ನೈಸ್ ವಿರುದ್ಧ ಹೋರಾಟ ಕೈಬಿಟ್ಟ ದೇವೇಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Devegouyda

ಬೆಂಗಳೂರು, ಆ.16- ಬಿಎಂಐಸಿ ಯೋಜನೆಗೆ ಸಂಬಂಧಿಸಿದ ನೈಸ್ ಸಂಸ್ಥೆಯ ವಂಚನೆ ಬಗ್ಗೆ ತಾವು ನಡೆಸುತ್ತಿದ್ದ ಹೋರಾಟ ಇಂದಿಗೆ ಮುಗಿಸಿರುವುದಾಗಿ ಪ್ರಕಟಿಸಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಈ ವಿವಾದವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊ ಯ್ಯುವುದು ರಾಜ್ಯ ಸರ್ಕಾರದ ನಿರ್ಧಾರದ ಮೇಲೆ ಅವಲಂಬಿತವಾಗಿದೆ ಎಂದು ತಿಳಿಸಿದರು.  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇನ್ನು ಮುಂದೆ ಯಾರಿಗೂ ಅರ್ಜಿ ಬರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನೈಸ್ ಅಕ್ರಮ ಕುರಿತಂತೆ ಮುಖ್ಯ ಕಾರ್ಯದರ್ಶಿ, ಪಿಡಬ್ಲ್ಯೂಡಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಸರ್ಕಾರದ ಪರ ವಕೀಲರು, ನೈಸ್ ಪರ ವಕೀಲರು ನಡೆಸಿದ ಸಭೆಯ ನಡವಳಿಕೆಗಳನ್ನು   ಸುಪ್ರೀಂಕೋರ್ಟ್‍ಗೆ ಸಲ್ಲಿಸಲಿಲ್ಲ.
ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಿದಾಗ ಸುಪ್ರೀಂಕೋರ್ಟ್‍ಗೆ ನಡವಳಿಕೆಯನ್ನು ಸಲ್ಲಿಸಬೇಕಾಗಿದೆ. ಹಾಗಾಗಿ ಮಾಹಿತಿ ನೀಡಲು ಸಾಧ್ಯವಿಲ್ಲ ಎಂಬ ಹಿಂಬರಹ ನೀಡಿದ್ದಾರೆ. ಇದು ಸರ್ಕಾರದ ಧೋರಣೆಯನ್ನು ತೋರಿಸುತ್ತದೆ ಎಂದು ಹೇಳಿದರು.

ತಮ್ಮ ಮೇಲೆ ಅಭಿವೃದ್ಧಿಗೆ ಅಡ್ಡಿಪಡಿಸುತ್ತಾರೆ ಎಂಬ ಆರೋಪ ಮಾಡುತ್ತಾರೆ ಎಂದ ಅವರು, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಸ್ಪೀಕರ್ ಆಗಿದ್ದಾಗ ನೈಸ್ ಸಂಸ್ಥೆ ಅಕ್ರಮದ ಬಗ್ಗೆ ಸದನ ಸಮಿತಿ ರಚಿಸಲಾಯಿತು.   ಸದನ ಸಮಿತಿ ರಚಿಸುವಾಗ ಸದನದಲ್ಲಿ ಸ್ಪೀಕರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಸೇರಿದಂತೆ ಪಕ್ಷಾತೀತವಾಗಿ ಹಲವು ಶಾಸಕರು ಕಟುವಾದ ಮಾತುಗಳನ್ನಾಡಿದ್ದರು. ಈಗ ಆ ಸಮಿತಿ ಏನಾಯಿತೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಿನಾರಾಯಣ ಅವರು ಅಧಿಕಾರ ವಹಿಸಿಕೊಳ್ಳುವವರೆಗೂ ಹಿಂದೆ ಇದ್ದಂತಹ ಈ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು 30 ಸಾವಿರ ಕೋಟಿಗೂ ಹೆಚ್ಚು ವಂಚನೆ ನಡೆದಿರುವ ಬಗ್ಗೆ ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ಅದೇ ರೀತಿ ಈ ಹಿಂದೆ ಇದ್ದಂತಹ ಮುಖ್ಯ ಕಾರ್ಯ ದರ್ಶಿಗಳೂ ಕೂಡ ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು ಎಂದು ವಿವರಿಸಿದರು.

1995ರಲ್ಲಿ ಬಿಎಂಐಸಿ ಯೋಜನೆ ಒಪ್ಪಂದವಾದರೂ 2002ರ ವರೆಗೂ ನೈಸ್ ಸಂಸ್ಥೆ ಭೂ ಸ್ವಾಧೀನಕ್ಕೆ ಒಂದು ಪೈಸೆ ಹಣ ಕಟ್ಟಿರಲಿಲ್ಲ. 2002ರ ಕನಕಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ತಾವು ಸ್ಪರ್ಧಿಸಿದ್ದಾಗ ಈ ಯೋಜನೆಯ ಅಕ್ರಮವನ್ನು ಗಮನಕ್ಕೆ ತಂದು, ಆನಂತರ ಆ ಭಾಗದ ರೈತರ ಪರವಾಗಿ ಹೋರಾಟ ಮಾಡಬೇಕಾಯಿತು. ತಾವು ಪ್ರಧಾನಿಯಾಗಿ ದೆಹಲಿಗೆ ಹೋಗದೆ ಮುಖ್ಯಮಂತ್ರಿಯಾಗೇ ಉಳಿದಿದ್ದಾರೆ. ಈ ಹಗರಣ ನಡೆಯಲು ಅವಕಾಶ ಕೊಡುತ್ತಿರಲಿಲ್ಲ. ವಾಸ್ತವ ಹೀಗಿದ್ದರೂ ತಮ್ಮ ಮೇಲೆಯೇ ಸಾರ್ವಜನಿಕವಾಗಿ ಆರೋಪ ಹೊರಿಸ ಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು. ಇತ್ತೀಚೆಗೆ ನಡೆದ ಬಿಎಂಐಸಿ ಕುರಿತ ಸಭೆಯ ನಡವಳಿಕೆಗಳನ್ನು ಸುಪ್ರೀಂಕೋರ್ಟ್‍ಗೂ ಸಲ್ಲಿಸದೆ ರಹಸ್ಯವಾಗಿ ಉಳಿಸಿಕೊಂಡಿರುವುದರ ಮರ್ಮವೇನು ಎಂದು ಪ್ರಶ್ನಿಸಿದರು.  ಬೆಂಗಳೂರಿನಲ್ಲಿ ರಾಜಕಾಲುವೆ ಒತ್ತುವರಿ ತೆರವು ಗೊಳಿಸುವಾಗ ಬಡವರ ಮನೆ ಒಡೆಯುತ್ತಿದ್ದಾರೆ, ಮುಖ್ಯಮಂತ್ರಿಗಳು ಬಿಲ್ಡರ್‍ಗಳನ್ನೂ ಬಿಡುವುದಿಲ್ಲ ಎನ್ನುತ್ತಿದ್ದಾರೆ. ಅವರು ಬಿಲ್ಡರ್‍ಗಳನ್ನು ಮುಟ್ಟುತ್ತಾರಾ ಎಂಬುದನ್ನು ಕಾದು ನೋಡೋಣ ಎಂದು ದೇವೇಗೌಡರು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin