ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ರೂಪ್ ಕುಮಾರ್ ದತ್ತಾ ನೇಮಕ
ಬೆಂಗಳೂರು,ಜ.27- ರಾಜ್ಯ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಹಿರಿಯ ಪೊಲೀಸ್ ಅಧಿಕಾರಿ ರೂಪ್ ಕುಮಾರ್ ದತ್ತಾ ಅವರನ್ನು ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನ ಸೌಧದ ಮುಂಭಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ಪೊಲೀಸ್ ಮಹಾ ನಿರ್ದೇಶಕರ ನೇಮಕಕ್ಕೆ ಸಂಬಂಧಿಸಿದಂತೆ ಆರ್.ಕೆ. ದತ್ತಾ ಅವರ ಹೆಸರು ಶಿಫಾರಸ್ಸು ಮಾಡಲಾಗಿದೆಯೇ ಎಂಬ ಪ್ರಶ್ನೆಗೆ ಸಮ್ಮತಿ ರೂಪದಲ್ಲಿ ಉತ್ತರಿಸಿದರು. ರಾಜ್ಯ ಸರ್ಕಾರ ಈಗಾಗಲೇ ಹೊಸ ಪೊಲೀಸ್ ಮಹಾ ನಿರ್ದೇಶಕರ ನೇಮಕ ಮಾಡಲು ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದೆ. ಕೇಂದ್ರ ಸರ್ಕಾರದಿಂದ ಆದೇಶ ಬಂದ ಕೂಡಲೇ ರಾಜ್ಯ ಸರ್ಕಾರ ನೂತನ ಡಿಜಿಪಿಯನ್ನು ನೇಮಿಸಿ ಅಧಿಕೃತ ಆದೇಶವನ್ನು ಒಂದೆರಡು ದಿನದಲ್ಲಿ ಹೊರಡಿಸಲಿದೆ.
ಕೇಂದ್ರ ಸೇವೆಯಲ್ಲಿರುವ ಕರ್ನಾಟಕ ಕೇಡರ್ನ ಹಿರಿಯ ಐಪಿಎಸ್ ಅಧಿಕಾರಿ ಆರ್.ಕೆ.ದತ್ತಾ, ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗುವುದು ಬಹುತೇಕ ಖಚಿತವಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ನೇಮಕಕ್ಕೆ ಆಸಕ್ತಿ ವಹಿಸಿದ್ದು, ಕೇಂದ್ರ ಸೇವೆಯಲ್ಲಿರುವ ದತ್ತಾ ಅವರನ್ನು ರಾಜ್ಯಕ್ಕೆ ಕಳುಹಿಸಿಕೊಡುವಂತೆ ಕೇಂದ್ರಕ್ಕೆ ಪತ್ರ ಬರೆಯಲು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಹಾಲಿ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರು ಇದೇ ತಿಂಗಳ 31ಕ್ಕೆ ನಿವೃತ್ತಿ ಹೊಂದಲಿದ್ದು ಅವರ ಸ್ಥಾನಕ್ಕೆ ಆರ್.ಕೆ.ದತ್ತಾ ನೇಮಕ ಮಾಡಲು ಸರ್ಕಾರ ನಿರ್ಧರಿಸಿರುವುದು ಖಚಿತವಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS