ನೋಟ್ ಬ್ಯಾನ್ ವಿಚಾರದಲ್ಲಿ ಮೋದಿ ನಿರ್ಧಾರಗಳಿಂದ ಭಾರೀ ನಿರಾಸೆಯಾಗಿದೆ : ದೇವೇಗೌಡ

ಈ ಸುದ್ದಿಯನ್ನು ಶೇರ್ ಮಾಡಿ

devegowda

ಬೆಂಗಳೂರು, ಜ.4- ನೋಟ್ ಬ್ಯಾನ್ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ನಿರ್ಧಾರಗಳಿಂದ ಭಾರೀ ನಿರಾಸೆ ಉಂಟಾಗಿದೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಬೇಸರ ವ್ಯಕ್ತಪಡಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದಾಗ ಮೋದಿಯವರು ದಿಟ್ಟ ಹೆಜ್ಜೆ ಇಟ್ಟಿದ್ದಾರೆಂದು ಸ್ವಾಗತಿಸಿದೆವು. ಆದರೆ ಡಿ.31ರಂದು ಅವರು ಮಾಡಿದ ಭಾಷಣದಿಂದ ತುಂಬಾ ನಿರಾಸೆ ಹಾಗೂ ನೋವುಂಟಾಗಿದೆ ಎಂದು ಹೇಳಿದರು.

ಭ್ರಷ್ಟಾಚಾರ ತೊಲಗಿಸುತ್ತೇವೆ, ಭ್ರಷ್ಟರನ್ನು ಶಿಕ್ಷಿಸುತ್ತೇವೆ ಎಂದು ಹೇಳಿದರು. ಜನ ಸಹಿಸಿಕೊಂಡರು. ಎಲ್ಲಾ ವರ್ಗದ ಜನ ಪ್ರಧಾನಿಯವರನ್ನು ಬೆಂಬಲಿಸಿದರು. ಚಿಲ್ಲರೆ ಹಣಕ್ಕೆ ತೊಂದರೆಯಾದರೂ ಸಹಿಸಿದರು. ಆದರೆ ಜನವರಿಯಲ್ಲೂ ಕೂಡ 3 ಲಕ್ಷ ವಿರುವ ಎಟಿಎಂಗಳಲ್ಲಿ 1 ಲಕ್ಷ ಎಟಿಎಂಗಳಲ್ಲಿ ನೋ ಕ್ಯಾಷ್ ಬೋರ್ಡ್ ಲಗತ್ತಿಸಲಾಗಿದೆ. ಇದು ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ಭಾಷಣದ ಕಲೆಯಿಂದ ಜನರ ಮನಸ್ಸು ಗೆಲ್ಲಲಾಗುವುದಿಲ್ಲ. ಏನೇ ಸಬೂಬು ಹೇಳಿದರೂ ಪ್ರಯೋಜನ ಇಲ್ಲ. ದೇಶಕ್ಕೆ ದೊಡ್ಡ ಸಂದೇಶ ಕೊಡುತ್ತಾರೆ ಎಂದುಕೊಂಡಿದ್ದೆ. ಅದು ನಿರಾಸೆಯಾಗಿದೆ. ನೋಟ್ ನಿಷೇಧದ ನಂತರ 60ಕ್ಕೂ ಹೆಚ್ಚು ಮಾರ್ಪಾಡು ಆಗಿದೆ. ಜನ ಹಣಕಾಸು ಗೊಂದಲಕ್ಕೀಡಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಗರ್ಭಿಣಿಯರಿಗೆ 6 ಸಾವಿರ ರೂ. ನೆರವು ನೀಡುವುದಾಗಿ ಹೇಳಿದ್ದಾರೆ. ಇದು ಆಹಾರ ಭದ್ರತಾ ಕಾಯ್ದೆಯಲ್ಲೇ ಇದೆ. ಹಿರಿಯ ನಾಗರಿಕರು ಇಡುವ ಠೇವಣಿಗೆ ಶೇ.8ರಷ್ಟು ಬಡ್ಡಿ ಕೊಡಲಾಗುತ್ತದೆ ಎಂದಿದ್ದಾರೆ. ಈಗಾಗಲೇ ಅಂಚೆ ಕಚೇರಿಗಳಲ್ಲೇ ಶೇ.8.5ರಷ್ಟು ಬಡ್ಡಿ ಸಿಗುತ್ತಿದೆ ಎಂದರು.

ರೈತರ ಸಾಲದ ಮೇಲಿನ ಬಡ್ಡಿಯನ್ನು 60 ದಿನಗಳವರೆಗೆ ಮನ್ನಾ ಎನ್ನುತ್ತಾರೆ. ಇದು ಪೂರ್ಣ ಬಡ್ಡಿಯೂ ಅಲ್ಲ, ಅಳುವ ಮಕ್ಕಳ ಕೈಗೆ ಅಪ್ಪ ಏನೋ ಕೊಟ್ಟು ಸುಮ್ಮನಿರು ಎಂಬಂತಾಯಿತು ಎಂದು ನುಡಿದರು. ರಾಜ್ಯ ಸೇರಿದಂತೆ ರಾಷ್ಟ್ರದಲ್ಲಿ ಭೀಕರ ಬರ ಕಾಡುತ್ತಿದೆ. ಪ್ರವಾಹ ಉಂಟಾಗಿದೆ. 17 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಉಗ್ರರನ್ನು ನಾಶಮಾಡುವುದಾಗಿ ಹೇಳುತ್ತಾರೆ. ಆದರೆ ಕಾಶ್ಮೀರ ಹೊತ್ತಿ ಉರಿಯುತ್ತಿದೆ ಎಂದು ದೇವೇಗೌಡರು ಹೇಳಿದರು. ಸಂಸದ ಪುಟ್ಟರಾಜು, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಪಕ್ಷದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್, ಬೆಂಗಳೂರು ನಗರ ಘಟಕ ಅಧ್ಯಕ್ಷ ಆರ್.ಪ್ರಕಾಶ್ ಮತ್ತಿತರರಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin