ನೋಟು ನಿಷೇಧದಿಂದ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ:ಡಾ.ಜಿ.ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

parmeshwar

ಬೆಂಗಳೂರು, ನ.14- ನೋಟುಗಳನ್ನು ನಿಷೇಧಿಸಿರುವ ಕ್ರಮದಿಂದ ಭಾರತದ ಆರ್ಥಿಕ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಅಭಿಪ್ರಾಯಪಟ್ಟರು.ನಗರದ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜವಾಹರ್‍ಲಾಲ್ ನೆಹರು ಅವರ ಜನ್ಮದಿನೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತ ವಿಶ್ವದ 5ನೆ ಆರ್ಥಿಕ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿತ್ತು. ಇಂತಹ ಒಂದು ಸ್ಥಾನ ಗಳಿಸಲು ಸುದೀರ್ಘ ಕಾಲದ ಪ್ರಯತ್ನ ನಡೆಸಿ ಅಭಿವೃದ್ಧಿ ಪಥದಲ್ಲಿ ಸಾಗಿದ ಪರಿಣಾಮ ವಿಶ್ವದಲ್ಲೇ ತನ್ನ ಆರ್ಥಿಕ ಸ್ಥಿತಿಯನ್ನು ಸುಭದ್ರವಾಗಿಸಿಕೊಂಡಿತ್ತು. ಆದರೆ, ಮುಂಜಾಗ್ರತೆ ಇಲ್ಲದೆ ಏಕಾಏಕಿ ನೋಟುಗಳನ್ನು ನಿಷೇಧಿಸುವ ಮೂಲಕ ಪ್ರಧಾನಿ ಮೋದಿಯವರು ಕೈಗೊಂಡಿರುವ ನಿರ್ಧಾರ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಸಾಕಷ್ಟು ಪರಿಣಾಮ ಉಂಟುಮಾಡಲಿದೆ ಎಂದು ಹೇಳಿದರು.
ಕಪ್ಪು ಹಣದ ತಡೆಗೆ ನಾವು ಅಡ್ಡಿಪಡಿಸು ವುದಿಲ್ಲ. ಜನರು ಪರದಾಡುವ ಪರಿಸ್ಥಿತಿ ಉಂಟಾಗಿರುವುದರಿಂದ ಅದನ್ನು ಯೋಚಿಸಬೇಕಾದ ಅಗತ್ಯವಿದೆ. ಸ್ವಿಸ್‍ಬ್ಯಾಂಕ್‍ನಿಂದ ಹಣ ತರುತ್ತೇವೆ. ಪ್ರತಿಯೊಬ್ಬರ ಖಾತೆಗೆ ಇಂತಿಷ್ಟು ಹಣ ಇದರಿಂದ ಸಿಗಲಿದೆ ಎಂದು ಹೇಳುತ್ತಿದ್ದಂತೆ ಭಾರತಕ್ಕೆ ಯಾವುದೇ ಹಣ ಬಂದಿಲ್ಲ ಎಂದು ಟೀಕಿಸಿದರು.ಕರೆನ್ಸಿ ಬದಲಾವಣೆಯಂತಹ ಪ್ರಕ್ರಿಯೆ ಜನರಿಂದ ಸ್ವಾಗತಾರ್ಹವಾಗಿಲ್ಲ. ಬದಲಿಗೆ ತೊಂದರೆಯಾಗುತ್ತಿದೆ. ಇತ್ತೀಚೆಗೆ ಅಮೆರಿಕದ ಆರ್ಥಿಕ ವ್ಯವಸ್ಥೆ ಕುಸಿದಾಗ ಭಾರತ ಸದೃಢವಾಗಿತ್ತು. ಆದರೆ, ಇಂದಿನ ಪರಿಸ್ಥಿತಿಯಿಂದಾಗಿ ಈ ವ್ಯವಸ್ಥೆಯಲ್ಲಿ ತೊಂದರೆ ಎದುರಾಗಿದೆ ಎಂದರು.ನೆಹರು ದೇಶದ ಪ್ರಧಾನಿಯಾಗಿದ್ದಾಗಲೇ ನಾನು ಈ ದೇಶದ ಸೇವಕ ಎಂದು ಘೋಷಿಸಿದ್ದರು. ಆದರೆ, ಇದೀಗ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ. ಮೋದಿಯವರು ವಿದೇಶಗಳಿಗೆ ಹೋದಾಗ ನಮ್ಮ ದೇಶದ ಅಭಿವೃದ್ಧಿ, ಸಾಧನೆ ಬಗ್ಗೆ ಹೇಳಿಕೊಂಡು ಬರುತ್ತಿದ್ದಾರೆ.
ಇದರ ಹಿಂದೆ ಯಾರ ಕೊಡುಗೆ ಇದೆ ಎಂದು ಪ್ರಶ್ನಿಸಿದ ಅವರು, ಏಕಾಏಕಿ ಯಾವುದೂ ಮಾಡಲು ಆಗುವುದಿಲ್ಲ. ಈಗ ಎಲ್ಲ ವ್ಯವಸ್ಥೆಯೂ ಒಂದು ಹದಕ್ಕೆ ಬಂದಿದೆ. ಪ್ರಜಾಪ್ರಭುತ್ವ ನಿಯಂತ್ರಣದಲ್ಲಿದೆ. ಆದರೆ, ನೆಹರು ಅವರು ಪ್ರಧಾನಿಯಾದಾಗ ದೇಶದ ಪರಿಸ್ಥಿತಿ ಹೀಗಿರಲಿಲ್ಲ ಎಂದು ಸ್ಮರಿಸಿದರು.ನೆಹರು ಅವರು ಹಸಿವು, ಅನಕ್ಷರತೆ, ಬಡತನದಂತಹ ಸಾಕಷ್ಟು ತೊಂದರೆಗಳ ನಡುವೆಯೂ ದೇಶ ಅಭಿವೃದ್ಧಿ ಹೊಂದಲು ಅವರು ಹಾಕಿಕೊಟ್ಟ ಅಡಿಪಾಯವೇ ಕಾರಣ. 70 ವರ್ಷ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವ ಪ್ರಧಾನಿ ಮೋದಿಗೆ ಕಾಂಗ್ರೆಸ್ ಹಾಕಿಕೊಟ್ಟ ಯೋಜನೆಗಳಿಂದಲೇ ಇಂದು ದೇಶ ಅಭಿವೃದ್ಧಿ ಕಂಡಿದೆ ಎಂಬುದು ತಿಳಿದಿಲ್ಲವೆ ಎಂದರು.
ತಾವೆಷ್ಟು ಅಭಿವೃದ್ಧಿ ಮಾಡಿದ್ದೇವೆ ಎಂಬ ಬಗ್ಗೆ ಮೋದಿಯವರು ಎಲ್ಲಿಯೂ ಹೇಳುತ್ತಿಲ್ಲ. ನೆಹರು ಹಾಗೂ ಕಾಂಗ್ರೆಸ್ ಆಡಳಿತದ ಕಾಲದಲ್ಲೇ ಬಿಇಎಲ್ ಸೇರಿದಂತೆ ಇನ್ನಿತರ ದೊಡ್ಡ ಕೈಗಾರಿಕೆಗಳು ದೇಶದಲ್ಲಿ ಸ್ಥಾಪನೆಯಾಗಿ ಅಭಿವೃದ್ಧಿ ಪಥದಲ್ಲಿ ಸಾಗಿದವು. ಆದರೆ, ಬಿಜೆಪಿಯವರು ಇಂದಿಗೂ ಕಾಂಗ್ರೆಸ್‍ಅನ್ನು ಟೀಕೆ ಮಾಡುತ್ತಾರಷ್ಟೆ. ಅವರ ಸಾಧನೆ ತೋರುವುದಿಲ್ಲ ಎಂದು ಕಿಡಿಕಾರಿದರು.ಲೋಕಸಭೆಯಲ್ಲಿ ನಮಗೆ ಕೇವಲ 44 ಸೀಟು ದೊರೆತಿದೆ. ಅದನ್ನು ಒಪ್ಪಿಕೊಳ್ಳುತ್ತೇವೆ. ಮನಮೋಹನ್‍ಸಿಂಗ್ ಅವರ ಸರ್ಕಾರ 72 ಕೋಟಿಯಷ್ಟು ಕೃಷಿ ಸಾಲವನ್ನು ಮನ್ನಾ ಮಾಡಿತ್ತು. ಮೋದಿ ಅಂತಹ ಯಾವ ಕ್ರಮ ಕೈಗೊಂಡಿದ್ದಾರೆ ಹೇಳಿ ಎಂದ ಅವರು, ಜನರ ಬಗ್ಗೆ ಮೋದಿಗೆ ಕಾಳಜಿಯೇ ಇಲ್ಲ.
ರೈತರು, ಸಾರ್ವಜನಿಕರು ಯಾರ ಬಗ್ಗೆಯೂ ಕಾಳಜಿ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.2018ರಲ್ಲಿ ಅಧಿಕಾರಕ್ಕೆ ಬರಲೇಬೇಕು. ಅದಕ್ಕಾಗಿ ಶ್ರಮಿಸಲೇಬೇಕಿದೆ. ಬಿಜೆಪಿ ಯವರು 150 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ನಾವೇನುಕಡಲೆಪುರಿ ತಿನ್ನುತ್ತಿರುತ್ತೇವೆಯೇ ಎಂದು ಪ್ರಶ್ನಿಸಿದರು.ಇದೇ 19ರಂದು ಇಂದಿರಾಗಾಂಧಿಯವರ ನೂರನೆ ಜನ್ಮ ದಿನೋತ್ಸವವನ್ನು ಮಂಗಳೂರಿನಲ್ಲಿ ಆಚರಿಸಲಾಗುತ್ತಿದೆ. ಅಂದಿನಿಂದ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.ಸಚಿವ ಕೃಷ್ಣಪ್ಪ, ಮುಖಂಡರಾದ ಬಿ.ಎಲ್.ಶಂಕರ್, ಎಂ.ವಿ.ರಾಜಶೇಖರನ್, ಮಾಜಿ ಸಚಿವೆ ರಾಣಿ ಸತೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin