ನೀನ್ಯಾರು ನಮ್ಮನ್ನು ತಡೆಯೋಕೆ..?:ಕುಡಿದ ಮತ್ತಿನಲ್ಲಿ ಹೆಡ್ಕಾನ್ಸ್ಟೇಬಲ್ ಮೇಲೆ ಯುವಕರು ಹಲ್ಲೆ..!
ಚಿಕ್ಕಬಳ್ಳಾಪುರ, ನ.17- ಪೊಲೀಸ್ ಠಾಣೆ ಮುಂಭಾಗದಲ್ಲೇ ಹೆಡ್ಕಾನ್ಸ್ಟೇಬಲ್ ಮೇಲೆ ಕುಡಿದ ಮತ್ತಿನಲ್ಲಿದ್ದ ಯುವಕರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ನಂದಿಗಿರಿಧಾಮದಲ್ಲಿ ನಡೆದಿದೆ.ನಂದಿಗಿರಿಧಾಮ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಪೆಂಚಾಲಯ್ಯ ಕುಡುಕರಿಂದ ಹಲ್ಲೆಗೊಳಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕರ್ತವ್ಯ ನಿರತ ಪೊಲೀಸಪ್ಪನ ಮೇಲೆ ಹಲ್ಲೆ ನಡೆಸಿದ ನಂದಿಗ್ರಾಮದ ಯುವಕರಾದ ನವೀನ್, ಸುರೇಶ್, ಅಶೋಕ್ ಮತ್ತು ವಿನಯ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ನಡೆದದ್ದೇನು: ನಿನ್ನೆ ರಾತ್ರಿ 9.15ರ ಸುಮಾರಿನಲ್ಲಿ ನಂದಿಗ್ರಾಮದವರೇ ಆದ ನವೀನ್, ಸುರೇಶ್, ಅಶೋಕ್, ವಿನಯ್ ಅವರು ಪೊಲೀಸ್ ಠಾಣೆ ಸಮೀಪದಲ್ಲೇ ತಮ್ಮ ಕೆಎ-40 ಎಂ 2879 ಕಾರು ನಿಲ್ಲಿಸಿಕೊಂಡು ಕುಡಿದು ಮೋಜು ಮಸ್ತಿ ನಡೆಸುತ್ತಿದ್ದರು. ಮಾತ್ರವಲ್ಲ ಕಾರಿನ ಲೈಟನ್ನು ಡಿಮ್ ಅಂಡ್ ಡಿಪ್ ಮಾಡುತ್ತಾ ಕಾಲಹರಣ ಮಾಡುತ್ತಿದ್ದರು.ಠಾಣೆಯಲ್ಲಿದ್ದ ಹೆಡ್ಕಾನ್ಸ್ಟೇಬಲ್ ಪೆಂಚಾಲಯ್ಯ ಅವರ ಬಳಿಗೆ ತೆರಳಿ ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿ ಮಾಡಬಾರದು. ಮನೆಗೆ ತೆರಳಿ ಎಂದು ಬುದ್ಧಿವಾದ ಹೇಳಿ ಕಳುಹಿಸಲು ಯತ್ನಿಸಿದರು. ಆದರೆ ಕುಡಿದ ಮತ್ತಿನಲ್ಲಿದ್ದ ಯುವಕರು ಪೊಲೀಸಪ್ಪನ ಬುದ್ದಿ ಮಾತನ್ನು ಕೇಳಿಸಿಕೊಳ್ಳದೆ ನೀನ್ಯಾರು ನಮ್ಮನ್ನು ತಡೆಯೋಕೆ ಎಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ.ಪೊಲೀಸಪ್ಪನ ಎದೆಗೆ ಮತ್ತು ತಲೆಗೆ ಮನ ಬಂದಂತೆ ಥಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಸತ್ಯನಾರಾಯಣ್ ಅವರು ಪೆಂಚಾಲಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಕುಡಿದ ಮತ್ತಿನಲ್ಲಿದ್ದ ನಾಲ್ವರು ದುರುಳರನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.
► Follow us on – Facebook / Twitter / Google+