ನೈಟ್ ಲೈಫ್ ಅವಧಿ ವಿಸ್ತರಣೆ ಎಫೆಕ್ಟ್ : ಹೈರಾಣಾದ ಟ್ರಾಫಿಕ್ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

Police

ಬೆಂಗಳೂರು, ಆ.11- ನೈಟ್ ಲೈಫ್ ಅವಧಿ ವಾರಪೂರ್ತಿ ವಿಸ್ತರಿಸಿರುವುದರಿಂದ ಪಾನಮತ್ತರ ಹಾವಳಿ ಹೆಚ್ಚಾಗಿದ್ದು, ಸಂಚಾರ ಪೊಲೀಸರು ಹೈರಾಣಾಗಿದ್ದಾರೆ. ಈ ಹಿಂದೆ ಶುಕ್ರವಾರ ಮತ್ತು ಶನಿವಾರ ಮಾತ್ರ ಮಧ್ಯರಾತ್ರಿವರೆಗೆ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದ ಸಂಚಾರ ಪೊಲೀಸರು, ಇದೀಗ ವರ್ಷವಿಡೀ ಕಾರ್ಯಾಚರಣೆ ನಡೆಸಬೇಕಿದೆ.  ಪಾನಮತ್ತ ಚಾಲಕರನ್ನು ಹಿಡಿದು ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲಿಸಲು ಪ್ರತಿದಿನ ಬೆಳಗಿನ ಜಾವ 2 ರಿಂದ 3ಗಂಟೆವರೆಗೂ ಸಂಚಾರ ಪೊಲೀಸರು ಕತ್ತಲಲ್ಲಿ ಕಾದು ನಿಲ್ಲುವ ಶಿಕ್ಷೆ ಅನುಭವಿಸುವಂತಾಗಿದೆ. ನೈಟ್ ಲೈಫ್ ವಿಸ್ತರಿಸಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಜನಾಕ್ರೋಶವೂ ಒಂದೆಡೆ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ ಸಂಚಾರ ಪೊಲೀಸರು ಗೊಣಗಿಕೊಂಡೇ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಕರ್ತವ್ಯ ನಿರ್ವಹಿಸಬೇಕಿದೆ.  ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್ ಸೂಚನೆ ಮೇರೆಗೆ ಪ್ರತಿ ರಾತ್ರಿ 8.30ರಿಂದ ಬೆಳಗಿನ ಜಾವ 2 ಗಂಟೆವರೆಗೂ ಪಾನಮತ್ತ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸುವಂತೆ ನಗರದ ಎಲ್ಲ ಸಂಚಾರ ಪೊಲೀಸ್ ಠಾಣಾಧಿಕಾರಿಗಳಿಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ಆದೇಶ ರವಾನಿಸಿದ್ದಾರೆ.

ಪ್ರಕರಣಗಳ ಹೆಚ್ಚಳ:
ಇದುವರೆಗೆ ಶುಕ್ರವಾರ ಮತ್ತು ಶನಿವಾರದ ವಿಶೇಷ ಕಾರ್ಯಾಚರಣೆಯಲ್ಲಿ ರಾತ್ರಿಯೊಂದಕ್ಕೆ 540 ರಿಂದ 800 ಪ್ರಕರಣಗಳು ದಾಖಲಾಗುತ್ತಿದ್ದವು. ಈಗ ವಾರಪೂರ್ತಿ ಕಾರ್ಯಾಚರಣೆ ನಡೆಸುವುದರಿಂದ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗಲಿದೆ. ಚಾಲನಾ ಪರವಾನಗಿ ರದ್ದುಪಡಿಸಲು ಸಾರಿಗೆ ಇಲಾಖೆಗೆ ಕಳುಹಿಸುವ ಪ್ರಕರಣಗಳ ಸಂಖ್ಯೆಯಲ್ಲೂ ಹೆಚ್ಚಾಗಲಿದೆ. ಕುಡಿದು ವಾಹನ ಚಲಾಯಿಸುವುದು ತಪ್ಪು ಎಂಬ ಮನೋಭಾವ ಜನರಲ್ಲೇ ಮೂಡುವವರೆಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಪಾನಮತ್ತ ಮಹಿಳೆಯರದ್ದೆ ಕಿರಿಕಿರಿ ಹೆಚ್ಚು:
ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಸಿಕ್ಕಿಬೀಳುವ ವಾಹನ ಚಾಲಕ/ಸವಾರ ಕೇಸ್ ದಾಖಲಿಸುವ ಪೊಲೀಸರ ಜತೆ ಜಗಳಕ್ಕಿಳಿಯುವುದು, ಅನಾವಶ್ಯಕವಾಗಿ ವಾಗ್ವಾದ ನಡೆಸುವುದು ಸಾಮಾನ್ಯ. ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆಯೇ ಹಲ್ಲೆ ಮಾಡಿರುವ ಸಾಕಷ್ಟು ಪ್ರಕರಣಗಳು ಹಿಂದೆ ವರದಿಯಾಗಿವೆ. ಅದರಲ್ಲೂ ಪಾನಮತ್ತ ಮಹಿಳೆಯರನ್ನು ನಿಯಂತ್ರಿಸುವುದು ಪೊಲೀಸರಿಗೆ ಸವಾಲಿನ ಕೆಲಸ. ಜತೆಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಅಶೋಕನಗರ, ಹಾಗೂ ಕಮರ್ಷಿಯಲ್ ಸ್ಟ್ರೀಟ್ ಪ್ರದೇಶದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟ್ಗಳಿಗೆ ಬರುವ ಮದ್ಯಪಾನಿಗಳ ಸಂಖ್ಯೆ ಹೆಚ್ಚು.

ಪಾನಮತ್ತ ಮಹಿಳೆಯರ ಸಂಖ್ಯೆಯೂ ಕಡಿಮೆಯೇನಿಲ್ಲ. ಕುಡಿದು ವಾಹನ ಓಡಿಸಿ ಸಿಕ್ಕಿಬಿದ್ದರೆ ಜಗಳ ತೆಗೆಯುವ ಪಾನಮತ್ತ ಮಹಿಳೆಯರು ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾರೆ. ಒಂದೊಮ್ಮೆ ಪುರುಷರನ್ನು ನಿಯಂತ್ರಿಸಬಹುದು. ಆದರೆ, ಮಹಿಳೆಯರನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಸಂಚಾರ ಪೊಲೀಸ್ ಸಿಬ್ಬಂದಿ ಹೇಳುತ್ತಾರೆ.  ಮದ್ಯದ ಅಮಲಿನಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯಲು ಹಾಗೂ ಸವಾರರಲ್ಲಿ ಜÁಗೃತಿ ಮೂಡಿಸಲು ಸಾಕಷ್ಟು ಪ್ರಯತ್ನಿಸಲಾಗುತ್ತಿದೆ. ವಾರಪೂರ್ತಿ ತಡರಾತ್ರಿವರೆಗೆ ಮದ್ಯ ಮಾರಾಟ ಅವಧಿ ವಿಸ್ತರಣೆ ಹಿನ್ನೆಲೆಯಲ್ಲಿ ಹೆಚ್ಚುವರಿ ಸಮಯ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಪ್ರತಿ ರಾತ್ರಿ 2 ಗಂಟೆವರೆಗೆ ವಿಶೇಷ ಕಾರ್ಯಾಚರಣೆ ನಡೆಸಲು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ.
2016 ರಲ್ಲಿ ದಾಖಲಾದ ಪ್ರಕರಣಗಳು:
ಜನವರಿ- 4,889
ಫೆಬ್ರವರಿ- 5,159
ಮಾರ್ಚ್- 5,641
ಏಪ್ರಿಲ್- 3,434
ಮೇ- 1,829
ಜೂನ್ ಅಂತ್ಯದವರೆಗೆ- 2,462

Facebook Comments

Sri Raghav

Admin