ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ಬೆಳೆಯುವುದು ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

Neelagiri

ಬೆಂಗಳೂರು, ಮಾ.22- ನೀಲಗಿರಿ ಮತ್ತು ಅಕೇಶಿಯಾ ಮರಗಳು ಅತಿ ಹೆಚ್ಚು ನೀರು ಹೀರುವುದರಿಂದ ಅವುಗಳನ್ನು ಬೆಳೆಯುವುದರ ಮೇಲೆ ನಿಷೇಧ ಹೇರಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ವಿಧಾನ ಪರಿಷತ್‍ನಲ್ಲಿಂದು ತಿಳಿಸಿದ್ದಾರೆ. ಈಗಾಗಲೆ ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡಿದ್ದು, ಅರಣ್ಯ ಇಲಾಖೆ ಸೇರಿದಂತೆ ಯಾರೂ ಕೂಡ ಈ ಮರಗಳನ್ನು ಬೆಳೆಸಲು ಪ್ರೋತ್ಸಾಹ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬರಗಾಲ ಮತ್ತು ಅಂತರ್ಜಲ ಕುಸಿತದಿಂದ ಇವುಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ಸದಸ್ಯ ರಾಮಚಂದ್ರೇಗೌಡ ಅವರ ಪ್ರಶ್ನೆಗೆ ಅರಣ್ಯ ಸಚಿವ ರಮಾನಾಥ ರೈ ಪರವಾಗಿ ಜಯಚಂದ್ರ ಉತ್ತರಿಸಿದರು.

20017 ಫೆ.25ರಂದೆ ಈ ಮರಗಳನ್ನು ಬೆಳೆಯದಂತೆ ನಿಷೇಧ ಹೊರಡಿಸಲಾಗಿದೆ. ರಾಜ್ಯದಲ್ಲಿ ಹೆಚ್ಚಾಗಿ ಬೆಳೆದಿರುವ ನೀಲಗಿರಿ ನೆಡುತೋಪುಗಳು, ಅಂತರ್ಜಲ ಮಟ್ಟ ಕುಸಿತಕ್ಕೆ ಈ ಮರಗಳೇ ಕಾರಣ ಎಂದು ತಿಳಿದುಬಂದಿದ್ದು, ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ 2000 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಈ ಅನುಭವದಿಂದಲೇ ಇದಕ್ಕೆ ನಿರ್ಬಂಧ ಹಾಕಿರುವುದಾಗಿ ಹೇಳಿದರು.  ಸದಸ್ಯ ಆರ್.ಪ್ರಸನ್ನ ಕುಮಾರ್ ಅವರ ಮತ್ತೊಂದು ಪ್ರಶ್ನೆಗೆ ಅರಣ್ಯ ಸಚಿವರ ಪರವಾಗಿ ಉತ್ತರಿಸಿದ ಜಯಚಂದ್ರ, ರಸ್ತೆಗಳ ಬದಿ ಕಡ್ಡಾಯವಾಗಿ ಮರಗಳನ್ನು ನೆಡಬೇಕೆಂದು ರಾಜ್ಯ ಸರ್ಕಾರ ನಿಯಮ ಜಾರಿ ಮಾಡಿದೆ ಎಂದು ತಿಳಿಸಿದರು.

ಇತ್ತೀಚೆಗೆ ಮಂಡಿಸಲಾದ ಬಜೆಟ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಟ್ಟು ಅನುದಾನದ ಶೇಕಡಾ 1ರಷ್ಟು ಹಣವನ್ನು ಅರಣ್ಯ ಬೆಳೆಸಲು ಮೀಸಲಿಟ್ಟಿದ್ದಾರೆ. ಇದನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ವಿವರಿಸಿದರು.  ಈ ಬಾರಿ 3805 ಕಿ.ಮೀ.ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಸುಮಾರು 6.60 ಲಕ್ಷ ಮರಗಳನ್ನು ನೆಡಲಾಗಿದೆ. ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡುವಂತಹ ಆಲ, ಅರಳಿ, ನೇರಳೆ, ಹಲಸು, ಬೇವು, ಗೋಣಿ, ತಪಸಿ, ಹುಣಸೆ, ಮಾವು ಸೇರಿದಂತೆ ವಿವಿಧ ತಳಿಯ ಮರಗಳನ್ನು ನೆಟ್ಟಿರುವುದಾಗಿ ಹೇಳಿದರು.

ಶ್ರೀಗಂಧದ ಮರಗಳನ್ನು ಬೆಳೆಸಲು ಉತ್ತೇಜನ ನೀಡಿದೆ. ಕಳೆದ ವರ್ಷ 737 ಹೆಕ್ಟೆರ್ ಪ್ರದೇಶದಲ್ಲಿ 1.5 ಲಕ್ಷ ಮರಗಳನ್ನು ನೆಡಲಾಗಿತ್ತು. 700 ಹೆಕ್ಟೇರ್ ಪ್ರದೇಶದಲ್ಲಿ ಇದನ್ನು ಬೆಳೆಯಲು ಉದ್ದೇಶಿಸಲಾಗಿದೆ. 3 ಲಕ್ಷ ಶ್ರೀಗಂಧದ ಮರಗಳನ್ನು ವಿತರಣೆ ಮಾಡಲಾಗಿದೆ. ಇನ್ನು 6 ಲಕ್ಷ ಮರಗಳನ್ನು ವಿತರಣೆ ಗುರಿ ಹೊಂದಲಾಗಿದೆ ಎಂದರು.  ಅರಣ್ಯ ಇಲಾಖೆಯ ಮರಮಟ್ಟುಗಳನ್ನು ಕಳ್ಳ ಸಾಕಾಣಿಕೆ ಮಾಡಿ ವಶಪಡಿಸಿಕೊಳ್ಳಲಾದ ವಾಹನಗಳನ್ನು ಆದಷ್ಟು ಶೀಘ್ರ ಹರಾಜು ಹಾಕಲು ಕ್ರಮಕೈಗೊಳ್ಳಲಾಗುವುದು. ನ್ಯಾಯಾಲಯಗಳಲ್ಲಿ ಇತ್ಯರ್ಥ ಆಗುವವರು ಸರ್ಕಾರ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin