ನ್ಯಾ.ವಿಶ್ವನಾಥ್ ಶೆಟ್ಟಿ ನೂತನ ಲೋಕಾಯುಕ್ತ..!

ಈ ಸುದ್ದಿಯನ್ನು ಶೇರ್ ಮಾಡಿ

Lokayujta

ಬೆಂಗಳೂರು, ಜ.3-ಲೋಕಾಯುಕ್ತರ ನೇಮಕಕ್ಕೆ ಮತ್ತೆ ಚಾಲನೆ ದೊರೆತಿದೆ.  ಬ್ರಹ್ಮಾಂಡ ಭ್ರಷ್ಟಾಚಾರದಿಂದ ಸುದ್ದಿ ಮಾಡಿ ತನ್ನ ಮಗನ ಕರ್ಮಕಾಂಡದಿಂದ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಹೋಗಿದ್ದ ನ್ಯಾಯಮೂರ್ತಿ ಭಾಸ್ಕರರಾವ್ ಅವರ ಪ್ರಕರಣದ ನಂತರ ಲೋಕಾಯುಕ್ತ ನೇಮಕಾತಿ ಪ್ರಕ್ರಿಯೆ ಸ್ಥಗಿತವಾದಂತಾಗಿತ್ತು.ಈಗ ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಮತ್ತೆ ಚಾಲನೆ ನೀಡಿದ್ದು, ಈ ಸಂಬಂಧ ಜ.9ರಂದು ಉನ್ನತ ಮಟ್ಟದ ಸಭೆ ಕರೆದಿದೆ. ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಹಾಗೂ ಸುಪ್ರೀಂಕೋರ್ಟ್‍ನ ಹಿರಿಯ ವಕೀಲರಾಗಿರುವ ವಿಶ್ವನಾಥ್‍ಶೆಟ್ಟಿ ಎಂಬುವರನ್ನು ಲೋಕಾಯುಕ್ತರನ್ನಾಗಿ ನೇಮಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

ಬ್ರಹ್ಮಾಂಡ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಲೋಕಾಯುಕ್ತ ಸ್ಥಾನಕ್ಕೆ ಭಾಸ್ಕರರಾವ್ ರಾಜೀನಾಮೆ ನೀಡಿ ಒಂದು ವರ್ಷ ಕಳೆದಿದೆ. ಲೋಕಾಯುಕ್ತರಿಲ್ಲದೆ, ಲೋಕಾಯುಕ್ತ ಸಂಸ್ಥೆ ಬಣಗುಡುತ್ತಿತ್ತು. ಸಾರ್ವಜನಿಕರು ಸ್ವಯಂಸೇವಾ ಸಂಸ್ಥೆಗಳಿಂದ ಸರ್ಕಾರ ತೀವ್ರ ಆಕ್ಷೇಪಕ್ಕೆ ಗುರಿಯಾಗಿತ್ತು. ಈ ಹಿಂದೆ ಎಸ್.ಆರ್.ನಾಯಕ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಬೇಕೆಂದು ಸರ್ಕಾರ ಮಾಡಿದ ಪ್ರಯತ್ನ ಪ್ರತಿಪಕ್ಷಗಳು ಹಾಗೂ ರಾಜ್ಯಪಾಲರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿತ್ತು.

ದೇಶದಲ್ಲೇ ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆ ಅತ್ಯಂತ ದಕ್ಷವಾಗಿ ಕೆಲಸ ನಿರ್ವಹಿಸುತ್ತಿತ್ತು. ಅಂತಹ ಸಂಸ್ಥೆಯನ್ನು ನಾಮಾವಶೇಷ ಮಾಡಲಾಗಿದೆ ಎಂಬ ಆರೋಪ ತೀವ್ರವಾಗಿ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೊನೆಗೂ ಎಚ್ಚೆತ್ತ ಸರ್ಕಾರ ಲೋಕಾಯುಕ್ತರನ್ನು ನೇಮಿಸಲು ಮುಂದಾಗಿದ್ದು, ಈ ಸಂಬಂಧ ಜ.9 ರಂದು ಉನ್ನತ ಮಟ್ಟದ ಸಭೆ ಕರೆದಿದೆ.
ಈ ಸಭೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು, ಮುಖ್ಯ ಕಾರ್ಯದರ್ಶಿಗಳು, ಉಭಯ ಸದನಗಳ ಪೀಠಾಧ್ಯಕ್ಷರು, ಮುಖ್ಯಮಂತ್ರಿಗಳು, ಉಭಯಸದನಗಳ ವಿಪಕ್ಷ ನಾಯಕರು ಪಾಲ್ಗೊಂಡು ಒಮ್ಮತದ ನಿರ್ಧಾರಕ್ಕೆ ಬರಲಿದ್ದಾರೆ.

ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ವಿಶ್ವನಾಥ್‍ಶೆಟ್ಟಿ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸುವುದು ಸೂಕ್ತ ಎಂಬ ಸಲಹೆ ಕೇಳಿಬಂದಿದೆ. ಇವರು ನ್ಯಾಯಾಧೀಶರಾಗಿ, ಸುಪ್ರೀಂಕೋರ್ಟ್ ವಕೀಲರಾಗಿ ವಿವಾದರಹಿತರಾಗಿ, ದಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಥವರನ್ನು ಲೋಕಾಯುಕ್ತರನ್ನಾಗಿ ನೇಮಿಸಿದರೆ ಸಂಸ್ಥೆಯ ಗತವೈಭವ ಮರುಕಳಿಸುವ ಸಾಧ್ಯತೆ ಇದೆ. ಇದರಿಂದ ಸರ್ಕಾರಕ್ಕೆ ಬಂದಿರುವ ಅಪವಾದಗಳು ದೂರವಾಗಲಿವೆ. ಹಾಗಾಗಿ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಿ ಇವರ ಹೆಸರನ್ನು ಶಿಫಾರಸು ಮಾಡಿ ರಾಜ್ಯಪಾಲರಿಗೆ ಕಳುಹಿಸಿಕೊಡುವ ಸಾಧ್ಯತೆ ಇದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin