ನೋಟುಗಳನ್ನು ಬದಲಿಸಿಕೊಳ್ಳಲು ಕಾಳಧನಿಕರಿಗೆ ಸಮಯ ಸಿಗುತ್ತಿಲ್ಲ : ವಿಪಕ್ಷಗಳಿಗೆ ಮೋದಿ ಎದುರೇಟು

ಈ ಸುದ್ದಿಯನ್ನು ಶೇರ್ ಮಾಡಿ

PM-Modi

ನವದೆಹಲಿ, ನ.25- ಗರಿಷ್ಠ ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸಲು ನಾವು ಕೈಗೊಂಡ ದಿಟ್ಟ ಕ್ರಮದಿಂದ ಈಗ ಭ್ರಷ್ಟಾಚಾರ ಮತ್ತು ಕಾಳಧನದ ವಿರುದ್ಧ ಸಾಮಾನ್ಯ ಪ್ರಜೆಯೂ ಈಗ ಒಬ್ಬ ಯೋಧನಾಗಿದ್ದಾನೆ ಎಂದು ಬಣ್ಣಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಸಾರ್ವಜನಿಕರ ನಿಯತ್ತಿನ ದುಡಿಮೆ ಎಂದೆಂದಿಗೂ ಸುಭದ್ರವಾಗಿರುತ್ತದೆ ಎಂದು ಅಭಯ ನೀಡಿದ್ದಾರೆ.
ದೆಹಲಿಯಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಇಂದು ಸಂಸತ್ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ದಿ ದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿತ್ತು. ಈಗ ಭಾರತವು ಜಾಗತಿಕ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಪ್ರಧಾನಿ ಹೆಮ್ಮೆಯಿಂದ ಹೇಳಿದ್ದಾರೆ.

ನಮ್ಮ ನಡೆಯಿಂದ ದಿನವೂ ಸರ್ಕಾರಕ್ಕೆ ಹಣವು ಹರಿದು ಬರುತ್ತಿದೆ. ಕಾಳಧನಿಕರು ಪ್ರತಿನಿತ್ಯವೂ ಚಿಂತಿಸುವಂತಾಗಿದೆ. ತೆರಿಗೆ ಕಟ್ಟದೇ ವಂಚಿಸಿಟ್ಟಿದ್ದ ಹಣವು ಹೊರ ಬಂದು ಸರ್ಕಾರದ ಬೊಕಸಕ್ಕೆ ಸೇರುತ್ತಿದೆ ಎಂದು ಅವರು ಹೇಳಿದರು.  500 ರೂ.ಗಳು ಮತ್ತು 1,000 ರೂ.ಗಳ ನೋಟುಗಳನ್ನು ರದ್ದುಗೊಳಿಸಲು ನಾವು ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಿಲ್ಲ ಎಂಬ ಆರೋಪ ನಮ್ಮ ಮೇಲಿದೆ. ಆದರೆ ಪೂರ್ವ ಸಿದ್ದತೆ ಮಾಡಿಕೊಳ್ಳುವಷ್ಟು ಕಾಲಾವಕಾಶ ನಮ್ಮ ಬಳಿ ಇರಲಿಲ್ಲ. ಇದಕ್ಕೆ ಕಾಲಾವಕಾಶ ನೀಡಿದ್ದರೆ ಇದರಿಂದ ಕಾಳಧನಿಕರು ಮತ್ತು ಅಕ್ರಮ ಹಣ ಹೊಂದಿರುವವರಿಗೆ ಅನುಕೂಲವಾಗುತ್ತಿತ್ತು ಎಂದು ಅವರು ಅವರು ಸರ್ಕಾರದ ನಿಲುವನ್ನು ಸಮರ್ಥಸಿಕೊಂಡಿದ್ದಾರೆ.

ಸಾಕಷ್ಟು ಸಿದ್ದತೆ ಮಾಡಿಕೊಳ್ಳಲಿಲ್ಲ ಎಂದು ನಮ್ಮ ಮೇಲೆ ಆರೋಪಿಸುವವರು ಈಗ ನಾವು ಕೈಗೊಂಡಿರುವ ಕ್ರಮಗಳನ್ನು ಅನುಸರಿಸಲು ಸಿದ್ದರಾಗಿಲ್ಲ. ಭಾರೀ ದುಡ್ಡು ಮಾಡಿರುವ ಅವರಿಗೇ ನೋಟುಗಳನ್ನು ಬದಲಿಸಿಕೊಳ್ಳಲು ಸಮಯ ಸಿಗುತ್ತಿಲ್ಲ ಎಂದು ಅವರು ತಿರುಗೇಟು ನೀಡಿದರು.  ಭ್ರಷ್ಟಾಚಾರ ಕುರಿತ ಜಾಗತಿಕ ಶ್ರೇಯಾಂಕದ ಪಟ್ಟಿಯಲ್ಲಿ ಭಾರತದ ಹೆಸರು ಇದೆ. ಇದನ್ನು ತೊಡೆದು ಹಾಕಲು ನಾವು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿತ್ತು ಎಂದು ಮೋದಿ ವಿಶ್ಲೇಷಿಸಿದರು.   ಪ್ರತಿಯೊಬ್ಬರಿಗೂ ತಮ್ಮ ಹಣವನ್ನು ಖರ್ಚು ಮಾಡುವ ಹಕ್ಕು ಇದೆ. ಅವರು ಕಷ್ಟಪಟ್ಟು ದುಡಿದ ಹಣವನ್ನು ಯಾರೂ ಕಸಿದುಕೊಳ್ಳುವಂತಿಲ್ಲ ಎಂದು ಮೋದಿ ಹೇಳಿದರು.

ವಿಶ್ವವು ಬದಲಾಗುತ್ತಿದೆ. ನಾವು ಕೂಡ ಬದಲಾವಣೆಯತ್ತ ಹೆಜ್ಜೆ ಹಾಕಬೇಕು. ನಗದು ರಹಿತ ಆರ್ಥಿಕ ವ್ಯಾಪಾರ-ವಹಿವಾಟನ್ನು ಅನುಸರಿಸಬೇಕಿದೆ. ಭ್ರಷ್ಟಾಚಾರ ಮತ್ತು ಲಂಚಾವತಾರವನ್ನು ಹತ್ತಿಕ್ಕಲು ನಾವು ಮೊಬೈಲ್ ಫೋನ್, ಇ-ಪೇಮೆಂಟ್‍ನಂಥ ಅತ್ಯಾಧುನಿಕ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin