ನೋಟ್‍ಬ್ಯಾನ್ ನಂತರ ಬ್ಯಾಂಕ್ ಗೆ ಜಮೆಯಾದ 4 ಲಕ್ಷ ಕೋಟಿಯ ತೆರಿಗೆ ವಂಚನೆ..!

ಈ ಸುದ್ದಿಯನ್ನು ಶೇರ್ ಮಾಡಿ

4-Lacks

ನವದೆಹಲಿ, ಜ.10- ಕೇಂದ್ರ ಸರ್ಕಾರ ನೋಟು ಅಮಾನ್ಯಗೊಳಿಸಿದ ನಂತರ ಕಾಳಧನ ಮತ್ತು ಅಕ್ರಮ ಅವ್ಯವಹಾರಗಳ ವಿರುದ್ಧ ದೇಶವ್ಯಾಪಿ ಮುಂದುವರಿದಿರುವ ಕಾರ್ಯಾಚರಣೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭಾರೀ ತೆರಿಗೆ ವಂಚನೆ ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ. ಅಪನಗದೀಕರಣದ ಬಳಿಕ ಠೇವಣಿ ಇಡಲಾದ 4 ಲಕ್ಷ ಕೋಟಿ ರೂ.ಗಳಲ್ಲಿ ಭಾರೀ ಪ್ರಮಾಣದ ತೆರಿಗೆ ವಂಚನೆಯಾಗಿದೆ ಎಂದು ಶಂಕಿಸಲಾಗಿದೆ. 500 ಮತ್ತು 1000ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಅದನ್ನು ವಿನಿಮಯ ಮಾಡಿಕೊಳ್ಳಲು ನೀಡಲಾಗಿದ್ದ 50 ದಿನಗಳ ಕಾಲಾವಕಾಶದ ವೇಳೆ ಜಮೆ ಮಾಡಲಾದ 3 ರಿಂದ 4 ಲಕ್ಷ ಕೋಟಿ ರೂ. ಠೇವಣಿಯಲ್ಲಿ ದೊಡ್ಡ ತೆರಿಗೆ ವಂಚನೆ ಅಕ್ರಮಗಳು ನಡೆದಿರುವ ಬಗ್ಗೆ ಮಾಹಿತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ ಎಂದು ಐಟಿ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೋಟು ನಿಷೇಧದ ನಂತರ 60 ಲಕ್ಷಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ 2 ಲಕ್ಷಕ್ಕೂ ಅಧಿಕ ಮೊತ್ತದ ಹಣ ಜಮೆ ಆಗಿದೆ. ಈ ಬಗ್ಗೆ ನಮ್ಮಲ್ಲಿ ಸಾಕಷ್ಟು ಅಂಕಿ-ಅಂಶ ಮಾಹಿತಿಗಳಿವೆ. ಈ ಖಾತೆಗಳಲ್ಲಿ ಠೇವಣಿ ಇಡಲಾದ ಒಟ್ಟು ಮೊತ್ತವು 7.34 ಲಕ್ಷ ಕೋಟಿಗಳಿಗಿಂತಲೂ ಅಧಿಕ ಎಂದು ಅವರು ಸಾಂಖ್ಯಿಕ ವಿವರ ಒದಗಿಸಿದ್ದಾರೆ. ನ.9ರಿಂದ ಈಶಾನ್ಯ ಭಾರತದ ರಾಜ್ಯಗಳ ವಿವಿಧ ಬ್ಯಾಂಕ್‍ಗಳಲ್ಲಿ 10,700 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ಜಮೆ ಮಾಡಲಾಗಿದೆ. ಸಹಕಾರಿ ಬ್ಯಾಂಕ್‍ಗಳಲ್ಲಿ 16,000 ಕೋಟಿ ರೂ.ಗಳಿಗೂ ಹೆಚ್ಚು ಠೇವಣಿ ಸಂಗ್ರಹವಾಗಿದ್ದು, ಐಟಿ ಮತ್ತು ಇಡಿ ಅಧಿಕಾರಿಗಳು ಅವುಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನೋಟು ರದ್ದತಿ ಬಳಿಕ ನಕಲಿ/ಬೇನಾಮಿ ಬ್ಯಾಂಕ್ ಖಾತೆಗಳಲ್ಲಿ 25,000 ಕೋಟಿ ರೂ.ಗಳ ಠೇವಣಿ ಇಡಲಾಗಿದೆ. ಕರೆನ್ಸಿ ಡಿಮೊನಿಟೈಸೇಷನ್ ತರುವಾಯ 80,000 ಕೋಟಿ ರೂ.ಗಳ ಸಾಲ ಮರುಪಾವತಿಯಾಗಿದೆ.  ನ.9 ರಿಂದ ಡಿ.30ರ ವರೆಗೆ ಹಳೆ ನೋಟುಗಳ ವಿನಿಮಯಕ್ಕೆ ಸರ್ಕಾರ ಅವಕಾಶ ಒದಗಿಸಲಾಗಿತ್ತು. ಈ ಅವಧಿಯಲ್ಲಿ 60ಲಕ್ಷಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ ಸಂಗ್ರಹವಾದ 7.34 ಲಕ್ಷ ಕೋಟಿ ರೂ.ಗಳ ಠೇವಣಿಯ ಅಸಲಿತನವನ್ನು ಪರಿಶೀಲಿಸಲಾಗುತ್ತದೆ. 6.80 ಲಕ್ಷಕ್ಕೂ ಅಧಿಕ ಬ್ಯಾಂಕ್ ಖಾತೆಗಳು ಅಧಿಕೃತವಾಗಿವೆ ಎಂಬುದು ತಪಾಸಣೆಯಿಂದ ತಿಳಿದುಬಂದಿದೆ ಎಂದು ಅವರು ತಿಳಿಸಿದ್ದಾರೆ.

ದೇಶದ ವಿವಿಧ ಸಹಕಾರ ಬ್ಯಾಂಕ್‍ಗಳಲ್ಲೂ ಅತ್ಯಲ್ಪ ಅವಧಿಯಲ್ಲಿ ಸಂಗ್ರಹವಾದ ಭಾರೀ ಮೊತ್ತದ ಠೇವಣಿ ಮತ್ತು ಜಮೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಐಟಿ ಮತ್ತು ಇಡಿ ಅಧಿಕಾರಿಗಳು ತೀವ್ರ ಪರಿಶೀಲನೆ ನಡೆಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಜ.1ರ ವರೆಗೆ ಆದಾಯ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ 1,100 ಪ್ರಕರಣಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದೆ. ಇದರಲ್ಲಿ 556 ಸರ್ವೆಗಳು, 253 ಶೋಧಗಳು ಮತ್ತು 289 ಜಪ್ತಿ ಕಾರ್ಯಾಚರಣೆಗಳು ನಡೆದಿವೆ ಎಂದು ಮಾಹಿತಿ ನೀಡಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin