‘ನೈಸ್’ ಆಗಿ ಕಾಂಗ್ರೆಸ್ ಸೇರಿದ ಖೇಣಿ

ಈ ಸುದ್ದಿಯನ್ನು ಶೇರ್ ಮಾಡಿ

Ashok-Kheni--01

ಬೆಂಗಳೂರು, ಮಾ.5-ವಿವಾದಿತ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್‍ಖೇಣಿ ಇಂದು ತಮ್ಮ ಕನ್ನಡ ಮಕ್ಕಳ ಪಕ್ಷವನ್ನು (ಕೆಎಂಪಿ)ಕಾಂಗ್ರೆಸ್‍ನೊಂದಿಗೆ ವಿಲೀನಗೊಳಿಸುವ ಮೂಲಕ ವಿಧ್ಯುಕ್ತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಮುಂತಾದವರ ನೇತೃತ್ವದಲ್ಲಿ ತಮ್ಮ ಬೆಂಬಲಿಗರೊಂದಿಗೆ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಮಾಜಿ ಸಚಿವ ಹಾಗೂ ಮೂರು ಬಾರಿ ಶಾಸಕರಾಗಿದ್ದ ಆರ್.ಎನ್.ನಾಯಕ್ ಅವರೂ ಕೂಡ ಖೇಣಿ ಅವರೊಂದಿಗೆ ಕಾಂಗ್ರೆಸ್‍ಗೆ ಸೇರ್ಪಡೆಗೊಂಡರು. ಪಕ್ಷಕ್ಕೆ ಖೇಣಿ ಅವರನ್ನು ಬರಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಖೇಣಿ ಅವರು ಯಾವುದೇ ಷರತ್ತು ಇಲ್ಲದೆ, ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಅವರ ಕನ್ನಡ ಮಕ್ಕಳ ಪಕ್ಷವನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸಿದ್ದಾರೆ. ಅವರ ಪಕ್ಷ ಸೇರ್ಪಡೆಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ.

Ashok-Kheni--04

ಸ್ಥಳೀಯ ಕಾಂಗ್ರೆಸ್ಸಿಗರು ಯಾರು ಅವರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿಲ್ಲ. ಜಿಲ್ಲಾ ಕಾಂಗ್ರೆಸ್ ಮುಖಂಡರ ಅಭಿಪ್ರಾಯಪಡೆದೆ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಬೀದರ್ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಮೀನಾಕ್ಷಿ ಸಂಗ್ರಾಮ್ ಅವರು ಕೂಡ ನಮ್ಮೊಂದಿಗಿದ್ದಾರೆ ಎಂದು ಹೇಳಿದರು. ನೈಸ್ ಸಂಸ್ಥೆ ವಿರುದ್ಧ ಯಾವುದೇ ಕಾನೂನು ಕ್ರಮಕ್ಕೆ ನಮ್ಮ ಪಕ್ಷ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು. ಆನಂದ್‍ಸಿಂಗ್, ನಾಗೇಂದ್ರ ಸೇರ್ಪಡೆಯಾಯಿತು. ಇನ್ನು ಜನಾರ್ಧನ್‍ರೆಡ್ಡಿ ಅವರನ್ನು ಯಾವಾಗ ಸೇರ್ಪಡೆ ಮಾಡಿಕೊಳ್ಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ಅಂತಹ ಸಂದರ್ಭ ಬಂದರೆ ಪರಿಶೀಲನೆ ಮಾಡೋಣ ಎಂದರು.

Ashok-Kheni--03

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ನಾವು ನೈಸ್ ಸಂಸ್ಥೆಯನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಂಡಿಲ್ಲ. ಕನ್ನಡ ಮಕ್ಕಳ ಪಕ್ಷ ಕಾಂಗ್ರೆಸ್‍ನೊಂದಿಗೆ ವಿಲೀನಗೊಂಡಿದೆ. ನೈಸ್ ಸಂಸ್ಥೆ ವಿರುದ್ಧ ಕಾನೂನು ಕ್ರಮಕ್ಕೆ ನಮ್ಮ ಯಾವುದೇ ಆಕ್ಷೇಪ ಇಲ್ಲ. ಪ್ರಧಾನಿ ಮೋದಿ, ಅಮಿತ್‍ಷಾ ಅವರು ಕಳಂಕಿತರನ್ನು ಪಕ್ಷ ಸೇರ್ಪಡೆ ಮಾಡಿಕೊಂಡರೆ ನೀವು ಯಾವುದೇ ಪ್ರಶ್ನೆ ಕೇಳುವುದಿಲ್ಲ. ಆದರೆ ಈಗ ಪ್ರಶ್ನೆ ಕೇಳುತ್ತೀರಾ ಎಂದು ಮಾಧ್ಯಮದವರನ್ನೇ ಡಿಕೆಶಿ ಪ್ರಶ್ನಿಸಿದರು.

ಅಶೋಕ್ ಖೇಣಿ ಮಾತನಾಡಿ, ನಾನು ಯಾವುದೇ ಷರತ್ತಿಲ್ಲದೆ ಪಕ್ಷ ಸೇರ್ಪಡೆಗೊಂಡಿದ್ದೇನೆ. ನನ್ನ ಕ್ಷೇತ್ರದಲ್ಲಿ ಪಕ್ಷೇತರನಾಗಿ ನಿಂತು ಗೆಲ್ಲುವ ಶಕ್ತಿ ಕೂಡ ಇದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಥಿರ ಸರ್ಕಾರ ನೀಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ಸೇರಿದ್ದೇನೆ ಎಂದು ಹೇಳಿದರು. ನಾನು ನೈಸ್ ಹಗರಣ ಮಾಡಿಲ್ಲ. ನೈಸ್ ಸಂಸ್ಥೆಯಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಮೂವರು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಿದೆ ಎಂದು ಹೇಳಿದರು.

Facebook Comments

Sri Raghav

Admin