‘ನೀನೇ ಜಯಲಲಿತಾರನ್ನು ಕೊಂದ ಕೊಲೆಪಾತಕಿ, ನೀನು ಪ್ರಾಯಶ್ಚಿತ್ತ ಅನುಭವಿಸಲೇಬೇಕು..”

ಈ ಸುದ್ದಿಯನ್ನು ಶೇರ್ ಮಾಡಿ

Sasikala--01

ಬೆಂಗಳೂರು, ಮಾ.23-ಜಯಲಲಿತಾ ಕೊಲೆಗೆ ನೀನೇ ಕಾರಣ. ನೀನು ಸಂಚು ಮಾಡಿ ಅವರನ್ನು ಕೊಲೆ ಮಾಡಿರುವೆ.. ನೀನು ಮಾಡಿದ ಪಾಪದ ಕೆಲಸಕ್ಕಾಗಿ ಅಣು ಅಣುವಾಗಿ ಹಿಂಸೆ ಅನುಭವಿಸುವೆ. ನೀನು ಪ್ರಾಯಶ್ಚಿತ್ತ ಅನುಭವಿಸಲೇ ಬೇಕು-ಇದು ಜೈಲಿನಲ್ಲಿರುವ ಜಯಾರ ಪರಮಾಪ್ತೆ ವಿ.ಕೆ.ಶಶಿಕಲಾ ಅವರಿಗೆ ತಮಿಳುನಾಡಿನಿಂದ ಬರೆದಿರುವ 100ಕ್ಕೂ ಹೆಚ್ಚು ಪತ್ರಗಳ ಸಾರಾಂಶ…! ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‍ನಿಂದ 4 ವರ್ಷಗಳ ಶಿಕ್ಷೆಗೆ  ಗುರಿಯಾಗಿ ಫೆ.14ರಿಂದ ಬೆಂಗಳೂರು ಹೊರವಲಯದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಎಐಎಡಿಎಂಕೆ ಮಾಜಿ ಅಧಿನಾಯಕಿ ಶಶಿಕಲಾ ಅವರಿಗೆ ತಮಿಳುನಾಡಿನ ವಿವಿಧೆಡೆಯಿಂದ ಈವರೆಗೆ 100ಕ್ಕೂ ಹೆಚ್ಚು ಪತ್ರಗಳು ಬಂದಿವೆ. ಇದರಲ್ಲಿ ಬಹುತೇಕ ಪತ್ರಗಳಲ್ಲಿ ಚಿನ್ನಮ್ಮ ವಿರುದ್ಧ ಆಕ್ರೋಶಗಳು ವ್ಯಕ್ತವಾಗಿವೆ ಎಂದು ಬಂದೀಖಾನೆಯ ಮೂಲಗಳು ತಿಳಿಸಿವೆ.

ಶಶಿಕಲಾ, ಸೆಂಟ್ರಲ್ ಜೈಲ್, ಪರಪ್ಪನ ಅಗ್ರಹಾರ, ಬೆಂಗಳೂರು-560100 ಈ ವಿಳಾಸಕ್ಕೆ ಫೆ.15ರಿಂದ ಅನೇಕ ಪತ್ರಗಳು ಬಂದಿವೆ.   ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಪುರುಚ್ಚಿ ತಲೈವಿ ಅವರನ್ನು ಕೊಲ್ಲಲ್ಲು ನೀನು ಕುತಂತ್ರ ರೂಪಿಸಿದೆ. ಜಯಾ ಅವರು ಮೃತಪಡಲು ಕಾರಣವೇ ಇರಲಿಲ್ಲ. ಆದರೆ ನೀನು ಸಂಚು ಮಾಡಿ ಆಕೆಯನ್ನು ಕೊಂದೆ ಎಂಬುದು ಬಹುತೇಕ ಪತ್ರಗಳ ಒಕ್ಕಣೆಯಾಗಿದೆ ಎಂದು ಮೂಲಗಳು ಹೇಳಿವೆ.

ನಮಗೆ ಅಮ್ಮನ ಸಮಾನರಾಗಿದ್ದ ತಲೈವಿಯನ್ನು ನೀನೇ ಕೊಂದು ಹಾಕಿದೆ. ನೀನು ಅವಿಧೇಯ ಮತ್ತು ನಂಬಿಕೆ ಅರ್ಹವಲ್ಲದ ಹೆಣ್ಣು. ಬೆನ್ನಿಗೆ ಚೂರಿ ಹಾಕುವ ದುಷ್ಟ ನಾರಿ. ನಿನಗೆ ಒಳ್ಳೆಯ ಬದುಕು ಕೊಟ್ಟ ಅಮ್ಮನಿಗೆ ದ್ರೋಹ ಬಗೆದೆ. ನೆನಪಿಡು.. ನೀನು ಮಾಡಿದ ಪಾಪದ ಕೆಲಸಗಳಿಗೆ ಅಣು ಅಣುವಾಗಿ ಚಿತ್ರಹಿಂಸೆ ಅನುಭವಿಸುವೆ. ನೀನು ಮಾಡಿದ ಪಾಪ ಕಾರ್ಯಗಳಿಗೆ ಪ್ರಾಯಶ್ಚಿತ್ತ ಅನುಭವಿಸಬೇಕು. ಅದಕ್ಕೆ ತಕ್ಕ ಬೆಲೆ ತೆರಬೇಕು ಎಂದು ಪತ್ರಗಳಲ್ಲಿ ಚಿನ್ನಮ್ಮನ ಬಗ್ಗೆ ಕೆಂಡಕಾರಲಾಗಿದೆ ಎಂದು ಪತ್ರದ ಸಾರಂಶಗಳನ್ನು ಉಲ್ಲೇಖಿಸಿ ಬಂಧೀಖಾನೆ ಮೂಲಗಳು ತಿಳಿಸಿವೆ.

ಇದರಲ್ಲಿ ಕೆಲವು ಪತ್ರಗಳು ವೈಯಕ್ತಿಕವಾಗಿವೆ ಮತ್ತು ಇನ್ನು ಹಲವು ರಾಜಕೀಯ ಸ್ವರೂಪದ್ದಾಗಿದ್ದರೂ, ಅದರಲ್ಲಿ ಶಶಿಕಲಾ ಅವರಿಗೆ ಬೆದರಿಕೆ ಹಾಕುವ ಅಂಶಗಳು ಪತ್ತೆಯಾಗಿಲ್ಲ. ಶಶಿಕಲಾರ ಒಡನಾಡಿ ಇಳವರಿಸಿ ಕೆಲವು ಪತ್ರಗಳನ್ನು ಓದಿ, ಕೆಟ್ಟ ಬೈಗುಳಗಳಿರುವ ಓಲೆಗಳನ್ನು ಹರಿದು ಹಾಕಿದ್ದಾರೆ ಎನ್ನಲಾಗಿದೆ.
ಆರಂಭದಲ್ಲಿ ಶಶಿ ತಮ್ಮ ಹೆಸರಿಗೆ ಬಂದ ಪತ್ರಗಳನ್ನು ಬಹು ಆಸಕ್ತಿಯಿಂದ ಒದುತ್ತಿದ್ದರು. ಆದರೆ ಕ್ರಮೇಣ ದ್ವೇಷದ ಪತ್ರಗಳ ಪ್ರವಾಹ ಹರಿದು ಬರುತ್ತಿದ್ದಂತೆ ಓದುವುದನ್ನು ನಿಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.  ತಮಿಳುನಾಡಿನ ಚೆನ್ನೈ, ಸೇಲಂ, ಧರ್ಮಪುರಿ, ಮಧುರೈ, ದಿಂಡಿಗಲ್, ಕರೂರು, ತಿರುಚಿರಾಪಲ್ಲಿ, ವಿಳ್ಳುಪುರಂ ಮೊದಲಾದ ಜಿಲ್ಲೆಗಳಿಂದ ಶಶಿಕಲಾರಿಗೆ ಪತ್ರಗಳು ಬಂದಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin