ನೀರಿಕ್ಷಿತ ಫಲ ನೀಡದ ಬೆಳಗಾವಿ ಚಳಿಗಾಲದ ಅಧಿವೇಶನ

ಈ ಸುದ್ದಿಯನ್ನು ಶೇರ್ ಮಾಡಿ

Session

-ರವೀಂದ್ರ ವೈ.ಎಸ್.

ಬೆಳಗಾವಿ, ನ.29- ನಾಡಿನ ಅನ್ನದಾತನ ಸಮಸ್ಯೆಗಳು ನಿವಾರಣೆಯಾಗಬಹುದೆಂಬ ನಿರೀಕ್ಷೆಯೊಂದಿಗೆ ಆರಂಭವಾಗಿದ್ದ ಬೆಳಗಾವಿ ಅಧಿವೇಶನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಕಳೆದ ಸೋಮವಾರದಿಂದ ಆರಂಭವಾದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ಪರಿಹಾರ ಘೋಷಣೆ ಮಾಡದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಮುಖವಾಗಿ ರೈತರ ಸಾಲ ಮನ್ನಾ, ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥ, ತೊಗರಿ, ರಾಗಿ, ಭತ್ತ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ, ಮಹದಾಯಿ ನದಿ ನೀರು ಹಂಚಿಕೆ ವಿವಾದ ಸೇರಿದಂತೆ ಪ್ರಮುಖ ಸಮಸ್ಯೆಗಳಿಗೆ ಉತ್ತರ ಸಿಗಬಹುದೆಂಬ ನಿರೀಕ್ಷೆ ದಿನದಿಂದ ದಿನಕ್ಕೆ ಕಾರ್ಮೋಡದಂತೆ ಕರಗುತ್ತಿದೆ.

ಕಳೆದ ವಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಗಾಲದ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಯಾವುದೇ ಕಾರಣಕ್ಕೂ ರೈತರ ಸಾಲ ಮನ್ನಾ ಮಾಡುವ ಪ್ರಸ್ಥಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದು ಅನ್ನದಾತನ ಮೊದಲ ನಿರೀಕ್ಷೆಗೆ ಕೊಡಲಿ ಪೆಟ್ಟು ಕೊಟ್ಟಿತ್ತು. ಇನ್ನು ಸಹಕಾರ ಬ್ಯಾಂಕುಗಳಿಂದ ರೈತರು ಪಡೆದಿರುವ ಬೆಳೆ ಸಾಲದ ಮೇಲಿನ ಬಡ್ಡಿಯನ್ನಾದರೂ ಮನ್ನಾ ಮಾಸಬಹುದೆಂಬ ನಿರೀಕ್ಷೆಯೂ ಕೂಡ ಹುಸಿಯಾಗಿದೆ.  ಒಂದೂವರೆ ಲಕ್ಷ ಕೋಟಿಗೂ ಅಧಿಕ ಬಜೆಟ್ ಮಂಡಿಸುವ ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕುಗಳಿಂದ ರೈತರು ಪಡೆದಿರುವ ಸಾಲದ ಮೇಲಿನ ಬಡ್ಡಿ ಹೆಚ್ಚೆಂದರೆ 800ರಿಂದ 1000 ಕೋಟಿ. ಇದನ್ನು ಮನ್ನಾ ಮಾಡಲು ಮೀನಾಮೇಷ ಏಕೆ ಎಂಬ ಆಕ್ರೋಶ ರೈತರಿಂದ ವ್ಯಕ್ತವಾಗುತ್ತಿದೆ.

ಮೊದಲು ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ರೈತರ ಸಾಲ ಮನ್ನಾ ಮಾಡಿ ಬಳಿಕ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಬಹುದಿತ್ತು. ಆದರೆ, ಅದು ಇದ್ದಕ್ಕಿದ್ದಂತೆ ಕೇಂದ್ರ ಸರ್ಕಾರ ಶೇ.50ರಷ್ಟು ಮನ್ನಾ ಮಾಡಲು ಒಪ್ಪಿಕೊಂಡರೆ ರಾಜ್ಯ ಸರ್ಕಾರ ಉಳಿದ ತಮ್ಮ ಪಾಲಿನ ಸಾಲವನ್ನು ಮನ್ನಾ ಮಾಡಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ಸರಿಯಾದ ಕ್ರಮವಲ್ಲ ಎಂದು ರೈತ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲು ರಾಜ್ಯ ಸರ್ಕಾರ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಿ ಬಳಿಕ ಕೇಂದ್ರದ ಮೇಲೆ ಒತ್ತಡ ಹಾಕಬಹುದಿತ್ತು. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಹಿಂದೆಂದೂ ಕಾಣದಷ್ಟು ಭೀಕರ ಬರಗಾಲ ಆವರಿಸಿದೆ. ರಾಜ್ಯ ಸರ್ಕಾರವೇ 139 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದೆ.

ಇಂತಹ ಸಂದರ್ಭದಲ್ಲಿ ಕೇಂದ್ರ ಮೇಲೆ ಹೊರೆ ಹೊರಿಸುವುದು ಸಮಂಜಸವಲ್ಲ ಎಂಬುದು ಅನೇಕ ಮುಖಂಡರ ಅಭಿಪ್ರಾಯವಾಗಿದೆ. ಇನ್ನು ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಕಳಸಾ-ಬಂಡೂರಿ ಯೋಜನೆ ಕೇವಲ ಚರ್ಚೆಗೆ ಸೀಮಿತವಾಯಿತೇ ಹೊರತು ಶಾಶ್ವತ ಪರಿಹಾರ ಸಿಗಲಿಲ್ಲ ಎಂಬ ಅಸಮಾಧಾನವೂ ಈ ಭಾಗದಲ್ಲಿ ಮಡುಗಟ್ಟಿದೆ.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ಇನ್ನು ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಅವರದೇ ಪಕ್ಷದ ಮುಖ್ಯಮಂತ್ರಿಗಳಿದ್ದಾರೆ. ಸ್ವತಃ ಯಡಿಯೂರಪ್ಪನವರೇ ಮೂರು ರಾಜ್ಯಗಳ ಮುಖ್ಯಮಂತ್ರಿ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಬಳಿ ಕರೆದೊಯ್ದರೆ ಅವರ ಪಕ್ಷಕ್ಕೆ ರಾಜಕೀಯ ಅನುಕೂಲವಾಗಬಹದು. ಬಿಎಸ್‍ವೈ ಈ ಯೋಜನೆಯನ್ನು ರಾಜಕೀಯಗೊಳಿಸುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಉತ್ತರದಲ್ಲಿ ಯೋಜನೆ ಅನುಷ್ಠಾನ ಮಾಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ. ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಲಿ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ:

ಇನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುವಂತಾಗಿದೆ. ಹೋದಪುಟ್ಟ ಬಂದಪುಟ್ಟ ಎಂಬಂತೆ ಜನಪ್ರತಿನಿಧಿಗಳು ಕಾಟಾಚಾರಕ್ಕೆ ಅಧಿವೇಶನಕ್ಕೆ ಹಾಜರಾಗುತ್ತಿದ್ದಾರೆಯೇ ಹೊರತು. ಯಾರೊಬ್ಬರಿಗೂ ಈ ಭಾಗದ ಜನ ಸಮಸ್ಯೆಗಳಿಗೆ ಸದನದಲ್ಲಿ ಚರ್ಚಿಸಿ ಉತ್ತರ ಕಂಡುಕೊಳ್ಳಬೇಕೆಂಬ ಇಚ್ಚಾಶಕ್ತಿ ಇಲ್ಲ. ಅಧಿವೇಶನಕ್ಕೆ ಚಕ್ಕರ್ ಹೊಡೆದರೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಏಕೈಕ ಕಾರಣಕ್ಕಾಗಿ ನಾಮಕಾವಸ್ಥೆಗೆ ಸದನಕ್ಕೆ ಬರುತ್ತಿದ್ದಾರೆ. ಸದನಕ್ಕೆ ಬಂದರೂ ಚರ್ಚೆಯಲ್ಲಿ ಪಾಲ್ಗೊಳ್ಳುವುದು ಕಡಿಮೆ.
ತಮ್ಮ ತಮ್ಮ ಪಕ್ಷದ ಮುಖಂಡರ ಗಮನ ಸೆಳೆಯುವ ಉದ್ದೇಶಕ್ಕಾಗಿ ಆಗಾಗ್ಗೆ ಎದ್ದು ನಿಂತು ಮಾತನಾಡುತ್ತಾರೆಯೇ ಹೊರತು ಯಾರೊಬ್ಬರಲ್ಲೂ ಗಾಂಭಿರ್ಯತೆ ಕಂಡು ಬರುತ್ತಿಲ್ಲ.
ಯಾವ ಉದ್ದೇಶಕ್ಕಾಗಿ ಅಧಿವೇಶನ ಕರೆಯಲಾಗಿತ್ತೋ ಅದರ ಸದುದ್ದೇಶ ಮಾತ್ರ ಈಡೇರುತ್ತಿಲ್ಲ ಎಂಬ ಕೊರಗು ಎಲ್ಲರಲ್ಲೂ ಕಾಡುತ್ತಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin