ನ್ಯಾಯಾಲಯ ನಿಂದನೆ ಮಾಡಿದ ನ್ಯಾ. ಕರ್ಣನ್‍ಗೆ ಸುಪ್ರೀಂನಿಂದ ವಾರೆಂಟ್

ಈ ಸುದ್ದಿಯನ್ನು ಶೇರ್ ಮಾಡಿ

Karnana

ನವದೆಹಲಿ, ಮಾ.10-ಸಹದ್ಯೋಗಿ ಕುಟುಂಬಕ್ಕೆ ಕಿರುಕುಳ ನೀಡಿದರೆನ್ನಲಾದ ಪ್ರಕರಣದಲ್ಲಿ ವಿಚಾರಣೆಗೆ ಗೈರು ಹಾಜರಾಗಿ ನ್ಯಾಯಾಲಯ ನಿಂದನೆ ಮಾಡಿದ ಆರೋಪಕ್ಕಾಗಿ ಕಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಚಿನ್ನಸ್ವಾಮಿ ಸ್ವಾಮಿನಾಥನ್ ಕರ್ಣನ್ ಅವರಿಗೆ ಸುಪ್ರೀಂಕೋರ್ಟ್ ಇಂದು ಜಾಮೀನು ಪಡೆಯಬಹುದಾದ ವಾರೆಂಟ್ ಹೊರಡಿಸಿದೆ. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಲಯ ನಿಂದನೆ ಆರೋಪಕ್ಕಾಗಿ ಹೈಕೋರ್ಟ್ ನ್ಯಾಯಾಧೀಶರಿಗೆ ವಾರೆಂಟ್ ಹೊರಡಿಸಿದ ಮೊಟ್ಟ ಮೊದಲ ಪ್ರಕರಣ ಇದಾಗಿದೆ.  ಮಾರ್ಚ್ 31ರಂದು ಖುದ್ದಾಗಿ ಹಾಜರಾಗಲು ನ್ಯಾ.ಸಿ.ಎಸ್.ಕರ್ಣನ್ ಅವರಿಗೆ ಜಾಮೀನುಸಹಿತ ವಾರೆಂಟ್ ಹೊರಡಿಸುವಂತೆ ಪಶ್ಚಿಮ ಬಂಗಾಳ ಪೊಲೀಸ್ ಮಹಾ ನಿರ್ದೇಶಕರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಜಾಮೀನು ಪಡೆಯಲು ಅವರು 10,000 ರೂ.ಗಳ ವೈಯಕ್ತಿಕ ಬಾಂಡ್ ನೀಡಬೇಕಾಗುತ್ತದೆ.

ನಮ್ಮ ಪತಿ ವಿರುದ್ಧ ನ್ಯಾ. ಕರ್ಣನ್ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ ಮತ್ತು ನಮ್ಮ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮದ್ರಾಸ್ ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರ ಪತ್ನಿಯೊಬ್ಬರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ಮಾ.6 ಸೋಮವಾರ ಖುದ್ದಾಗಿ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು.
ಆದರೆ ಅವರು ತಾವಾಗಲಿ ಅಥವಾ ತಮ್ಮ ಪರವಾಗಿ ವಕೀಲರ ಮೂಲಕವಾಗಲಿ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರಾಗದೇ ನ್ಯಾಯಾಲಯ ನಿಂದನೆ ಮಾಡಿದ್ದರು.
ತಮಗೆ ಈ ಹಿಂದೆ ನೀಡಲಾಗಿದ್ದ ನೋಟಿಸ್‍ಗೆ ಪ್ರತ್ಯುತ್ತರವಾಗಿ ಮಾ.8ರಂದು ನ್ಯಾ. ಕರ್ಣನ್ ಸುಪ್ರೀಂಕೋರ್ಟ್ ರಿಜಿಸ್ಟ್ರಿಗೆ ಬರೆದ ಪತ್ರವನ್ನು ಪರಿಗಣಿಸಲು ಸರ್ವೊಚ್ಚ ನ್ಯಾಯಾಲಯ ನಿರಾಕರಿಸಿದೆ.

ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಅವರು ವೈಯಕ್ತಿಕವಾಗಿ ಹಾಜರಾಗುವಂತೆ ಮಾಡಲು ಇತರ ಪರ್ಯಾಯ ಮಾರ್ಗವಿಲ್ಲ. ಈ ಸಂಬಂಧ ಅವರಿಗೆ ಜಾಮೀನು ಪಡೆಯಬಹುದಾದ ವಾರೆಂಟ್ ಜಾರಿಗೊಳಿಸಿದ್ದೇವೆ. ಅವರನ್ನು ಬಂಧಿಸಲು ಬರುವ ಅಧಿಕಾರಿಗೆ 10,000 ರೂ. ಮೊತ್ತದ ವೈಯಕ್ತಿಕ ಬಾಂಡ್‍ನನ್ನು ಸಲ್ಲಿಸಿ ಅವರು ಜಾಮೀನು ಪಡೆಯಬಹುದಾಗಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾ.31ಕ್ಕೆ ಮುಂದೂಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವ ಏಳು ನ್ಯಾಯಮೂರ್ತಿಗಳ ಪೀಠ ತಿಳಿಸಿದೆ.  ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಜೆ.ಚೆಲಮೇಶ್ವರ್, ರಂಜನ್ ಗೊಗೈ, ಎಂ.ಬಿ.ಲೋಕುರ್, ಪಿ.ಸಿ.ಘೋಷ್ ಮತ್ತು ಕುರಿಯನ್ ಜೋಸೆಫ್ ಅವರುಗಳೂ ಈ ಪೀಠದಲ್ಲಿದ್ಧಾರೆ.

ನ್ಯಾ. ಕರ್ಣನ್ ಅವರು ಸುಪ್ರೀಂಕೋರ್ಟ್ ಆದೇಶಗಳನ್ನು ಧಿಕ್ಕರಿಸಿ ನ್ಯಾಯಾಲಯ ನಿಂದನೆ ಮಾಡಿದ್ದಾರೆ. ಹೀಗಾಗಿ ಅವರಿಗೆ ಜಾಮೀನುಸಹಿತ ವಾರೆಂಟ್ ಹೊರಡಿಸಲಾಗಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಹೇಳಿದ್ದಾರೆ.   ಕರ್ಣನ್ ವಿರುದ್ಧ ಕಿರುಕುಳ ಆರೋಪಗಳನ್ನು ಮಾಡಿ 21 ನ್ಯಾಯಾಧೀಶರಿಂದ ದೂರು ಬಂದ ಹಿನ್ನೆಲೆಯಲ್ಲಿ ಅವರನ್ನು ಮುಖ್ಯ ನ್ಯಾಯಮೂರ್ತಿ ಅವರು ಮದ್ರಾಸ್ ಹೈಕೋರ್ಟ್‍ನಿಂದ ಕಲ್ಕತ್ತ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದ್ದರು.   ವಿವಾದಗಳಿಂದ ಗುರುತಿಸಿಕೊಂಡಿರುವ ಅವರು ಈ ಹಿಂದೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ತಾವು ದಲಿತ ಎಂಬ ಕಾರಣಕ್ಕಾಗಿ ತಮ್ಮ ವಿರುದ್ಧ ಸುಳ್ಳು ಅರೋಪಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin