ನೆನೆಗುದಿಗೆ ಬಿದ್ದಿರುವ ರೈಲು ಯೋಜನೆಗಳಿಗೆ ಚಾಲನೆ ನೀಡಿ : ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Suresh-PRabhu

ಬೆಂಗಳೂರು, ಮಾ.26-ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ಮೆಹಬೂಬ್‍ನಗರ, ಮುನಿರಾಬಾದ್ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸುವುದರ ಜತೆ ರೈಲ್ವೆ ಮಾರ್ಗಗಳ ವಿದ್ಯುದೀಕರಣಕ್ಕೆ ಆದ್ಯತೆ ನೀಡಬೇಕೆಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಮನವಿ ಮಾಡಿದರು.
ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಬೆಂಗಳೂರು-ಹಾಸನ ರೈಲು ಸಂಚಾರಕ್ಕೆ ಚಾಲನೆ ನೀಡಿದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇರಳ ಮತ್ತು ತಮಿಳುನಾಡಿನಲ್ಲಿ ಸಾಕಷ್ಟು ರೈಲು ಮಾರ್ಗಗಳು ವಿದ್ಯುದೀಕರಣ ಆಗಿವೆ. ರಾಜ್ಯದಲ್ಲಿ ಇನ್ನೂ ಅಷ್ಟಾಗಿ ಆಗಿಲ್ಲ. ಹಾಸನ, ಬೇಲೂರು, ಶೃಂಗೇರಿ, ಶಿವಮೊಗ್ಗ ರೈಲ್ವೆ ಮಾರ್ಗ ನಿರ್ಮಾಣ ಕಾರ್ಯ ಕೈಗೊಳ್ಳಬೇಕು. ಹಾಸನ, ಬೇಲೂರು ನಡುವೆ ಅರಣ್ಯ ಇಲ್ಲ. ಹಾಗಾಗಿ ಶೀಘ್ರವೇ ಕಾರ್ಯ ಕೈಗೊಳ್ಳಬೇಕೆಂದು ಕೋರಿದರು.

ತಾವು ಪ್ರಧಾನಿಯಾಗಿದ್ದಾಗ ಮೈಸೂರು-ಹಾಸನ ರೈಲುಮಾರ್ಗದಲ್ಲಿ ಆರ್ಥಿಕವಾಗಿ ಲಾಭವಿಲ್ಲ ಎಂದು ಅಧಿಕಾರಿಗಳು ವರದಿ ನೀಡಿದ್ದರು. ಆದರೆ ಈ ಯೋಜನೆ ಶೀಘ್ರವಾಗಿ ಮುಗಿಯಿತು. 18 ರೈಲು ಸಂಚರಿಸುತ್ತಿವೆ, ಲಕ್ಷಾಂತರ ಮಂದಿ ಜನರಿಗೆ ಒಳಿತಾಗಿದೆ ಎಂದು ಹೇಳಿದರು.  ಮೆಟ್ಟೂಪಾಳ್ಯ, ಮಳವಳ್ಳಿ, ಮುನಿರಾಬಾದ್, ಮೆಹಬೂಬ್‍ನಗರಗಳಲ್ಲಿ ರೈಲ್ವೆ ಯೋಜನೆ ಪರಿಗಣಿಸಬೇಕು. ನಾನು ಪ್ರಧಾನಿಯಾಗಿದ್ದಾಗ ಬೆಂಗಳೂರು-ಹಾಸನ ರೈಲು ಮಾರ್ಗಕ್ಕೆ ಕ್ರಿಯಾ ಯೋಜನೆ ಪ್ರಾರಂಭವಾಯಿತು. ಅದು 21 ವರ್ಷದ ನಂತರ ಇದು ಸಾಕಾರಗೊಂಡಿದೆ. ನಾನು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ತಮ್ಮ ಜೀವಿತಾವಧಿಯಲ್ಲೇ ಈ ಯೋಜನೆ ಪೂರ್ಣಗೊಂಡು ರೈಲಿನಲ್ಲಿ ಪ್ರಯಾಣಿಸಬೇಕೆಂದು ಮನವಿ ಮಾಡಿದ್ದೆ ಎಂದು ಹೇಳಿದರು.

ಡಿ.ವಿ.ಸದಾನಂದಗೌಡರು ರೈಲ್ವೆ ಸಚಿವರಾಗಿದ್ದಾಗ ಈ ರೈಲ್ವೆ ಯೋಜನೆಗೆ 165 ಕೋಟಿ ರೂ. ನೀಡಿದ್ದರು. ಎರಡೂ ಸರ್ಕಾರಗಳು ಸಹಕರಿಸಿವೆ. ಪ್ರಧಾನಿ ಮೋದಿಯವರಿಗೆ ನಾನು ಅಭಿನಂದಿಸುತ್ತೇನೆ ಎಂದು ತಿಳಿಸಿದರು. ಈ ಯೋಜನೆ ಸಾಕಾರಗೊಳ್ಳಲು ಮಾಜಿ ಸಚಿವ ಎಚ್.ಡಿ.ರೇವಣ್ಣ ಬಹಳಷ್ಟು ಶ್ರಮಿಸಿದ್ದಾರೆ. ಆದರೆ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.  ಧಾರವಾಡ-ಹುಬ್ಬಳ್ಳಿಗೂ ನೇರ ಸಂಪರ್ಕ ಕಲ್ಪಿಸಬೇಕು, ಬೆಂಗಳೂರು-ಮೈಸೂರು ಡಬ್ಲಿಂಗ್ ಮಾರ್ಗ ಮುಕ್ತಾಯ ಹಂತದಲ್ಲಿದೆ. ಬೆಂಗಳೂರು-ಕಲಬುರಗಿಗೂ ವಿದ್ಯುತ್ ಮಾರ್ಗ ನೀಡಬೇಕು ಎಂದು ದೇವೇಗೌಡರು ಸಲಹೆ ನೀಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin