ನೋಟು ಅಮಾನ್ಯ ಎಫೆಕ್ಟ್ : ಕುಸಿದ ದಂಧೆ ರಿಯಲ್ ವ್ಯವಹಾರದತ್ತ ರಿಯಲ್ ಎಸ್ಟೇಟ್

ಈ ಸುದ್ದಿಯನ್ನು ಶೇರ್ ಮಾಡಿ

9
ಗಜೇಂದ್ರಗಡ,ಫೆ.6– ಕೇಂದ್ರ ಸರ್ಕಾರ ಅಮಾನ್ಯಗೊಳಿಸಿದ 500 ಮತ್ತು 1000 ನೋಟುಗಳ ಬಳಿಕ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೀವ್ರ ಆತಂಕ ಮೂಡಿದ್ದು, ಇದೀಗ ರಿಯಲ್ ವ್ಯವಹಾರದತ್ತ ಅದು ಮುನ್ನುಗ್ಗುತ್ತಿದೆ. ಇದರ ಪರಿಣಾಮ ರಿಯಲ್ ಎಸ್ಟೇಟ್ ವ್ಯವಹಾರ ಕಳೆದ ನಾಲ್ಕು ತಿಂಗಳಿಂದ ಧಿಡೀರ್ ಕುಸಿದಿದೆ.ಪಟ್ಟಣದಲ್ಲಿ ರಿಯಲ್‍ಎಸ್ಟೇಟ ವೇಗವಾಗಿ ಬೆಳೆಯುತ್ತಿದ್ದರಿಂದ ಇದರ ಬಿಸಿ ಈ ಭಾಗದ ರೈತರಿಗೆ ತಟ್ಟಿತ್ತು. ಅಪರೂಪದ ಅತಿಥಿಯಂತಾಗಿರುವ ಮಳೆಯನ್ನೇ ನಂಬಿರುವ ರೈತರಿಗೆ ದಿನ ದೂಡುವುದು ಸಾಹಸವೇ ಆಗಿತ್ತು. ನೀರಿನ ಸೌಲಭ್ಯವಿಲ್ಲದೇ ಬಹಳಷ್ಟು ರೈತರು ಕಂಗಾಲಾಗಿದ್ದರು. ಕೆಲವರು ಜಮೀನು ಮಾರಿ ದೂರದ ನಗರಗಳತ್ತ ವಲಸೆ ಹೋಗುವುದು ಸಾಮಾನ್ಯ ಎಂಬಂತಾಗಿತ್ತು. ಕಳೆದ ಕೆಲ ವರ್ಷಗಳಿಂದ ಕಾಣದೇ ಇದ್ದ ನಗರೀಕರಣ ಪ್ರಕ್ರಿಯೆ ಇತ್ತೀಚಿನ ವರ್ಷಗಳಲ್ಲಿ ವೇಗ ಪಡೆದುಕೊಂಡಿತ್ತು. ಕಳೆದ ವರ್ಷದಿಂದ ಬೇರೆ ಬೇರೆ ಪಟ್ಟಣ ಹಾಗೂ ಜಿಲ್ಲೇಗಳಲ್ಲಿ ರಿಯಲ್ ಎಸ್ಟೇಟ
ಉದ್ಯಮ ಬಿದ್ದರೂ ಇಲ್ಲಿ ಯಥಾಸ್ಥಿತಿ ದರ ಇತ್ತು. ನಿವೇಶನ, ಬಡಾವಣೆ, ಅಪಾರ್ಟ್‍ಮೆಂಟ್ ನಿರ್ಮಾಣಕ್ಕೂ ಬಿಲ್ಡರ್‍ಗಳು ಕಪ್ಪು ಹಣ ಸುರಿದಿದ್ದರು.

ಆದರೆ, ನೋಟು ಅಮಾನ್ಯದಿಂದ ಭೂಮಿಯ ಬೆಲೆ ನೆಲಕಚ್ಚಿದ್ದು, ಹೂಡಿಕೆದಾರರಿಗೆ ಮಾತ್ರ ಎನ್ನುವಂತಿದ್ದ ರಿಯಲ್ ಎಸ್ಟೇಟ್ ಜನಸಾಮಾನ್ಯರಿಗೂ ಎಟುಕುವಂತಾಗಿದೆ. ಕಡಿಮೆ ದರಕ್ಕೂ ನಿವೇಶನ ಕೊಳ್ಳುವವರಿಲ್ಲದೆ, ಮಾರಾಟಗಾರರು ಕೈಕೈ ಹಿಸಕಿಕೊಳ್ಳುವಂತಾಗಿದೆ.ಈ ಮೊದಲು ಪಟ್ಟಣದಲ್ಲಿ 30*40 ವಿಸ್ತ್ರಿರ್ಣದ ನೀವೇಶನಕ್ಕೆ (ಪ್ರತಿಷ್ಠಿತ ಬಡಾವಣೆಗಳಲ್ಲಿ) 7ರಿಂದ 10 ಲಕ್ಷ ದರವಿತ್ತು. ಜೊತೆಗೆ ಎಕರೆ ಜಮೀನಿಗೆ 40 ಲಕ್ಷದಿಂದ 1 ಕೋಟಿವರಿಗೆ ಬೆಲೆ ಇತ್ತು. ಹೀಗಾಗಿ ಬಡ ಹಾಗೂ ಕೂಲಿ ಕಾರ್ಮಿಕರು ಪಟ್ಟಣದಲ್ಲಿ ಸ್ವಂತ ಮನೆ ನಿರ್ಮಿಸಿಕೊಳ್ಳುವ ಅಥವಾ ನಿವೇಶನ ಖರೀದಿಸುವ ಕನಸು ಮರೀಚಿಕೆಯಾಗಿತ್ತು. ನೋಟು ಅಮಾನ್ಯದಿಂದ ಸಂಪೂರ್ಣ ಇದರ ಚಿತ್ರಣ ಬದಲಾಗಿದ್ದು, ಈ ಹಿಂದಿನ ಅರ್ಧ ಬೆಲೆಗೆ ಭೂಮಿ, ನಿವೇಶನ ಮಾರಾಟವಾಗುತ್ತಿದ್ದರೂ ಕೊಳ್ಳುವವರು ಇಲ್ಲದಂತಾಗಿದೆ.ನೋಟು ಅಮಾನ್ಯದಿಂದ ಇನ್ನೂ ಒಂದು ವರ್ಷದವರೆಗೆ ರಿಯಲ್‍ಎಸ್ಟೇಟ್ ಉದ್ಯಮ ಚೇತರಿಕೆ ಕಾಣುವುದು ಕಷ್ಟ. ಭೂಮಿಯ ದರ ನಿರೀಕ್ಷೆಗೂ ಮೀರಿ ಕಡಿಮೆಯಾಗಿದೆ ಎಂಬುದು ಬಿಲ್ಡರ್‍ಗಳ ಅಭಿಮತ. ಆದರೆ, ಕಳೆದ ಮೂರು ವರ್ಷಗಳಿಂದ ಕಟ್ಟಡ ನಿರ್ಮಾಣದ ಸಾಮಾಗ್ರಿಗಳ ದರ ಏರಿಕೆ ಕಂಡಿದ್ದರಿಂದ ಮನೆಗಳ ದರ ಯಥಾಸ್ಥಿತಿ ಮುಂದುವರೆಯಬಹುದು.

ತಾಲೂಕಾಗುವ ಉಲ್ಲಾಸದಲ್ಲಿರುವ ಗಜೇಂದ್ರಗಡ ಜಿಲ್ಲೆಯಲ್ಲಿಯೇ ಎರಡನೇ ಶರವೇಗದಲ್ಲಿ ಬೆಳೆಯುತ್ತಿರುವ ಪಟ್ಟಣ. ಎಪಿಎಂಸಿ ಮಾರುಕಟ್ಟೆ- ವಾಣಿಜ್ಯ ವಹಿವಾಟಿನಿಂದ ಎಲ್ಲರ ಗಮನಸೆಳೆದಿದೆ. ಪಟ್ಟಣದ ಸಮೀಪವೇ ರೈಲು ಹಾದು ಹೋಗಲಿದೆ. ಅಲ್ಲದೇ ನಗರದ ಸುತ್ತಮುತ್ತ ಕಲ್ಲುಗಣಿಗಾರಿಕೆ ವ್ಯಾಪಕವಾಗಿದ್ದು ಬಹುತೇಕ ಕೃಷಿ ಜಮೀನು ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದೂ ಕೂಡ ರಿಯಲ ಎಸ್ಟೇಟ ಚಟುವಟಿಕೆಗೆ ಇನ್ನೊಂದು ಕಾರಣವಾಗಿದೆ. ಪರಿಣಾಮ ಗದಗ, ರೋಣ, ಕುಷ್ಟಗಿ, ಹನಮಸಾರ ರಸ್ತೆಗಳ ಪಕ್ಕದ ಶೇ. 80ರಷ್ಟು ಕೃಷಿ ಭೂಮಿ ರಾಜಕಾರಣಿಗಳು, ಉಧ್ಯಮಿಗಳು ಮತ್ತು ಅಧಿಕಾರಿಗಳ ಪಾಲಾಗಿವೆ.ಆದರೆ, ಇನ್ನು ಭೂಮಿ ಖರೀದಿಗೆ ಕಪ್ಪು ಹಣ ಹೂಡಿಕೆಗೆ ಅವಕಾಶ ಇರುವುದಿಲ್ಲ. ಹೀಗಾಗಿ ಬೇಡಿಕೆ ಇಳಿದು ದರ ಇಳಿಕೆಯಾಗುವ ಸಾಧ್ಯತೆಯಿದೆ. ಹೀಗಾಗಿ ಜನಸಾಮಾನ್ಯರಿಗೂ ಹೊಲ-ಮನೆ ಖರೀದಿ ಮಾಡುವ ಕನಸು ಸಾಕಾರಗೊಳ್ಳುವ ಸಮಯ ಬರುತ್ತಿದೆ. ವೇತನ ಸಂಪಾದನೆಯಲ್ಲಿ ಒಂದಿಷ್ಟು ಉಳಿಸಿ ಮನೆ ಖರೀದಿಸುವ ಚಿಂತನೆಯಲ್ಲಿರುವವರಿಗೆ ಸದಾವಕಾಶ ಬರಲಿದೆ. ಕಪ್ಪು ಹಣ ಹೂಡಿಕೆಯ ಕ್ಷೇತ್ರವಾಗಿದ್ದ ಬಡಾವಣೆ, ನಿವೇಶನಗಳಲ್ಲಿ ಇನ್ನು ಪಾರದರ್ಶಕ ಲೆಕ್ಕಾಚಾರ, ತೆರಿಗೆ ವಂಚಿಸಿ ನಡೆಯುತ್ತಿದ್ದ ವ್ಯವಹಾರಕ್ಕೂ ಕಡಿವಾಣ ಬೀಳಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin