ನೋಟ್ ಬ್ಯಾನ್ ಎಫೆಕ್ಟ್ : ಅನ್ನಕ್ಕಾಗಿ ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಹೊರರಾಜ್ಯ ಕೂಲಿಗಳ ಕೂಗು

ಈ ಸುದ್ದಿಯನ್ನು ಶೇರ್ ಮಾಡಿ

Cofee-01

ಚಿಕ್ಕಮಗಳೂರು,ಡಿ.3-ಹೊಟ್ಟೆಪಾಡಿಗಾಗಿ ಹೊರರಾಜ್ಯಗಳಿಂದ ಬಂದು ಇಲ್ಲಿನ ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರ ಮೇಲೆ ಕೇಂದ್ರ ಸರ್ಕಾರದ ನೋಟು ನಿಷೇಧ ನೇರವಾಗಿ ಪರಿಣಾಮ ಬೀರಿದ್ದು , ಸಾವಿರಾರು ಜನ ಬಡ ಕೂಲಿಗಾರರು ಒಂದು ತುತ್ತು ಅನ್ನಕ್ಕಾಗಿ ಕಂಡವರ ಮುಂದೆ ಕೈಯೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ.  ಅಸ್ಸಾಂ ಮತ್ತಿತರ ರಾಜ್ಯಗಳಿಂದ ಬಂದು ಇಲ್ಲಿನ ಕಾಫಿ ಎಸ್ಟೇಟ್‍ಗಳಲ್ಲಿ ಸಾವಿರಾರು ಮಂದಿ ದುಡಿಯುತ್ತಿದ್ದಾರೆ. ಬ್ಯಾಂಕ್ ಖಾತೆ ತೆರೆಯಲು ಅವರ ಬಳಿ ಯಾವುದೇ ದಾಖಲೆಗಳಿಲ್ಲ. ಇತ್ತ ಕಾಫಿ ತೋಟದ ಮಾಲೀಕರಿಗೂ ಬ್ಯಾಂಕ್‍ಗಳಲ್ಲಿ ಸಾಕಷ್ಟು ಹಣ ನಗದು ಸಿಗುತ್ತಿಲ್ಲ. ಪ್ರತಿ ವಾರ ಮೂರ್ನಾಲ್ಕು ಲಕ್ಷ ಬಟವಾಡೆ ಮಾಡಬೇಕಾಗಿರುವ ಸ್ಥಳದಲ್ಲೇ ಅವರಿಗೆ ದೊರೆಯುತ್ತಿರುವುದು ಕೇವಲ ವಾರಕ್ಕೆ 24 ಸಾವಿರ ರೂ. ಹಾಗಾಗಿ ಮಾಲೀಕರ ಬಳಿಯೂ ಹಣವಿಲ್ಲ. ಅದರಿಂದ ಕೂಲಿ ಕೊಡಲಾಗುತ್ತಿಲ್ಲ.

ಕೂಲಿ ಮಾಡುವವರು ಹಣವಿಲ್ಲದೆ ಅಗತ್ಯ ವಸ್ತುಗಳು ದೊರೆಯದ ಕಾರಣ ಉಪವಾಸ ಮಲಗುವ ಪರಿಸ್ಥಿತಿ ಬಂದೊದಗಿದೆ. ಕುಟುಂಬ ಸಮೇತ ಇಲ್ಲಿಗೆ ಬಂದು ಕಾಫಿ ತೋಟಗಳಲ್ಲಿ ಠಿಕ್ಕಾಣಿ ಹೂಡಿರುವ ಇವರಿಗೆ ಅನ್ನದ ಸಮಸ್ಯೆ ಎದುರಾಗಿದೆ.  ಮಾಲೀಕರನ್ನೂ ದೂರುವಂತಿಲ್ಲ . ಆದರೆ ಹೊಟ್ಟೆಗೆ ತಿನ್ನಲು ಅನ್ನವಿಲ್ಲ. ದಿನಕ್ಕೆ ಕಾನೂನು ಪ್ರಕಾರ 269 ರೂ. 23 ಪೈಸೆ ಕೂಲಿ ಇದ್ದರೂ ಇವರು ಕೇವಲ 150- 200 ರೂ.ಗಳಿಗೆ ದುಡಿಯಲು ಸಿದ್ದರಿದ್ದಾರೆ. ಆದರೆ ಅದು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮನೆ ಮಂದಿಯೆಲ್ಲ ಉಪವಾಸ ಮಾಡುವುದು ಅನಿವಾರ್ಯವಾಗಿದೆ ಎಂದು ಕಣ್ಣೀರಿಡುತ್ತಿದ್ದಾರೆ.  ಇನ್ನೊಂದೆಡೆ ಮಾಲೀಕರದು ಬ್ಯಾಂಕ್‍ಗಳಲ್ಲಿ ನಗದು ಸಿಗುತ್ತಿಲ್ಲ ಎಂಬ ಗೋಳು. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಹಣ ನೀಡುವ ವ್ಯವಸ್ಥೆ ಮಾಡಬೇಕೆಂದು ಕಾಫಿ ತೋಟಗಳ ಮಾಲೀಕರು, ಕಾರ್ಮಿಕ ಸಂಘಟನೆಗಳ ಮುಖಂಡರು ವಿವಿಧ ಬ್ಯಾಂಕ್‍ಗಳು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin