸಿದ್ದ ಹಿನ್ನೆಲೆ ಹೊಂದಿದ್ದರು.
ಕ್ರಿಕೆಟ್ ಜೀವನದ ಸಹ ಆಟಗಾರರಾಗಿದ್ದ ಖಾಸಾ ಸೋದರ ಎಲ್.ಟಿ. ಸುಬ್ಬು ಹಾಗೂ ಕಸ್ತೂರಿ ರಂಗನ್ ಅವರೊಂದಿಗೆ ದಕ್ಷಿಣ ವಲಯವನ್ನು ಪ್ರತಿನಿಧಿಸುತ್ತಿದ್ದ ಆದಿಶೇಷ ಅವರ ಈ ತ್ರಿಮೂರ್ತಿಗಳ ತಂಡ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಪಶ್ಚಿಮ ವಲಯದ ಆಟಗಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಿ ದಕ್ಷಿಣ ವಲಯದ ಕೇವಲ ನಾಲ್ವರು ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಿದ್ದನ್ನು ವಿರೋಧಿಸಿ ವಿಂಡೀಸ್ ಪ್ರವಾಸವನ್ನು ಧಿಕ್ಕರಿಸಿದ್ದರು.

ಇಂಗ್ಲೆಂಡ್‍ನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿ, ನಂತರ ಅಲ್ಲಿಯ ಬ್ರಿಟಿಷ್ ಮೆಡಿಕಲ್ ಕೌನ್ಸಿಲ್‍ನ ವೈದ್ಯರಾಗಿಯೂ ಸೇವೆ ಸಲ್ಲಿಸಿದ್ದ ಆದಿಶೇಷ ಅವರಿಗೆ ಗೌರವ ಸೂಚಕವಾಗಿ ಅವರ ಪಾರ್ಥಿವ ಶರೀರವನ್ನು ಲಿವರ್‍ಪೂಲ್ ಕ್ರಿಕೆಟ್ ಕ್ಲಬ್ ತಮ್ಮ ಸಂಸ್ಥೆಯಲ್ಲಿ ಇರಿಸಿದ್ದು, ಇದೇ 29ರಂದು ಅಂತ್ಯಕ್ರಿಯೆ ನಡೆಯಲಿದೆ. ಆದಿಶೇಷ ಅವರ ನಿಧನಕ್ಕೆ ಚನ್ನಪಟ್ಟಣ ಸ್ಪೋಟ್ರ್ಸ್ ಅಂಡ್ ಕಲ್ಚರ್ ಕ್ಲಬ್ ಕಾರ್ಯದರ್ಶಿ ಸಿ.ಅಜಯ್‍ಕುಮಾರ್, ಆದಿಶೇಷ ಅವರ ಅಪಾರವಾದ ಸ್ಥಳೀಯ ಅಭಿಮಾನಿಗಳು, ಜಮೀನ್‍ದಾರ್ ಸಿ.ಚೂಡಯ್ಯ ಮತ್ತು ಕುಟುಂಬ ವರ್ಗದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin