ನೂತನ ಆಲಯ ಲೋಕಾರ್ಪಣೆ – ರಜತೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

11

ಶಿರಸಿ,ಫೆ.4- ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಸರ್ವಜ್ಞೆoದ್ರಸರಸ್ವತಿ ಪ್ರತಿಷ್ಠಾನದ ರಜತ ಮಹೋತ್ಸವ ಹಾಗೂ ಶ್ರೀಗಳವರ ಪೀಠಾರೋಹಣದ ರಜತೋತ್ಸವದ ಹಿನ್ನೆಲೆಯಲ್ಲಿ ನಾಳೆ ಶ್ರೀಮಠದಲ್ಲಿ ರಜತವಲ್ಲಿ ಗ್ರಂಥ ಲೋಕಾರ್ಪಣೆ ಹಾಗೂ ಸ್ವರ್ಣಚರಿತ ಸಾಕ್ಷ್ಯಚಿತ್ರ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಭಾಗವಹಿಸಲಿರುವರು. ತಾಲೂಕಿನ ಸ್ವರ್ಣವಲ್ಲೀ ಮಠವು ರಾಜ್ಯದಲ್ಲಿಯೇ ವಿಭಿನ್ನ ದೃಷ್ಟಿಕೋನವನ್ನು ಇಟ್ಟುಕೊಂಡು ಸಮಾಜದ ಜಾಗೃತಿಗಾಗಿ, ಒಳಿತಿಗಾಗಿ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಸಮುದಾಯದ ಯೋಗಕ್ಷೇಮವನ್ನು, ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಲ್ಲಿ ಧರ್ಮದ ಮಾರ್ಗವನ್ನು ತೋರುವಲ್ಲಿ ರಾಜ್ಯದಲ್ಲಿಯೇ ಗುರುತಿಸಿಕೊಂಡಿರುವಂತಹ ಏಕೈಕ ಮಠವೆಂದರೆ ಸ್ವರ್ಣವಲ್ಲೀ ಮಠ. ಸಾವಿರದ ಇನ್ನೂರು ವರ್ಷಗಳ ಪರಂಪರೆಯ ಇತಿಹಾಸ ಶ್ರೀ ಮಠಕ್ಕಿದೆ. ಶ್ರೀ ಶಂಕರಾಚಾರ್ಯರ ಶಿಷ್ಯ ಪರಂಪರೆ ಇಲ್ಲಿದೆ.

ಈ ಗುರು ಪರಂಪರೆಯಲ್ಲಿ ಶ್ರೀಮದ್ ಸರ್ವಜ್ಞೆoದ್ರ ಸರಸ್ವತಿ ಮಹಾಸ್ವಾಮಿಗಳವರ ಕರಕಮಲ ಸಂಜಾತರಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು 54 ನೆಯ ಪೀಠಾಧೀಪತಿಯಾಗಿ ಶ್ರೀ ಮಠದ ವ್ಯಾಖ್ಯಾನ ಸಿಂಹಾಸನವನ್ನು 1991 ರಲ್ಲಿ ಅಲಂಕರಿಸಿದ್ದಾರೆ. ಈ 25 ವರ್ಷಗಳು ಸುಸಂಪನ್ನವಾಗಿ ನಡೆದುಕೊಂಡು ಬಂದಿದೆ. ಈಗಿರುವ ಶ್ರೀಗಳವರು ವಿಚಾರವಾದಿಗಳು, ಸಾತ್ವಿಕ ಗುಣಸಂಪನ್ನರು ಆಗಿ ಈಗಿರುವ ವ್ಯವಸ್ಥೆ ಮತ್ತು ಅವ್ಯವಸ್ಥೆಗಳ ಸೂಕ್ಷ್ಮಾತೀಸೂಕ್ಷ್ಮಗಳನ್ನು ಅರಿತುಕೊಂಡು ಅದಕ್ಕೆ ತಕ್ಕಂತಹ ಕಾರ್ಯಕ್ರಮಗಳನ್ನು, ರೂಪುರೇಷೆಗಳನ್ನು ಕೊಡುತ್ತಾ ಅಭಿಯಾನಗಳು, ಹೋರಾಟ, ಕಾರ್ಯಗತಗೊಳ್ಳುವಂತಹ ಯೋಜನೆಗಳನ್ನು ನಿರೂಪಿಸಿ ರಾಷ್ಟ್ರದ ಜನತೆ ಬಯಸುವಂತಹ ಗುರುವಾಗಿ ಸಮಾಜದ ಮಾರ್ಗದರ್ಶಕರಾಗಿದ್ದಾರೆ.

ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ ತಮ್ಮ ಪೀಠಾರೋಹಣದ ಸಂದರ್ಭದಲ್ಲಿನ ಕಾರ್ಯಕ್ರಮದಲ್ಲಿ ಉಳಿದಿದ್ದ 10 ಲಕ್ಷ ರೂಪಾಯಿಗಳನ್ನು ಮೂಲಧನವನ್ನಾಟ್ಟುಕೊಂಡು ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ ಸಲುವಾಗಿ ಸಾಂಸ್ಕೃತಿಕ , ಶೈಕ್ಷಣಿಕ, ಜನಜಗೃತಿಯಂತಹ ಚಟುವಟಿಕೆಗಳನ್ನು ನಡೆಸುವ ಸಲುವಾಗಿಯೆ ಶ್ರೀ ಸರ್ವಜ್ಞೆoದ್ರ ಸರಸ್ವತಿ ಪ್ರತಿಷ್ಠಾನವನ್ನು ಪ್ರಾರಂಭಿಸಿದರು. ಈ ಪ್ರತಿಷ್ಠಾನದ ಅಡಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳು ಒಂದೆರಡಲ್ಲ. ಕರ್ನಾಟಕ ರಾಜ್ಯದಲ್ಲಿ ಭಗವದ್ಗೀತಾ ಅಭಿಯಾನ ಎರಡು ಬಾರಿ, ಹಾಗೂ ಉತ್ತರಕನ್ನಡ, ಕಲ್ಬುರ್ಗಿ ಹಾಗೂ ಶಿವಮೊಗ್ಗದಲ್ಲಿ 3 ಬಾರಿ ಅಭಿಯಾನ ಕಾರ್ಯಕ್ರಮಗಳನ್ನು ನಡೆಸಿದ ಹಿರಿಮೆ ಶ್ರೀ ಮಠಕ್ಕೆ ಸಲ್ಲುತ್ತದೆ. ಸಮಾಜವು ದುಶ್ಚಟಗಳ ಆಗರವಾಗುತ್ತಿರುವಂತಹ ಸಂದರ್ಭದಲ್ಲಿ ಶ್ರೀ ಗಳವರು ವ್ಯಸನಮುಕ್ತ ಸಮಾಜ ಎಂಬ ಕಾರ್ಯಾಗಾರವನ್ನು ಹಮ್ಮಿಕೊಂಡು ಕಾಲೇಜು ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನವನ್ನು ಈಗಲೂ ನಡೆಸಿಕೊಂಡು ಹೋಗುತ್ತಿದ್ದಾರೆ.
ಸ್ತ್ರೀ ಭ್ರೂಣ ಹತ್ಯೆ ತಡೆಯುವ ನಿಟ್ಟಿನಲ್ಲಿ ರಾಜಧಾನಿ ಸೇರಿಕೊಂಡು ವಿವಿಧ ಭಾಗಗಳಲ್ಲಿ 30ಕ್ಕೂ ಹೆಚ್ಚು ಧನ್ಯೋ ಗ್ರಹಸ್ಥಾಶ್ರಮ ಶಿಬಿರಗಳನ್ನು ನಡೆಸಿ, ಸಾವಿರಾರು ದಂಪತಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ. ಪ್ರತಿ ವರ್ಷ ಸ್ತ್ರೀಯರಿಗಾಗಿ ನಾಡಿನ ಸಾಂಸ್ಕೃತಿ, ಪರಂಪರೆ, ರಕ್ಷಣೆಗಾಗಿ ಕುಮಾರಿ ಸಾಂಸ್ಕೃತಿ ಶಿಬಿರದ ಮೂಲಕ ನೂರಾರು ಸ್ತ್ರೀಯರಿಗೆ ಮಾರ್ಗದರ್ಶನವನ್ನು ನೀಡಲಾಗುತ್ತದೆ. ಹಾಗೂ ಪ್ರತಿವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಶ್ರೀಮಠದಿಂದ ಕೊಡಲಾಗುತ್ತಿದೆ. ಶ್ರೀಗಳವರು ಕಳೆದ ತಿಂಗಳಲ್ಲಿ ಅರಣ್ಯ ವಾಸಿಗಳ ಶ್ರೇಯೋಭಿವೃದ್ಧಿಗಾಗಿ ನಡೆಸಿದ ನಾಲ್ಕು ಹಂತದ ಕಾರ್ಯಕ್ರಮದಲ್ಲಿ ಗಿರಿಜನರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಸಾಮಾಜಿಕ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಿದ್ದು ಶ್ರೀಮಠದ ಹಿರಿಮೆಯಾಗಿದೆ. ಇಂತಹ ಹತ್ತು ಹಲವಾರು ಕಾರ್ಯಕ್ರಮಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀಮಠದಲ್ಲಿ ನಿರಂತರವಾಗಿ ನಡೆಸಿಕೊಂಡು ಶಿಷ್ಯ ಮತ್ತು ಭಕ್ತರ ಇಷ್ಟಾನಿಷ್ಟಗಳನ್ನು ಈಡೇರಿಸುತ್ತ ಪೀಠಾರೋಹಣದ ರಜತ ಮಹೋತ್ಸವದ ಅಂಗವಾಗಿ ನಾಳೆ ಸ್ವರ್ಣವಲ್ಲೀಯ ಸುಧರ್ಮಾ ಸಭಾಭವನದಲ್ಲಿ ರಜತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಇದೇ 9ರಿಂದ 14ರವರೆಗೆ ರಜತೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು 9ರಂದು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಆಲಯ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮಗಳಲ್ಲಿ ಆರ್.ವಿ. ದೇಶಪಾಂಡೆ, ಬಸವರಾಜ ಹೊರಟ್ಟಿ, ಸೋದೆ ರಾಜವಂಶಸ್ಥ ಮಧುಲಿಂಗನಾಗೇಶ ರಾಜೇಂದ್ರ ಒಡೆಯರ್ ಭಾಗವಹಿಸಲಿದ್ದಾರೆ. ಈ ರಜತೋತ್ಸವದ ತನ್ನಿಮಿತ್ತ ಇಪ್ಪತ್ತೈದನೇ ಸನ್ಮಾನವನ್ನು ಪರಿಸರ ತಜ್ಞ ಡಿ. ಎಂ. ಕುಮಾರಸ್ವಾಮಿ ಅವರಿಗೆ ಕೊಡಮಾಡಲಾಗುವುದು. ಈ ರಜತೋತ್ಸವದ ಗೌರವಾಧ್ಯಕ್ಷ ವಿ.ಆರ್.ಎಲ್. ಸಮೂಹ ಸಂಸ್ಥೆಯ ಅಧ್ಯಕ್ಷ ವಿಜಯ ಸಂಕೇಶ್ವರ ಹಾಗೂ ಸಂಸದ ಅನಂತಕುಮಾರ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂತಾದ ಪ್ರಮುಖರು ಭಾಗವಹಿಸಲಿರುವರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin