ನೋಟ್ ಬ್ಯಾನ್ ನಂತರ ದಿನಕ್ಕೊಂದು ನಿರ್ಧಾರಕ್ಕೆ ಕಾರಣಕೊಟ್ಟ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-01

ನವದೆಹಲಿ, ಡಿ.30- ಗರಿಷ್ಠ ಮುಖಬೆಲೆಯ ನೋಟುಗಳ ನಿಷೇಧದ ನಂತರ ಕೇಂದ್ರ ಸರ್ಕಾರದಿಂದ ಪದೇ ಪದೇ ಕೈಗೊಳ್ಳಲಾದ ತಿದ್ದುಪಡಿಗಳು, ಬದಲಾವಣೆಗಳು ಮತ್ತು ಯು-ಟರ್ನ್‍ಗಳನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ವೈರಿಗಳ ಕುತಂತ್ರಕ್ಕೆ ಪ್ರತಿತಂತ್ರದ ರಣನೀತಿ ರೂಪಿಸಲು ಇದು ಅನಿವಾರ್ಯವಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಐನೂರು ಮತ್ತು ಒಂದು ಸಾವಿರ ಮುಖಬೆಲೆಯ ಹಳೆ ನೋಟುಗಳ ಚಲಾವಣೆಗೆ ಇಂದು 50 ದಿನಗಳ ಗಡುವು ಪೂರ್ಣಗೊಳ್ಳುವ ಸಂದರ್ಭದಲ್ಲಿ ಮಾಧ್ಯಮವೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಮಾತನಾಡಿದರು.

ನೋಟು ಅಮಾನ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಉದ್ದೇಶಪೂರ್ವಕವಾಗಿಯೇ ಅಗಾಗ ಬದಲಾವಣೆಗಳನ್ನು ಮಾಡಲಾಯಿತು. ನೋಟು ರದ್ದತಿಯ ಸದುದ್ದೇಶಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರು ಮತ್ತು ವಾಮಮಾರ್ಗಿಗಳ ಕುತಂತ್ರಗಳನ್ನು ಹಣಿಯಲು ದುಷ್ಟನೀತಿಗೆ ಪ್ರತಿಯಾಗಿ ರಣನೀತಿಯ ಅನಿವಾರ್ಯವಾಗಿತ್ತು ಎಂದು ಸಮರ್ಥಸಿಕೊಂಡಿದ್ದಾರೆ.
ಈ ವಿಷಯದಲ್ಲಿ ಕೇಂದ್ರ ಸರ್ಕಾರ ಅಗಾಗ ಮಾರ್ಪಾಡುಗಳು ಮತ್ತು ಬದಲಾವಣೆಗಳನ್ನು ಮಾಡಿದ ವಿಷಯದ ಬಗ್ಗೆ ಹೇಳುವುದಾದರೆ, ನೀತಿ ಮತ್ತು ರಣನೀತಿ ನಡುವೆ ವ್ಯತ್ಯಾಸವಿದೆ. ಇವೆರಡನ್ನೂ ಒಂದೇ ಬುಟ್ಟಿಯೊಳಗೆ ಹಾಕಬಾರದು. ನೋಟು ಅಮಾನ್ಯಗೊಳಿಸುವ ನಿರ್ಧಾರವು ನಮ್ಮ ನೀತಿಯನ್ನು ಪ್ರತಿಬಿಂಬಿಸುತ್ತದೆ. ಹಾಗೆಯೇ ಇದರ ವಿರುದ್ಧ ಧ್ವನಿ ಎತ್ತಿರುವ ವೈರಿಗಳಿಗಿಂತ ಇನ್ನೊಂದು ಹೆಜ್ಜೆ ಮುಂದೆ ಸಾಗಲು ನಾವು ಬದಲಾವಣೆಗೆಳ ಮೂಲಕ ರಣನೀತಿ ಅನುಸರಿಸಿದ್ದೇವೆ ಎಂದು ಮೋದಿ ವಿಶ್ಲೇಷಿಸಿದರು.

ನೋಟು ರದ್ದತಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ಧ ವಾಗ್ದಾಳಿಯನ್ನು ಮುಂದುವರಿಸಿದ ಅವರು 125 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಬಹುತೇಕ ನಾಗರಿಕರು ನಮ್ಮ ನಿರ್ಧಾರಕ್ಕೆ ವ್ಯಾಪಕ ಬೆಂಬಲ ನೀಡಿದ್ದಾರೆ. ವೈಯಕ್ತಿಕ ಸಂಕಷ್ಟವನ್ನು ತಾಳ್ಮೆಯಿಂದ ಎದುರಿಸಿದ್ದಾರೆ. ಅವರಿಗೆಲ್ಲಾ ನಾನು ಚಿರಋಣಿಯಾಗಿರುವುದಾಗಿ ಅವರು ಹೇಳಿದರು.  ನೋಟು ರದ್ದತಿಯು ಅಲ್ಪಕಾಲದ ನೋವು, ಆದರೆ ಇದು ದೀರ್ಘಕಾಲದ ಗೆಲುವು ಎಂದು ಬಣ್ಣಿಸಿದ ಅವರು, ನನ್ನ ನಿರ್ಧಾರದಿಂದ ಕಪ್ಪು ಹಣ ಬಯಲಿಗೆ ಬಂದಿದೆ ಎಂದು ಪುನರುಚ್ಚರಿಸಿದರು. ಖೋಟಾ ನೋಟು ಜಾಲ ಸರ್ವನಾಶವಾಗಿದೆ. ಭಯೋತ್ಪಾದಕರು, ಉಗ್ರರು, ನಕ್ಸಲರು, ಮಾವೋವಾದಿಗಳ ಮತ್ತು ಅಪರಾಧಿಗಳ ಚಟುವಟಿಕೆಗಳ ಸ್ಥಗಿತಗೊಂಡವು. ಮಾನವ ಕಳ್ಳಸಾಗಣೆ ಮತ್ತು ಮಾದಕ ವಸ್ತು ದಂಧೆಯ ಮೇಲೂ ಗಂಭೀರ ಪರಿಣಾಮ ಬೀರಿದೆ ಎಂದು ಮೋದಿ ತಿಳಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin