ನಿಷೇಧಿತ ನೋಟುಗಳ ಬದಲಾವಣೆಗೆ ಸಂಚು ರೂಪಿಸುತ್ತಿದ್ದ ಐವರು ಅರೆಸ್ಟ್, 2.3 ಕೋಟಿ ರೂ.ವಶ

ಈ ಸುದ್ದಿಯನ್ನು ಶೇರ್ ಮಾಡಿ

Old-Notes--01

ಬೆಂಗಳೂರು, ಫೆ.28- ಅಮಾನ್ಯಗೊಂಡ ನೋಟುಗಳನ್ನು ಬದಲಾವಣೆ ಮಾಡಲು ಸಂಚು ರೂಪಿಸುತ್ತಿದ್ದ 11 ಮಂದಿಯ ಪೈಕಿ 5 ಮಂದಿಯನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿ 2.3 ಕೋಟಿ ರೂ. ಹಳೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಜಯಕುಮಾರ್ (36), ಅಮ್ಜದ್‍ಪಾಷ (20), ಸಚಿನ್ (29), ಶಶಿಕುಮಾರ್ (28) ಮತ್ತು ಮಂಗಳೂರು ಮೂಲದ ಶರತ್ (30) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಸಯ್ಯದ್ ಸಮೀರ್, ಆನಂದ್, ನದೀಂ, ಶಹನಾಜ್, ರಮೇಶ್, ಸತೀಶ್ ಬಂಧನಕ್ಕೆ ತನಿಖೆ ಮುಂದುವರಿದಿದೆ.

ಫೆ.23ರಂದು ಸಂಜೆ 4.30ರಲ್ಲಿ ಕೆ.ನಾರಾಯಣಪುರ ರಸ್ತೆ, ಗೋಲ್ಡನ್ ಫಾಮ್ ಅಪಾರ್ಟ್‍ಮೆಂಟ್ ಮುಂಭಾಗದಲ್ಲಿರುವ ಮರದ ಬಳಿ ನಾಲ್ಕೈದು ಮಂದಿಯ ಗುಂಪು ಕಾರಿನಲ್ಲಿ ಕುಳಿತುಕೊಂಡು ಅಮಾನ್ಯಗೊಂಡಿರುವ ಹಳೆಯ ನೋಟುಗಳನ್ನು ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆಸುತ್ತಿದ್ದರು.
ಈ ಬಗ್ಗೆ ಕೊತ್ತನೂರು ಠಾಣೆ ಇನ್ಸ್‍ಪೆಕ್ಟರ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ಮಾಡಿ 5 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ ಸಯದ್ ಸಮೀರ್ ಅಮಾನ್ಯಗೊಂಡಿರುವ ಹಳೆ ನೋಟುಗಳನ್ನು ತಂದುಕೊಟ್ಟರೆ ಎನ್‍ಆರ್‍ಐಗಳಿಂದ ಶೇ.80ರಷ್ಟು ಹೊಸ ನೋಟುಗಳನ್ನು ಕೊಡಿಸುತ್ತೇನೆ ಎಂದು ತಿಳಿಸಿದ್ದರಿಂದ ಜಯಕುಮಾರ್ 2 ಕೋಟಿಯಷ್ಟು ಹಳೆ ನೋಟುಗಳು ಬೇಕು ಎಂದು ತನ್ನ ಸ್ನೇಹಿತ ಅಮ್ಜದ್‍ಪಾಷನಿಗೆ ಕೇಳಿದ್ದು, ಈತನು ಸಚಿನ್ ಎಂಬಾತ ನಾಗರಬಾವಿಯಲ್ಲಿ ಹಳೆ ನೋಟುಗಳನ್ನು ಎಕ್ಸ್‍ಚೇಂಜ್ ಮಾಡುವ ವ್ಯವಹಾರ ಮಾಡುತ್ತಿರುವ ಬಗ್ಗೆ ಹೇಳಿದ್ದಾನೆ.
ಆರೋಪಿ ಸಯ್ಯದ್ ಸಮೀರ್ ಜಯಕುಮಾರ್‍ನನ್ನುಸಚಿನ್ ಬಳಿಗೆ ಕರೆದುಕೊಂಡು ಹೋಗಿ 2 ಕೋಟಿಗೂ ಹೆಚ್ಚು ಹಳೆ ನೋಟುಗಳಿಗೆ ಬೇಡಿಕೆ ಇಟ್ಟಿದ್ದನು.
ಕಮಿಷನ್ ಆಸೆಯಿಂದ ಸಚಿನ್ ತನಗೆ ಪರಿಚಯವಿರುವ ನದೀಂ, ಶಹನಾಜ್, ರಮೇಶ್ ಮತ್ತು ಸತೀಶ್ ಎಂಬುವರಿಂದ ಫ್ರೇಜರ್‍ಟೌನ್ ಮತ್ತು ಮಂಗಳೂರಿನಿಂದ 1.7 ಕೋಟಿ ಹಳೆ ನೋಟುಗಳನ್ನು ತರಿಸಿಕೊಂಡು ಇದರೊಂದಿಗೆ ತನ್ನ ಬಳಿ ಇದ್ದ 50 ಲಕ್ಷ ರೂ. ಹಳೆ ನೋಟುಗಳನ್ನು ಸೇರಿಸಿ ಒಟ್ಟು 2.2 ಕೋಟಿ ಹಣವನ್ನು ಜಯಕುಮಾರ್‍ಗೆ 26 ಲಕ್ಷ ರೂ.ಗೆ ಮಾರಾಟ ಮಾಡಿದ್ದನು.

ತದನಂತರ ಆರೋಪಿ ಜಯಕುಮಾರ್ ಈ ಹಣವನ್ನು ಸಯ್ಯದ್ ಸಮೀರ್‍ಗೆ ಕೊಡಲು ಸಹಚರರಾದ ಆನಂದ್, ಶಶಿಕುಮಾರ್ ಮತ್ತು ಶರತ್‍ನೊಂದಿಗೆ ಈಟಿಯೋಸ್ ಕಾರಿನಲ್ಲಿ ಬಂದು ಕೊತ್ತನೂರು ವ್ಯಾಪ್ತಿಯ ಕೆ.ನಾರಾಯಣಪುರದಲ್ಲಿರುವ ಗೋಲ್ಡನ್ ಫಾರ್ಮ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಾಗಿದ್ದ ಸಯ್ಯದ್ ಸಮೀರ್‍ಗೆ ಕೊಟ್ಟಿದ್ದರು. ತದನಂತರ ಈ ಹಣವನ್ನು ಬದಲಾವಣೆ ಮಾಡಲು ಸಂಚು ರೂಪಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ದಾಳಿ ವೇಳೆ ಸಯ್ಯದ್ ಸಮೀರ್ ಮನೆಯಲ್ಲಿದ್ದ 1.93 ಕೋಟಿ ಹಳೆ ನೋಟುಗಳು ಹಾಗೂ 10 ಲಕ್ಷ ಹಳೆಯ ನೋಟುಗಳನ್ನು ನಾಗರಬಾವಿಯಲ್ಲಿರುವ ಆರೋಪಿ ಸಚಿನ್‍ರ ರಿಯಲ್ ಎಸ್ಟೇಟ್ ಕಚೇರಿಯಲ್ಲಿ ವಶಪಡಿಸಿಕೊಂಡಿದ್ದು, ಒಟ್ಟು 2.3 ಕೋಟಿ ಹಳೆ ನೋಟುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಲದೆ, ಹಣ ಎಣಿಸುವ ಮೆಷಿನ್, ಕಾರು, ಬೈಕ್ ಹಾಗೂ ವಿವಿಧ ಕಂಪೆನಿಯ ಆರು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ನಿರ್ದೇಶನದಲ್ಲಿ ಉಪ ಪೊಲೀಸ್ ಆಯುಕ್ತ ಗಿರೀಶ್ ಮಾರ್ಗದರ್ಶನದಲ್ಲಿ ಕೊತ್ತನೂರು ಠಾಣೆ ಇನ್ಸ್‍ಪೆಕ್ಟರ್ ಹರಿಯಪ್ಪ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ನಡೆಸುವಲ್ಲಿ ಯಶಸ್ವಿಯಾಗಿದೆ.

Facebook Comments

Sri Raghav

Admin