ನೋಟ್ ಬ್ಯಾನ್ ಎಫೆಕ್ಟ್’ನಿಂದಾಗಿ ಕಳೆ ಕಳೆದುಕೊಂಡ ಚಳಿಗಾಲದ ಅಧಿವೇಶನ

ಈ ಸುದ್ದಿಯನ್ನು ಶೇರ್ ಮಾಡಿ

Suvarna-Soudha-01
ಬೆಳಗಾವಿ, ನ.23- ಪ್ರತಿ ವರ್ಷ ಬೆಳಗಾವಿ ಅಧಿವೇಶನವೆಂದರೆ ಉತ್ತರ ಕರ್ನಾಟಕದ ಜನ ಹಬ್ಬದಂತೆ ಆಚರಿಸುತ್ತಿದ್ದರು. ಸುವರ್ಣಸೌಧದಲ್ಲಿ ಅಧಿವೇಶನ ಮಾಡುತ್ತಾರೆಂದರೆ ಇಲ್ಲಿನ ಜನರಿಗೆ ಏನೋ ಒಂದು ರೀತಿ ಸಡಗರ-ಸಂಭ್ರಮ. ಕಾರ್ಯ-ಕಲಾಪ ವೀಕ್ಷಿಸಲು ಜನ ನೂಕು-ನುಗ್ಗಲಿನಲ್ಲಿ ಸಾಲುಗಟ್ಟಿ ಬರುತ್ತಿದ್ದರು. ಅದೇಕೋ ಈ ಬಾರಿ ಜನ ಕಲಾಪದತ್ತ ಬರುತ್ತಿಲ್ಲ. ಇದೇನು ನೋಟ್‍ಬ್ಯಾನ್ ಎಫೆಕ್ಟೋ ಅಥವಾ ಜನರಿಗೆ ಆಸಕ್ತಿ ಇಲ್ಲವೋ ಗೊತ್ತಿಲ್ಲ. ಸಚಿವಾಲಯದ ಭದ್ರತಾ ಸಿಬ್ಬಂದಿಗೆ ಅಪಾರ ಜನತೆಯನ್ನು ನಿಯಂತ್ರಿಸಿ ಕಾರ್ಯ-ಕಲಾಪಕ್ಕೆ ಅನುವು ಮಾಡಿಕೊಡುತ್ತಿದ್ದ ತಲೆನೋವು ಈ ಬಾರಿ ಸ್ವಲ್ಪ ಕಡಿಮೆಯಾದಂತಿದೆ. ಅಧಿವೇಶನದ ಉಭಯ ಸದನಗಳಲ್ಲೂ ಕೂಡ ಅಂತಹ ಗಂಭೀರವಾದ ಚರ್ಚೆಗಳು ನಡೆದಂತೆ ಕಾಣುತ್ತಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕಾಗಿತ್ತು.

ಈ ಭಾಗದ ಜನ ವರ್ಷವಿಡೀ ಹೋರಾಟ ಮಾಡಿದ ಮಹದಾಯಿ ಹೋರಾಟ, ನೆನೆಗುದಿಗೆ ಬಿದ್ದಿರುವ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿರುವ ಜನರಿಗೆ ಯಾವುದರ ಬಗ್ಗೆಯೂ ಆಸಕ್ತಿ ಇದ್ದಂತೆ ಇಲ್ಲ.ನೋಟನ್ನು ನಿಷೇಧ ಮಾಡಿರುವ ಕ್ರಮ, ಅತಿಯಾದ ಪೊಲೀಸ್ ಬದ್ಧತೆ, ಶಾಸಕರು ತಮ್ಮ ಬೆಂಬಲಿಗರಿಗೆ ಪಾಸ್ ನೀಡದಿರುವುದು, ಜನತೆಗೆಅಧಿವೇಶನದ ಅಭಿರುಚಿ ಕಡಿಮೆಯಾಗಿರುವುದು, ಸುವರ್ಣಸೌಧ ಜನಬೆಂಬಲವಿಲ್ಲದೆ ಬಣಗುಡುತ್ತಿದೆ. ಮೊದಲಿದ್ದ ಹುರುಪು, ಕಳೆಯನ್ನು ಸೌಧ ಕಳೆದುಕೊಂಡಿದೆ. ಹೊರಭಾಗದಲ್ಲಿ ನಡೆಯುವ ಪ್ರತಿಭಟನೆಗಳು ಅಷ್ಟಕ್ಕಷ್ಟೆ. ಮೊದಲ ದಿನ ಮಾತ್ರ ರೈತರ ಪ್ರತಿಭಟನೆಗಳನ್ನು ಹೊರತುಪಡಿಸಿದರೆ ಮತ್ತೆ ಯಾವುದೇ ಅಂತಹ ಬೃಹತ್ ಪ್ರತಿಭಟನೆಗಳು ನಡೆಯಲಿಲ್ಲ.

 

► Follow us on –  Facebook / Twitter  / Google+

Facebook Comments

Sri Raghav

Admin