ನೆಲ-ಜಲ-ಭಾಷೆ ವಿಷಯದಲ್ಲಿ ನಾವೆಲ್ಲಾ ಒಂದೇ : ಅನಂತಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

Ananth-Kumar

ಬೆಂಗಳೂರು, ಆ.27- ರಾಜ್ಯದ ನೆಲ-ಜಲ-ಭಾಷೆಗಳಿಗೆ ಧಕ್ಕೆ ಉಂಟಾಗುವ ಸಂದರ್ಭ ಎದುರಾದರೆ ಎಲ್ಲ ರಾಜಕೀಯ ಪಕ್ಷಗಳೂ, ನಾಯಕರು ಪಕ್ಷಬೇಧವಿಲ್ಲದೆ ಒಗ್ಗಟ್ಟಾಗಿ ಸರ್ಕಾರವನ್ನು ಬೆಂಬಲಿಸುತ್ತಾ ಬಂದಿದ್ದೇವೆ. ಇನ್ನು ಮುಂದೆಯೂ ನಮ್ಮ ಬೆಂಬಲ ಮುಂದುವರೆಯುತ್ತದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಹೇಳಿದರು.   ಕಾವೇರಿ ವಿವಾದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಅಭಾವದಿಂದ ರಾಜ್ಯ ಎದುರಿಸುತ್ತಿರುವ ತೀವ್ರ ಸಂಕಷ್ಟದ ಪರಿಸ್ಥಿತಿಯ ಬಗ್ಗೆ ನಮ್ಮ ವಕೀಲರ ಮೂಲಕ ಸರ್ವೋಚ್ಛ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನೀರಿಗೆ ತೀವ್ರ ಸಂಕಷ್ಟವುಂಟಾಗಿದ್ದು , ನಾವು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ. ಇಂತಹ ಸ್ಥಿತಿಯ ಬಗ್ಗೆ ನಾವು ಈಗ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಿದೆ.  ಈ ಕೆಲಸವನ್ನು ಸರ್ಕಾರ ಮಾಡಬೇಕು. ಸರ್ಕಾರದ ಈ ಕ್ರಮಕ್ಕೆ ನಮ್ಮ ಪಕ್ಷದ ಬೆಂಬಲ ಸದಾ ಇರುತ್ತದೆ. ಮೈಸೂರು, ಹಾಸನ, ಮಂಡ್ಯ, ರಾಮನಗರ ಸೇರಿದಂತೆ ಕಾವೇರಿ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸಂದರ್ಭ ಎದುರಾಗಿದೆ.  ಜನ ಕುಡಿಯುವ ನೀರಿಗೆ ಚಿಂತೆ ಮಾಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಈ ವಿಷಯದಲ್ಲಿ ನಾವು ಇಂದಿನಿಂದಲೂ ಸರ್ಕಾರಕ್ಕೆ ಬೆಂಬಲ ನೀಡುತ್ತಾ ಬಂದಿದ್ದೇವೆ. ಮುಂದೆಯೂ ನೀಡುತ್ತೇವೆ.
ಪ್ರತಿ ವರ್ಷ ಈ ವೇಳೆಗಾಗಲೇ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಬಿತ್ತನೆ ಕಾರ್ಯಗಳು ಮುಗಿದಿರುತ್ತಿದ್ದವು. ಆದರೆ ಈ ಬಾರಿ ಬಹುತೇಕ ಭೂಮಿ ಬಿತ್ತನೆಯಾಗದೆ ಹಾಗೇ ಉಳಿದಿದೆ. ಇನ್ನು ಕೆಲವು ದಿನ ಮಳೆ ಬರದಿದ್ದರೆ ಪರಿಸ್ಥಿತಿ ತುಂಬಾ ಬಿಗಡಾಯಿಸಲಿದೆ.

ಕೆ ಆರ್ಎಸ್ನಲ್ಲಿ ಪ್ರಸ್ತುತ ಲಭ್ಯವಿರುವ ನೀರು ಕುಡಿಯುವುದಕ್ಕೂ ಸಾಕಾಗುತ್ತಿಲ್ಲ. ಕಳೆದ ಎರಡು ವರ್ಷಗಳ ನಿರಂತರ ಬರದ ಬೇಗುದಿಯಲ್ಲಿ ಬೆಂದ ರಾಜ್ಯ ಇದೀಗ ಮಳೆ ಕೊರತೆಯಿಂದ ತೀವ್ರವಾದ ನೀರಿನ ಅಭಾವ ಎದುರಿಸುತ್ತಿದೆ. ಇದೊಂದು ದೊಡ್ಡ ಪ್ರಾಕೃತಿಕ ವಿಕೋಪ ಎನ್ನುವಂತಾಗಿದೆ. ಈ ಎಲ್ಲ ಅಂಶಗಳನ್ನು ನಾವು ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಬೇಕಿದೆ ಎಂದು ಅನಂತಕುಮಾರ್ ಸ್ಪಷ್ಟಪಡಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin