ನ್ಯಾಯಾಲಯಕ್ಕೆ ನಕಲಿ ಶೂರಿಟಿ ನೀಡಿ ವಂಚಿಸುತ್ತಿದ್ದ ಇಬ್ಬರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

2-Arrested

ಬೆಂಗಳೂರು, ಡಿ.9- ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗೆ ಶೂರಿಟಿ ನೀಡುವಾಗ ನ್ಯಾಯಾಲಯಕ್ಕೆ ನಕಲಿ ಶೂರಿಟಿ ನೀಡಿ ವಂಚಿಸುತ್ತಿದ್ದ ಇಬ್ಬರನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.  ಮಂಜುನಾಥ್‍ಗೌಡ, ಕೃಷ್ಣಪ್ಪ ಬಂಧಿತರಾಗಿದ್ದು, ಮತ್ತೊಬ್ಬ ಆರೋಪಿ ಪುಟ್ಟಸ್ವಾಮಿ ತಲೆಮರೆಸಿಕೊಂಡಿದ್ದಾನೆ.
ಘಟನೆ ವಿವರ: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಮಂಜುನಾಥ್‍ಗೌಡ ಎಂಬಾತ 2014ನೆ ಡಿಸೆಂಬರ್‍ನಲ್ಲಿ ಚಂದ್ರಾ ಲೇಔಟ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸೀನಾ ಅಲಿಯಾಸ್ ಕರಿಯ ಸೀನ ಎಂಬುವರಿಗೆ ಶೂರಿಟಿ ನೀಡುವಾಗ ತನ್ನ ಅಣ್ಣ ರಾಮೇಗೌಡನ ಮಾಲೀಕತ್ವದಲ್ಲಿರುವ ಆಸ್ತಿಯನ್ನು ತನ್ನದೆಂದು ಸುಳ್ಳು ಪ್ರಮಾಣ ಪತ್ರ ಸೃಷ್ಟಿಸಿದ್ದನು.

ಅಲ್ಲದೆ, ತನ್ನ ಅಣ್ಣನ ನಕಲಿ ಸಹಿ ಮಾಡಿ ಅಣ್ಣನ ಹೆಸರಿನಲ್ಲಿ ಸುಳ್ಳು ವಾಸದ ದೃಢೀಕರಣ ಪತ್ರ ಸೃಷ್ಟಿಸಿ ಅದರಲ್ಲಿ ತನ್ನ ಭಾವಚಿತ್ರ ಹಾಕಿ 8ನೆ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿ ತಾನೇ ಸಿ.ರಾಮೇಗೌಡ ಎಂದು ಪ್ರಮಾಣೀಕರಿಸಿ ನ್ಯಾಯಾಲಯಕ್ಕೆ ವಂಚಿಸಿ ಸೀನ ಎಂಬುವನಿಗೆ ಜಾಮೀನು ಕೊಡಿಸಿದ್ದನು.  ಆರೋಪಿ ಸೀನ ನ್ಯಾಯಾಲಯಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಪೊಲೀಸರು ಶೂರಿಟಿದಾರರನ್ನು ಹುಡುಕುತ್ತಿದ್ದಾಗ ಪ್ರಕರಣದ ಒಂದನೆ ಆರೋಪಿ ಮಂಜುನಾಥ್‍ಗೌಡ ಡಿ.1ರಂದು ಸಿಸಿಎಚ್-57ನೆ ನ್ಯಾಯಾಲಯದ ಮುಂದೆ ಸ್ವತಃ ಹಾಜರಾಗಿ ದಂಡ ಕಟ್ಟುವುದಾಗಿ ಹೇಳಿದ್ದನು.
ಈ ವಿಚಾರ ತಿಳಿದಿದ್ದ ಆತನ ಅಣ್ಣ ರಾಮೇಗೌಡ ಎಂಬುವನು ನ್ಯಾಯಾಲಯದ ಮುಂದೆ ಹಾಜರಾಗಿ ತಾನೇ ರಾಮೇಗೌಡ ಎಂದು, ಆತ ತನ್ನ ತಮ್ಮ ಮಂಜುನಾಥ್‍ಗೌಡ ಎಂಬ ಸತ್ಯವನ್ನು ತಿಳಿಸಿದ್ದನು.

ಆರೋಪಿ ಮಂಜುನಾಥ್‍ಗೌಡ ನಕಲಿ ಶೂರಿಟಿ ವಿಚಾರ ನೀಡಿದ್ದನ್ನು ಮನಗಂಡ ಸಿಟಿ ಸಿವಿಲ್ ಮತ್ತು ಸೆಷನ್ ನ್ಯಾಯಾಲಯದ ಅಸಿಸ್ಟೆಂಟ್ ರಿಜಿಸ್ಟ್ರಾರ್ ನೀಲೇಂದ್ರ ನಾಯಕ್‍ರವರು ಆರೋಪಿ ವಿರುದ್ಧ ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಮಂಜುನಾಥ್‍ಗೌಡನನ್ನು ಬಂಧಿಸಿ ನ್ಯಾಯಾಲಯದಿಂದ ಪೊಲೀಸ್ ವಶಕ್ಕೆ ಪಡೆದು ಕೂಲಂಕುಶವಾಗಿ ಈತನನ್ನು ವಿಚಾರಣೆಗೊಳಪಡಿಸಿದಾಗ ತಾನು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ತನ್ನ ಊರಿನವರೇ ಆದ ಕೃಷ್ಣಪ್ಪ ಹಾಗೂ ಈತನ ಸ್ನೇಹಿತ ಪುಟ್ಟಸ್ವಾಮಿ ಎಂಬುವರೊಂದಿಗೆ ಸೇರಿಕೊಂಡು ಸುಳ್ಳು ಶೂರಿಟಿ ನೀಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಮಂಜುನಾಥ್‍ಗೌಡನನ್ನು ವಿಚಾರಣೆಗೊಳಪಡಿಸಿದ ಪೊಲೀಸರು ಹಲವು ಆರೋಪಿತರಿಗೆ ಇದೇ ರೀತಿ ಶೂರಿಟಿ ನೀಡಿರಬಹುದೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮಂಜುನಾಥ್‍ಗೌಡ ನೀಡಿದ ಹೇಳಿಕೆ ಮೇರೆಗೆ ಕೃಷ್ಣಪ್ಪ ಎಂಬಾತನನ್ನು ಸಹ ಬಂಧಿಸಿ ವಿಚಾರಣೆಗೊಳಪಡಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಈ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮತ್ತೊಬ್ಬ ಆರೋಪಿ ಪುಟ್ಟಸ್ವಾಮಿ ತಲೆಮರೆಸಿಕೊಂಡಿದ್ದಾನೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin