ನೇತಾಜಿ 121ನೇ ಜಯಂತಿ : ರಾಷ್ಟ್ರಪತಿ, ಪ್ರಧಾನಿ, ಗಣ್ಯರಿಂದ ವೀರ ಸೇನಾನಿ ಸ್ಮರಣೆ

ಈ ಸುದ್ದಿಯನ್ನು ಶೇರ್ ಮಾಡಿ

Netaji--01
ನವದೆಹಲಿ, ಜ.23-ಭಾರತದ ವೀರ ಸೇನಾನಿ ಮತ್ತು ದಿಟ್ಟ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 121ನೇ ಜನ್ಮದಿನ ಇಂದು. ಈ ಪ್ರಯುಕ್ತ ದೇಶಗೌರವ ನೇತಾಜಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಗೌರವಾಂಜಲಿ ಸಮರ್ಪಿಸಿದ್ದಾರೆ. ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ.ದೇವೇಗೌಡರು, ಡಾ.ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಹರ್ಷವರ್ಧನ ರಾಜು, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಗಣ್ಯರು ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ವೀರಸೇನಾನಿ ನೇತಾಜಿ ಅವರ ಜನ್ಮ ಜಯಂತಿ ಸಂದರ್ಭದಲ್ಲಿ ನಾನು ಭಾರತದ ಅಗ್ರಮಾನ್ಯ ನಾಯಕರು ಹಾಗೂ ಸ್ವಾತಂತ್ರ್ಯ ಸಂಗ್ರಾಮದ ದಿಟ್ಟ ಹೋರಾಟಗಾರನ ಸೇವೆ ಸ್ಮರಿಸಿ ಗೌರವಾಂಜಲಿ ಸಮರ್ಪಿಸುತ್ತೇನೆ ಎಂದು ರಾಷ್ಟ್ರಪತಿ ಟ್ವೀಟ್ ಮಾಡಿದ್ದಾರೆ. ದಾವೋಸ್‍ನಲ್ಲಿ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ವೀಡಿಯೋ ಟ್ವೀಟ್ ಮಾಡಿದ್ದು, ನೇತಾಜಿ ಶೌರ್ಯ-ಸಾಹಸವನ್ನು ಕೊಂಡಾಡಿದ್ದಾರೆ. ಭಾರತದ ವಿವಿಧ ರಾಜ್ಯಗಳಲ್ಲಿ ಇಂದು ನೇತಾಜಿ ಜನ್ಮ ಜಯಂತಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ.

ಜನವರಿ 23,1987ರಲ್ಲಿ ಒಡಿಸ್ಸಾದ ಕಟಕ್‍ನಲ್ಲಿ ಜನಿಸಿದ ಸುಭಾಷ್ ಚಂದ್ರ ಬೋಸ್, ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು, ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಗ್ರಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರೂ, ಭಾರತ ಸ್ವಾತಂತ್ರ ಹೋರಾಟದ ಸೆಳೆತಕ್ಕೆ ಒಳಗಾಗಿ ಚಳವಳಿಗೆ ಧುಮುಕಿದರು. 1942ರಲ್ಲಿ ಅವರು ಬ್ರಿಟಿಷರನ್ನು ದೇಶದಿಂದ ಬಡಿದಟ್ಟಲು ಜಪಾನ್ ನೆರವಿನೊಂದಿಗೆ ಭಾರತೀಯ ರಾಷ್ಟ್ರೀಯ ಸೇನೆ (ಇಂಡಿಯನ್ ನ್ಯಾಷನಲ್ ಆರ್ಮಿ) ಸ್ಥಾಪಿಸಿದರು. ನಂತರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಅಜಾದ್ ಹಿಂದ್ (ಸ್ವಾತಂತ್ರ ಭಾರತ) ಎಂಬ ಹೆಸರಿನಲ್ಲಿ ತಾತ್ಕಾಲಿಕ ಸರ್ಕಾರ ರಚಿಸಿದ್ದರು.  ನೇತಾಜಿ ಸಾವು ಇಂದಿಗೂ ಚಿದಂಬರ ರಹಸ್ಯವಾಗಿದೆ. ಅವರು ವಿಮಾನ ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಗೊಂದಲಗಳು ಮುಂದುವರಿದಿವೆ.

Facebook Comments

Sri Raghav

Admin