ನ್ಯೂಜಿಲೆಂಡ್‍ನಲ್ಲಿರುವ ಜಲಸಂಪನ್ಮೂಲ ಇಲಾಖೆಯ ಇಂಜಿನಿಯರ್‌ಗಳನ್ನು ಸ್ವದೇಶಕ್ಕೆ ಕರೆ ತರುವಂತೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 30- ನ್ಯೂಜಿಲೆಂಡ್‍ನಲ್ಲಿರುವ ಜಲಸಂಪನ್ಮೂಲ ಇಲಾಖೆಯ 12 ಇಂಜಿನಿಯರ್‌ಗಳನ್ನು ಸ್ವದೇಶಕ್ಕೆ ಕರೆ ತರುವಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಜೈಶಂಕರ್ ಅವರನ್ನು ಸಂಪರ್ಕಿಸಿ ಜೂ.7ರಂದು ಆಕ್ಲ್ಯಾಂಡ್‍ನಿಂದ ದೆಹಲಿಗೆ ಬರುವ ವಿಮಾನದಲ್ಲಿ ಇಂಜಿನಿಯರ್‍ಗಳನ್ನು ಕರೆ ತರುವಂತೆ ಮನವಿ ಮಾಡಿದ್ದಾರೆ ಎಂದು ಅಕೃತ ಪ್ರಕಟಣೆ ತಿಳಿಸಿದೆ.

ರಾಜ್ಯದ 12 ಮಂದಿ ಎಂಜಿನಿಯರ್‍ಗಳು ನ್ಯೂಜಿಲೆಂಡ್ ದೇಶದ ಕ್ರಿಸ್ಟ್ ಚರ್ಚ್ ನಗರದಲ್ಲಿ ಹೈಡ್ರಾಲಜಿ ವಿಷಯದ ಮೇಲೆ ತರಬೇತಿಗಾಗಿ ಮಾರ್ಚ್ ಮೊದಲ ವಾರದಲ್ಲಿ ತೆರಳಿದ್ದರು.

ತರಬೇತಿ ಮುಗಿಸಿ ಮಾ.23ರಂದು ಅವರು ಮರಳಬೇಕಿತ್ತು. ಆದರರೆ ದೇಶಾದ್ಯಂತ ಉಂಟಾದ ಲಾಕ್‍ಡೌನ್‍ನಿಂದಾಗಿ ಅವರೆಲ್ಲರೂ ನ್ಯೂಜಿಲೆಂಡ್‍ನಲ್ಲೇ ಉಳಿಯುವಂತಾಗಿದೆ. ಎಲ್ಲಾ ಕಡೆ ಕೊರೊನಾ ಸೋಂಕು ಹರಡಿರುವುದರಿಂದ ಭಯಭೀತರಾಗಿ ಆ ಎಂಜಿನಿಯರ್‍ಗಳು ಇ ಮೇಲ್ ಮೂಲಕ ಸಂಪರ್ಕಿಸಿ ಸ್ವದೇಶಕ್ಕೆ ಕರೆಸಿಕೊಳ್ಳುವ ಏರ್ಪಾಡು ಮಾಡುವಂತೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಅವರನ್ನು ಸ್ವದೇಶಕ್ಕೆ ಕರೆ ತರುವಂತೆ ಕೇಂದ್ರದ ವಿದೇಶಾಂಗ ಸಚಿವರಲ್ಲಿ ಮನವಿ ಮಾಡಿದ್ದಾರೆ. ಬೆಂಗಳೂರಿಗೆ ಅವರು ವಾಪಸಾದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ದೇಶನದಂತೆ ಕ್ವಾರಂಟೈನ್‍ನಲ್ಲಿಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಚಿವರು ಸೂಚಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Facebook Comments

Sri Raghav

Admin