ನೆನೆಗುದಿಗೆ ಬಿದ್ದಿದ್ದ ಅಕ್ರಮ-ಸಕ್ರಮಕ್ಕೆ ಮತ್ತೆ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

Akrama-Sakarama

ಬೆಂಗಳೂರು, ಡಿ.13-ಬಡ ಹಾಗೂ ಮಧ್ಯಮ ವರ್ಗದ ಮತದಾರರ ಮೇಲೆ ಕಣ್ಣಿಟ್ಟಿರುವ ಸರ್ಕಾರ ನೆನೆಗುದಿಗೆ ಬಿದ್ದಿದ್ದ ಅಕ್ರಮ -ಸಕ್ರಮಕ್ಕೆ ಮತ್ತೆ ಚಾಲನೆ ದೊರೆತಿದೆ. ನಗರ, ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ವಾಸದ ಮನೆ, ಗೋಮಾಳದಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದವರಿಗೆ ಸಾಗುವಳಿ ಪತ್ರ, ಬಗರ್‍ಹುಕುಂ ಸಾಗುವಳಿ, ಅಕ್ರಮ-ಸಕ್ರಮ ಹಕ್ಕು ಪತ್ರವನ್ನು ಎರಡು ತಿಂಗಳೊಳಗಾಗಿ ನೀಡುವಂತೆ ಕಂದಾಯ ಇಲಾಖೆ ಪ್ರಧಾನಕಾರ್ಯದರ್ಶಿ ರಮಣರೆಡ್ಡಿ ಸುತ್ತೋಲೆ ಹೊರಡಿಸಿದ್ದಾರೆ.

ಎಲ್ಲಾ ಅಕ್ರಮಗಳನ್ನು ಸಕ್ರಮ ಮಾಡುವಂತೆ ಡಿಸಿ, ಎಸಿಗಳಿಗೆ ಖಡಕ್ ಸೂಚನೆ ನೀಡಲಾಗಿದ್ದು, ವಿಫಲವಾದರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಕೂಡ ರವಾನಿಸಲಾಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯನವರಿಂದ ರಾಜ್ಯದ ಜನರಿಗೆ ಮತ್ತೊಂದು ಸಕ್ರಮ ಭಾಗ್ಯವನ್ನು ಕರುಣಿಸುವ ಮೂಲಕ ಮುಂಬರುವ ಚುನಾವಣೆಗೆ ಹೊಸದೊಂದು ತಂತ್ರ ಹೆಣೆಯುತ್ತಿದೆ. ಅಕ್ರಮ-ಸಕ್ರಮ ಯೋಜನೆ ನೆನೆಗುದಿಗೆ ಬಿದ್ದಿದ್ದು, ನಮಗೆ ಯಾವುದೇ ಉಪಯೋಗವಾಗುವುದಿಲ್ಲ ಎಂದು ಬಡ ಹಾಗೂ ಮಧ್ಯಮ ವರ್ಗದವರು ಅಂದುಕೊಂಡಿದ್ದರು.

ಈಗ ಆಯೋಜನೆಗೆ ಚಾಲನೆ ನೀಡುವ ಮೂಲಕ ಆ ಮತಗಳ ಬುಟ್ಟಿಗೆ ಕೈ ಹಾಕುವ ತಂತ್ರವನ್ನು ಹೆಣೆಯಲು ಮುಂದಾಗಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ವಾಸದ ಮನೆಗಳ ಸಕ್ರಮಕ್ಕೆ ಕಂದಾಯ ಇಲಾಖೆಯ ಪ್ರಧಾನಕಾರ್ಯದರ್ಶಿಯಿಂದ ಸುತ್ತೋಲೆ ಹೊರಬಿದ್ದಿದೆ.94ಸಿ , 95ಸಿಸಿ ಅಡಿ ಸಲ್ಲಿಸಿರುವ ಬಾಕಿ ಇರುವ ಅರ್ಜಿಗಳ ಶೀಘ್ರ ವಿಲೇವಾರಿಗೆ ಸೂಚನೆ ನೀಡಲಾಗಿದೆ. 94ಸಿ ಅಡಿ 5,96,618 ಅರ್ಜಿ ಸ್ವೀಕರಿಸಿದ್ದು, 4,08,738 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಬಾಕಿ ಉಳಿದ 1,87,880 ಅರ್ಜಿಗಳನ್ನು ಇತ್ಯರ್ಥ ಮಾಡಬೇಕಾಗಿದೆ.

ಅದೇ ರೀತಿ 94ಸಿಸಿ ಅಡಿ 2,17,622 ಅರ್ಜಿ ಸ್ವೀಕರಿಸಿದ್ದು, 1,09,801 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, 1,07,821ಅರ್ಜಿಗಳು ಇತ್ಯರ್ಥಕ್ಕೆ ಬಾಕಿ ಇದೆ. ಗೋ ಮಾಳದಲ್ಲಿ ಅನಧಿಕೃತ ಸಾಗುವಳಿ ಸಕ್ರಮಕ್ಕೆ ಡಿಸಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಬಗರ್ ಹುಕುಂ ಅಡಿ ಅರ್ಜಿ ಸಲ್ಲಿಸಿರುವ ಅರ್ಜಿ ವಿಲೇವಾರಿಗೂ ಸೂಚನೆ ನೀಡಲಾಗಿದೆ. ಅಕ್ರಮವನ್ನು ಸಕ್ರಮಗೊಳಿಸಿ ಹಕ್ಕು ಪತ್ರ ನೀಡಲು ಪತ್ರದಲ್ಲಿ ಉಲ್ಲೇಖ ಮಾಡಲಾಗಿದ್ದು, ಎರಡು ತಿಂಗಳಲ್ಲಿ ಎಲ್ಲಾ ಅಕ್ರಮವನ್ನು ಸಕ್ರಮ ಮಾಡುವಂತೆ ಗಡುವು ನೀಡಲಾಗಿದೆ.

ನಮೂನೆ 50ರಲ್ಲಿ ಸ್ವೀಕರಿಸುವ ಅರ್ಜಿಗಳ ಸಂಖ್ಯೆ 10,79,172ಇದರಲ್ಲಿ 1,54,588 ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, 24,584 ಅರ್ಜಿಗಳು ಬಾಕಿ ಇವೆ. ನಮೂನೆ 53ರಲ್ಲಿ 10,93,915 ಸ್ವೀಕೃತ ಅರ್ಜಿಗಳಲ್ಲಿ 8,76,860 ಅರ್ಜಿ ವಿಲೇವಾರಿ ಮಾಡಲಾಗಿದ್ದು, ಬಾಕಿ ಇರುವ 2,17,055 ಅರ್ಜಿಗಳನ್ನು ಇತ್ಯರ್ಥ ಮಾಡಬೇಕಾಗಿದೆ. ಶೀಘ್ರವಾಗಿ ಹಕ್ಕು ಪತ್ರ ನೀಡಿ ವಿಲೇವಾರಿ ಮಾಡುವಂತೆ ಡಿಸಿ, ಎಸಿಗಳಿಗೆ ಖಡಕ್ ಸೂಚನೆ ನೀಡಲಾಗಿದ್ದು, ಒಂದು ವೇಳೆ ವಿಫಲವಾದರೆ ಕಠಿಣ ಕ್ರಮದ ಎಚ್ಚರಿಕೆ ರವಾನಿಸಲಾಗಿದೆ.

Facebook Comments

Sri Raghav

Admin