ನ.16ರಿಂದ ಸಂಸತ್ ಅಧಿವೇಶನ : 9 ಹೊಸ ಮಸೂದೆಗೆ ಅಂಕಿತ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

Sessio-00023

ನವದೆಹಲಿ, ನ.12- ಸಂಸತ್ತಿನ ಚಳಿಗಾಲದ ಅಧಿವೇಶನ ನ.16ರಿಂದ ಆರಂಭವಾಗಲಿದ್ದು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಹಾಗೂ ಬಾಡಿಗೆ ತಾಯ್ತನ ನಿಯಮಾವಳಿಗಳಿಗೆ ಸಂಬಂಧಿಸಿದ ಮಸೂದೆಗಳೂ ಸೇರಿದಂತೆ ಒಂಭತ್ತು ಹೊಸ ವಿಧೇಯಕಗಳು ಅನುಮೋದನೆಯಾಗುವ ನಿರೀಕ್ಷೆ ಇದೆ. ಅಲ್ಲದೇ ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ಕಡಿವಾಣ ಹಾಕಲು ಭಾರೀ ಮೊತ್ತದ ದಂಡ ವಿಧಿಸುವ ಮೋಟಾರು ವಾಹನ (ತಿದ್ದುಪಡಿ) ಮಸೂದೆ-2016 ಸಹ ಅಂಗೀಕಾರವಾಗಲಿದೆ.  ಸಂಸತ್ತಿನ ಚಳಿಗಾಲದ ಅಧಿವೇಶನದ ಉಭಯ ಸದನಗಳಲ್ಲಿ ಕೇಂದ್ರೀಯ ಸರಕುಗಳು ಮತ್ತು ಸೇವೆಗಳ ತೆರಿಗೆ ಮಸೂದೆ, ಸಮಗ್ರ ಸರಕುಗಳು ಮತ್ತು ಸೇವೆಗಳ ತೆರಿಗೆ ಮಸೂದೆ, ಸರಕುಗಳು ಮತ್ತು ಸೇವೆಗಳ ತೆರಿಗೆ (ವರಮಾನ ನಷ್ಟಕ್ಕಾಗಿ ಪರಿಹಾರ) ಮಸೂದೆಗಳು ಮಂಡನೆಯಾಗಲಿದ್ದು, ಚರ್ಚೆ ಬಳಿಕ ಅವುಗಳಿಗೆ ಅನುಮೋದನೆ ಲಭಿಸಲಿದೆ.

ಬಾಡಿಗೆ ತಾಯ್ತನ ವಿಧೇಯಕವನ್ನು ಸಹ ಸದನದಲ್ಲಿ ಮಂಡಿಸಲಾಗುವುದು. ರಾಷ್ಟ್ರೀಯ ಬದಲಿ ತಾಯ್ತನ ಮಂಡಳಿ, ರಾಜ್ಯ ಬದಲಿ ತಾಯ್ತಾನ ಮಂಡಳಿಗಳ ರಚನೆ ಹಾಗೂ ಈ ವಿಧಾನ ಮತ್ತು ಪ್ರಕ್ರಿಯೆ ನಿಬಂಧನೆಗಾಗಿ ಸೂಕ್ತ ಅಧಿಕಾರಿಗಳ ನೇಮಕ ಮೊದಲಾದ ವಿಷಯಗಳ ನೀತಿ-ನಿಯಮ-ನಿಬಂಧನೆಗಳನ್ನು ಈ ಮಸೂದೆ ಒಳಗೊಂಡಿರುತ್ತದೆ.  ಇವುಗಳ ಜೊತೆ, ಮೋಟಾರು ವಾಹನ (ತಿದ್ದುಪಡಿ) ಮಸೂದೆ-2016 ಸಹ ಅಂಗೀಕಾರವಾಗಲಿದೆ. ಬೇಕಾಬಿಟ್ಟಿ ವಾಹನ ಚಾಲನೆ ಮಾಡುವವರು, ಪಾನಮತ್ತ ಚಾಲಕರು ಹಾಗೂ ಹಿಟ್ ಅಂಡ್ ರನ್ ಪ್ರಕರಣಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಈ ಮಸೂದೆಯಲ್ಲಿ ಉದ್ದೇಶಿಸಲಾಗಿದೆ. ತಪ್ಪತಸ್ಥರಿಗೆ ಈಗಿರುವ ದಂಡವನ್ನು 8-10 ಪಟ್ಟು ಏರಿಸುವ ಜೊತೆ ಜೈಲು ಶಿಕ್ಷೆ ಪ್ರಮಾಣವನ್ನು ಹೆಚ್ಚಿಸಲು ಮಸೂದೆಗೆ ತಿದ್ದುಪಡಿ ಮಾಡಲಾಗಿದೆ.

ಇದಲ್ಲದೇ, ಇಂಡಿಯನ್ ಇನ್ಸ್‍ಟಿಟ್ಯೂಟ್ಸ್ ಆಫ್ ಮ್ಯಾನೇಜ್‍ಮೆಂಟ್‍ಗಳಿಗೆ (ಐಐಎಂ) ಶಾಸನಬದ್ಧ ಸ್ಥಾನಮಾನಗಳನ್ನು ನೀಡುವ ಕುರಿತ ಐಐಎಂ ಮಸೂದೆ ಸೇರಿದಂತೆ ಇತರ ಆರು ಮಸೂದೆಗಳು ಸಹ ಚರ್ಚೆಗೆ ಮಂಡನೆಯಾಗಲಿದೆ.  ಎಚ್‍ಐವಿ/ಏಡ್ಸ್ ತಡೆ ಮತ್ತು ನಿಯಂತ್ರಣ ಮಸೂದೆ, ಮಾನಸಿಕ ಆರೋಗ್ಯ ಆರೈಕೆ ಮಸೂದೆ, ಹೆರಿಗೆ ಪ್ರಯೋಜನ ತಿದ್ದುಪಡಿ ಮಸೂದೆ, ಭಷ್ಟ್ರಾಚಾರ (ತಿದ್ದುಪಡಿ) ಮಸೂದೆ ಹಾಗೂ ಗ್ರಾಹಕರ ಸಂರಕ್ಷಣೆ ಮಸೂದೆಗಳನ್ನು ಸಹ ಅಂಗೀಕರಿಸುವ ನಿರೀಕ್ಷೆ ಇದೆ. ಕೆಲವು ಮಸೂದೆಗಳು ಈಗಾಗಲೇ ರಾಜ್ಯಸಭೆಯಲ್ಲಿ ಮಂಡನೆಯಾಗಿದ್ದು, ಉಭಯ ಸದನಗಳಲ್ಲಿ ಚರ್ಚೆಗೆ ಬರಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin