ನುಡಿಹಬ್ಬಕ್ಕೆ ಕ್ಷಣಗಣನೆ : ಮದುವಣಗಿತ್ತಿಯಂತೆ ಸಿಂಗಾರಗೊಂಡ ರಾಯಚೂರು

ಈ ಸುದ್ದಿಯನ್ನು ಶೇರ್ ಮಾಡಿ

Raichuru-01
ರಾಯಚೂರು ಡಿ.1- ಕೃಷ್ಣಾ- ತುಂಗೆಯರ ಬೀಡು, ಎಡದೊರೆಯ ನಾಡಿನಲ್ಲಿ ಮೂರು ದಿನಗಳ ಕಾಲ ಆಯೋಜನೆಗೊಂಡಿರುವ ಅಕ್ಷರ ಜಾತ್ರೆಗೆ ಅಕ್ಷರಶಃ ಕ್ಷಣಗಣನೆ ಆರಂಭವಾಗಿದೆ. ನಗರದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಡಿ.2, 3 ಮತ್ತು 4 ರಂದು ನಡೆಯುವ ನುಡಿಹಬ್ಬದ ರಸದೌತಣ ನೀಡಲು ವಿವಿಧ ವೇದಿಕೆಗಳು ಸಜ್ಜುಗೊಂಡಿವೆ. ಪಂಡಿತ ತಾರಾನಾಥ ಮಹಾಮಂಟಪ, ಶಾಂತರಸ ಪ್ರಧಾನ ವೇದಿಕೆ ಹಾಗೂ ಪಂಡಿತ ಸಿದ್ಧರಾಮ ಜಂಬಲದಿನ್ನಿ ಮಹಾದ್ವಾರ ಎಂಬ ಮೂರು ಮುಖ್ಯ ವೇದಿಕೆಗಳಲ್ಲಿ ಹಾಗೂ ಇನ್ನಿತರ ವೇದಿಕೆಗಳಲ್ಲಿ ಸಾಹಿತ್ಯದ ಸಂವಾದ, ಕಲೆಯ ಅನಾವರಣ ಸೇರಿದಂತೆ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂತನ-ಮಂಥನ ನಡೆಯಲಿದೆ.

ನಾಡಿನ ಖ್ಯಾತ ಸಾಹಿತಿ, ಸೃಜನಶೀಲ ಚಿಂತಕ, ಚಲನಚಿತ್ರ ನಿರ್ದೇಶಕರಾದ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅವರು ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಅವರ ಸಮ್ಮುಖದಲ್ಲಿ ಮೂರು ದಿನಗಳ ಕಾಲ ಆಯೋಜನೆ ಗೊಂಡಿರುವ ಸಮ್ಮೇಳನಕ್ಕೆ ನಾಳೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚಾಲನೆ ನೀಡುವರು.   ಇದಕ್ಕೂ ಮೊದಲು ಬೆಳಗ್ಗೆ 8.30 ಗಂಟೆಗೆ ಧ್ವಜಾರೋಹಣವಿದೆ. ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ತನ್ವೀರ್ ಸೇಠ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು.

Raichuru-02

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನುಬಳಿಗಾರ್ ಅವರು ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ನಾಡ ಧ್ವಪೊರೋಹಣ ನೆರವೇರಿಸುವರು.  ಬಳಿಕ 9ಕ್ಕೆ ಆಯೋಜನೆ ಗೊಂಡಿರುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಜಿಲ್ಲಾಧಿಕಾರಿಗಳಾದ ಎಸ್.ಸಸಿಕಾಂತ್ ಸೆಂಥಿಲ್ ಚಾಲನೆ ನೀಡುವರು. ಮೆರವಣಿಗೆಯು ನಗರದ ಕರ್ನಾಟಕ ಸಂಘದಿಂದ ಹೊರಟು ನೇತಾಜಿ ವೃತ್ತ, ಪಟೇಲ್ ವೃತ್ತ, ಚಂದ್ರಮಳೇಶ್ವರ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಕೃಷಿ ವಿಶ್ವವಿದ್ಯಾಲಯದ ಪ್ರಧಾನ ವೇದಿಕೆಗೆ ತಲುಪುವುದು.

ಮುಖ್ಯ ಅತಿಥಿಗಳಾಗಿ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಎಂ. ಕೂರ್ಮರಾವ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನ್ ಸಿಂಗ್ ರಾಥೋರ್ ಉಪಸ್ಥಿತರಿರುವರು. ಅತಿಥಿಗಳಾಗಿ ಕೇಂದ್ರದ ಮಾಜಿ ಸಚಿವ ಬಸವರಾಜ್ ಪಾಟೀಲ್ ಅನ್ವರಿ, ಮಾಜಿ ಶಾಸಕ ಸಯ್ಯದ್ ಯಾಸೀನ್, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ, ಮಾಜಿ ಶಾಸಕ ಎ. ಪಾಪಾರೆಡ್ಡಿ, ಮುಂತಾದ ಗಣ್ಯರು ಉಪಸ್ಥಿತರಿರುವರು. 81ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ನಾಡೋಜ ಡಾ.ಸಿದ್ದಲಿಂಗಯ್ಯ ಭಾಷಣ ಮಾಡುವರು. ನಂತರ ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಭಾಷಣ ಮಾಡುವರು. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಉಮಾಶ್ರೀ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸುವರು.

Raichuru-03

ಲೋಕಸಭೆ ಸದಸ್ಯರಾದ ಬಿ.ವಿ ನಾಯಕ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ವಿಧಾನ ಪರಿಷತ್ ಸದಸ್ಯ ಎನ್.ಎಸ್ ಭೋಸರಾಜು ಪುಸ್ತಕ ಮಳಿಗೆಗಳ ಉದ್ಘಾಟಿಸುವರು. ವಾಣಿಜ್ಯ ಮಳಿಗೆಗಳ ಉದ್ಘಾಟನೆಯನ್ನು ನಗರ ಶಾಸಕ ಡಾ.ಎಸ್. ಶಿವರಾಜ್ ಪಾಟೀಲ್ ಮಾಡಲಿದ್ದಾರೆ. ಹಿರಿಯ ಸಾಹಿತಿ ಡಾ. ರಾಜಶೇಖರ್ ನೀರಮಾನ್ವಿ ಪರಿಷತ್ತಿನ ಪುಸ್ತಕಗಳನ್ನು ಬಿಡುಗಡೆ ಮಾಡುವರು. ವಿವಿಧ ಲೇಖಕರ ಪುಸ್ತಕಗಳ ಲೋಕಾರ್ಪಣೆಯನ್ನು ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜ ಹವಾಲ್ದಾರ ನೆರವೇರಿಸುವರು.  ಚಿತ್ರಕಲಾ ಪ್ರದರ್ಶನ, ಕವಿಗೋಷ್ಠಿ, ವಿಶೇಷ ಉಪನ್ಯಾಸ, ಸಾಂಸ್ಕøತಿಕ ಕಾರ್ಯಕ್ರಮಗಳು, ಸಮ್ಮೇಳನದ ನಿಮಿತ್ತ ಡಿಸೆಂಬರ್ 2, 3 ಮತ್ತು 4 ರಂದು ಕೃಷಿ ವಿಶ್ವವಿದ್ಯಾಲಯ ಆವರಣ ಮತ್ತು ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಮೂರು ಮುಖ್ಯ ವೇದಿಕೆಗಳಲ್ಲಿ ನೃತ್ಯ ರೂಪಕ, ಸಮೂಹ ನೃತ್ಯಗಳು, ಜÁನಪದ, ಭಾವಗೀತೆ, ದಾಸವಾಣಿ, ವಚನ, ಸಮೂಹ ಗೀತೆ, ಭರತನಾಟ್ಯ, ನಾಟಕ ಪ್ರದರ್ಶನ, ಬಯಲಾಟ, ಕನ್ನಡವೇ ಸತ್ಯ ವಿಶೇಷ ಆಕರ್ಷಣೀಯ ಕಾರ್ಯಕ್ರಮಗಳು ಮತ್ತು ಸಂಗೀತ ನಿರ್ದೇಶಕ ಹಂಸಲೇಖರಿಂದ ವೈವಿಧ್ಯಮಯ ದೇಶಿ ಕಾರ್ಯಕ್ರಮಗಳು ಜರುಗಲಿವೆ.
– ಮಹಾಂತೇಶ್, ಹಿರೇಮಠ್

ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

> ವಿವಿಧ ಸಿದ್ಧತೆಗಳು ಬಹುತೇಕ ಪೂರ್ಣ

ರಾಯಚೂರು, ಡಿ.1- ನಾಳೆಯಿಂದ ಆರಂಭಗೊಳ್ಳುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವಾದ ನುಡಿಹಬ್ಬಕ್ಕೆ ಆಗಮಿಸುವ ಅತಿಥಿಗಳು, ಪ್ರತಿನಿಧಿಗಳು, ಸಾರ್ವಜನಿಕರಿಗೆ ಅಗತ್ಯ ವಸತಿ, ಊಟದ ವ್ಯವಸ್ಥೆ, ಕುಡಿವ ನೀರು ಪೂರೈಕೆ ಒದಗಿಸುವುದು ಸೇರಿದಂತೆ ಸರ್ವ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ವಿವಿಧ ಗೋಷ್ಠಿಗಳು, ಉಪನ್ಯಾಸಗಳು, ಕವಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ರೂಪಿಸಿರುವ ಮೂರು ಮುಖ್ಯವೇದಿಕೆಗಳು ಸಂಪೂರ್ಣ ಸಿದ್ಧಗೊಂಡಿವೆ. ವಿವಿಧೆಡೆ ಅಗತ್ಯ ಕುಡಿವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ. ಕಲೆ, ವಾಣಿಜ್ಯ ಹಾಗೂ ಪುಸ್ತಕ ಮಾರಾಟ ಮಳಿಗೆಗಳು ಸಿದ್ಧಗೊಂಡಿವೆ.

ಸಮ್ಮೇಳನಕ್ಕೆಂದು ವಿವಿಧ ಜಿಲ್ಲೆಗಳಿಂದ ನಗರಕ್ಕೆ ಆಗಮಿಸುವ ಪ್ರತಿನಿಧಿಗಳು ಸಮ್ಮೇಳನದ ಸ್ಥಳದಿಂದ ವಸತಿಗೆ ಸಂಚರಿಸಲು ಅಗತ್ಯ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸಮ್ಮೇಳನದ ಪ್ರಚಾರ ಕಾರ್ಯಗಳು ಕೂಡ ಬಹುತೇಕ ಪೂರ್ಣಗೊಂಡಿವೆ.  ಅಧ್ಯಕ್ಷರ ಮೆರವಣಿಗೆಗೆ ಜಿಲ್ಲೆಯಲ್ಲಿ 160ಕ್ಕೂ ಹೆಚ್ಚು ತಂಡಗಳನ್ನು ನಿಯೋಜಿಸಲಾಗಿದ್ದು, ಮೆರವಣಿಗೆ ಸಂಚರಿಸುವ ವಿವಿಧ ಮಾರ್ಗಗಳಲ್ಲಿನ ರಸ್ತೆಗಳ ಗೋಡೆಗೆ ಚಿತ್ರಗಳ ಅಲಂಕಾರ ಮಾಡಲಾಗಿದೆ.

> ಸಾಹಿತ್ಯ ಸಮ್ಮೇಳನ ಮಾಹಿತಿಗೆ  ವಿಶೇಷ ವೆಬ್‍ಸೈಟ್

ರಾಯಚೂರು ಡಿ.1- ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಡಿ.2ರಿಂದ ಆರಂಭಗೊಳ್ಳುವ 82ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಹಿತಿಗೆ ಜಿಲ್ಲಾಡಳಿತವು ವಿಶೇಷ ವೆಬ್‍ಸೈಟ್ ರೂಪಿಸಿದೆ.  ಸಮ್ಮೇಳನದ ಬಗ್ಗೆ ತಿಳಿಯಲಿಚ್ಚಿಸುವವರು ಹಾಗೂ ಆಗಮಿಸಬಯಸುವವರು www.82ssraichur.com  ಮೂಲಕ ನಾನಾ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಈ ವೆಬ್‍ಸೈಟ್‍ನಲ್ಲಿ ಸಮ್ಮೇಳನದ ಆಹ್ವಾನ ಪತ್ರಿಕೆಯು ಲಭ್ಯವಿದ್ದು, ಈ ಮೂಲಕ ಸಮ್ಮೇಳನದ ವಿವಿಧ ಕಾರ್ಯಕ್ರಮಗಳ ಸಂಪೂರ್ಣ ವಿವರವನ್ನು ಪಡೆಯಬಹುದಾಗಿದೆ. ರಾಯಚೂರು ನಗರದ ಹಿನ್ನೆಲೆಯನ್ನು ಕೂಡ ಈ ವೆಬ್‍ಸೈಟ್ ಮೂಲಕ ತಿಳಿಯಬಹುದಾಗಿದೆ. ಸಮ್ಮೇಳನಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಹಾಯವಾಣಿ ಸಂಖ್ಯೆಯನ್ನು ಕೂಡ ಆರಂಭಿಸಿದ್ದು, 08532-228536, 225630 ಇದಕ್ಕೆ ಸಾರ್ವಜನಿಕರು ಸಂಪರ್ಕಿಸಬಹುದಾಗಿದೆ.

Facebook Comments

Sri Raghav

Admin