ಪಂಚರಾಜ್ಯಗಳ ಚುನಾವಣಾ ಫಲಿತಾಂಶ (Live Updates)

ಈ ಸುದ್ದಿಯನ್ನು ಶೇರ್ ಮಾಡಿ

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ( Live Update)

Result-2017


+ ಉತ್ತರ ಪ್ರದೇಶ :

ಒಟ್ಟು ಸ್ಥಾನಗಳು : 403
ಮ್ಯಾಜಿಕ್ ಸಂಖ್ಯೆ : 202
ಬಿಜೆಪಿ : 325
ಕಾಂಗ್ರೆಸ್ +ಸಮಾಜವಾದಿ ಪಾರ್ಟಿ (ಎಸ್ಪಿ) : 54
ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)  : 19
ಇತರೆ : 03


+ ಪಂಜಾಬ್ :

ಒಟ್ಟು ಸ್ಥಾನಗಳು : 117
ಮ್ಯಾಜಿಕ್ ಸಂಖ್ಯೆ : 59
ಕಾಂಗ್ರೆಸ್ : 77
ಬಿಜೆಪಿ + ಅಕಾಲಿದಳ: 18
ಆಮ್ ಆದ್ಮಿ ಪಾರ್ಟಿ (ಎಎಪಿ) : 22
ಇತರೆ : 00


+ ಉತ್ತರಾಖಂಡ್

ಒಟ್ಟು ಸ್ಥಾನಗಳು : 70
ಮ್ಯಾಜಿಕ್ ಸಂಖ್ಯೆ : 36
ಬಿಜೆಪಿ : 57
ಕಾಂಗ್ರೆಸ್ : 11
ಇತರೆ : 02


+ ಮಣಿಪುರ :

ಒಟ್ಟು ಸ್ಥಾನಗಳು : 60
ಮ್ಯಾಜಿಕ್ ಸಂಖ್ಯೆ : 31
ಬಿಜೆಪಿ : 21
ಕಾಂಗ್ರೆಸ್ : 28
ಇತರೆ : 11


+ ಗೋವಾ :

ಒಟ್ಟು ಸ್ಥಾನಗಳು : 40
ಮ್ಯಾಜಿಕ್ ಸಂಖ್ಯೆ : 21
ಬಿಜೆಪಿ : 14
ಕಾಂಗ್ರೆಸ್ : 18
ಆಮ್ ಆದ್ಮಿ ಪಾರ್ಟಿ (ಎಎಪಿ) : 00
ಇತರೆ : 08


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  


Live Updates :

ನವದೆಹಲಿ,ಮಾ.11-ಪ್ರಧಾನಿ ನರೇಂದ್ರ ಮೋದಿ ಎಂಬ ದೈತ್ಯ ಸುನಾಮಿಯ ಅಲೆಯ ಮುಂದೆ ಆಡಳಿತಾರೂಢ ಎಸ್‍ಪಿ, ಕಾಂಗ್ರೆಸ್, ಬಿಎಸ್‍ಪಿ ಪಕ್ಷಗಳು ಕೊಚ್ಚಿ ಹೋಗಿದ್ದು , ದೇಶದ ಅತಿದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತ ಪಡೆಯುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದೆ.
ರಾಜ್ಯದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 325 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಎಲ್ಲ ರಾಜಕೀಯ ಲೆಕ್ಕಾಚಾರಗಳ ಸಮೀಕ್ಷೆಗ ಳನ್ನು ಉಲ್ಟಾ ಮಾಡಿದೆ. ಬಿಜೆಪಿ ಅಬ್ಬರಕ್ಕೆ ಸೈಕಲ್ ಪಂಕ್ಚರ್ ಆದರೆ, ಕೈಗೆ ಮರ್ಮಾಘಾತವಾಗಿ, ಬಿಎಸ್‍ಪಿ ಅನೆ ಮೇಲೇಳದಷ್ಟು ಪಾತಾಳಕ್ಕೆ ಕುಸಿದಿದೆ.
ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟ 54, ಬಿಎಸ್‍ಪಿ 19 ಹಾಗೂ ಇತರರು 03 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.   ಉತ್ತರಾಖಂಡ್‍ನಲ್ಲಿ ಬಿಜೆಪಿ 3ನೇ ಎರಡಷ್ಟು ಬಹುಮತ ಪಡೆದಿದೆ. 70 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 57 ಪಡೆದರೆ, ಪಂಜಾಬ್‍ನಲ್ಲಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರ ಗದ್ದುಗೆ ಹಿಡಿದಿದೆ. ಕಡಲ ಕಿನಾರೆ ಪುಟ್ಟ ರಾಜ್ಯ ಗೋವಾ ಮತ್ತು ಮಣಿಪುರದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವ ಲಕ್ಷಣಗಳು ಕಂಡುಬಂ ದಿವೆ.

ಮೋದಿ ಸುನಾಮಿ:

ರಾಷ್ಟ್ರ ರಾಜಕಾರಣಕ್ಕೆ ದಿಕ್ಸೂಚಿ ಎಂದೇ ಹೇಳಲಾಗಿದ್ದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅಮಿತ್ ಷಾ ಜೋಡಿ ಮಾಡಿದ ಮೋಡಿ ಮತದಾರರನ್ನು ಸೂಜಿಗಲ್ಲಿನಂತೆ ಸೆಳೆದಿದೆ.  2014ರ ಲೋಕಸಭೆ ಚುನಾವಣೆಯ ಫಲಿತಾಂಶ ಪುನರಾವರ್ತನೆಗೊಂಡಿದ್ದು, ಎರಡೂವರೆ ದಶಕಗಳ ನಂತರ ರಾಜ್ಯದಲ್ಲಿ ಯಾರ ಹಂಗಿಲ್ಲದೆ ಸ್ವಂತ ಬಲದ ಮೇಲೆ ಕಮಲ ಅಧಿಕಾರ ಸ್ಥಾಪಿಸಿದೆ.   ಉತ್ತರಪ್ರದೇಶ ಇತಿಹಾಸದಲ್ಲೇ ಈವರೆಗೂ ರಾಜಕೀಯ ಪಕ್ಷವೊಂದು 325ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿರುವ ನಿದರ್ಶನಗಳಿಲ್ಲ. ಚುನಾವಣಾ ಸಮೀಕ್ಷೆಗಳು ಕೂಡ ಬಿಜೆಪಿ ಇಷ್ಟು ಪ್ರಮಾಣದಲ್ಲಿ ಗೆಲ್ಲಲಿದೆ ಎಂದು ಅಂದಾಜಿಸಿರಲಿಲ್ಲ. ಸರಳ ಬಹುಮತ ಇಲ್ಲವೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಬಹುದೆಂದು ಭವಿಷ್ಯ ನುಡಿದಿದ್ದವು. ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿರುವ ಬಿಜೆಪಿ ಅಭೂತಪೂರ್ವ ಜಯ ದಾಖಲಿಸಿದೆ.

2019ರ ಲೋಕಸಭೆ ಚುನಾವಣೆಗೆ ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿರುವ ಬಿಜೆಪಿಗೆ ಉತ್ತರಪ್ರದೇಶದ ಗೆಲುವು ಭಾರೀ ಶಕ್ತಿಯನ್ನೇ ನೀಡಿದೆ. ದೆಹಲಿ ಹಾಗೂ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿದ್ದ ಕಮಲ ಪಡೆ ನಾಯಕರಿಗೆ ಇದು ಎದೆಯುಬ್ಬಿಸುವಂತೆ ಮಾಡಿದೆ.
500 ಹಾಗೂ 1000 ನೋಟುಗಳ ಅಮಾನೀಕರಣ, ಸರ್ಜಿಕಲ್ ಸ್ಟ್ರೈಕ್ ನಂತರ ಈ ಚುನಾವಣೆ ನರೇಂದ್ರಮೋದಿ ನಾಯಕತ್ವಕ್ಕೆ ಉತ್ತರಪ್ರದೇಶ ಚುನಾವಣೆ ಓರೆಗಲ್ಲೇ ಎಂದು ವಿಶ್ಲೇಷಿಸಲಾಗಿತ್ತು. ಅದರಲ್ಲೂ ನೋಟು ಅಮಾನೀಕರಣದ ನಂತರ ಪ್ರತಿಪಕ್ಷಗಳು ಇದನ್ನೇ ಅಸ್ತ್ರವಾಗಿಟ್ಟುಕೊಂಡು ಬಿಜೆಪಿ ಮೇಲೆ ಬಿಗಿಮುದ್ದಿದ್ದವು.

ಆದರೆ ಇದೀಗ ಪ್ರಕಟಣಗೊಂಡಿರುವ ಫಲಿತಾಂಶದಲ್ಲಿ ನೋಟು ಅಮಾನೀಕರಣಕ್ಕೆ ದೇಶದ ಜನತೆ ಸಂಪೂರ್ಣ ಬೆಂಬಲ ನೀಡಿರುವುದು ಗೋಚರಿಸಿದೆ.
ಇನ್ನು ಬಿಜೆಪಿ ರಾಜ್ಯದಲ್ಲಿ ನಡೆಸಿದ ಜಾತಿ ಧ್ರುವೀಕರಣದ ಮುಂದೆ ಸಮಾಜವಾದಿ ಪಕ್ಷದ ಆಂತರಿಕ ಕಲಹ, ಮಾಯವತಿಯ ಏಕಮೇವ ಅದ್ವಿತೀಯ ನಾಯಕತ್ವಕ್ಕೆ ಭಾರೀ ಬೆಲೆ ತೆತ್ತಿದೆ. ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ರಾಜಕೀಯ ಜಾಣ್ಮೆ ಮೆರೆದಿದ್ದ ಕಾಂಗ್ರೆಸ್ ಪಕ್ಷವನ್ನು ಮತದಾರ ಸಾರಸಗಟಾಗಿ ತಿರಸ್ಕರಿಸಿದ್ದಾನೆ.   ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ದಿ ಮಂತ್ರ, ದಲಿತರು, ಹಿಂದುಳಿದವರಿಗೆ ಹೆಚ್ಚಿನ ಟಿಕೆಟ್ ನೀಡಿರುವುದು, ಖುದ್ದು ತಾವೇ ಗಲ್ಲಿ ಗಲ್ಲಿಗಳ ಮೂಲಕ ರೋಡ್ ಶೋ ನಡೆಸಿದ್ದು ಮತದಾರನ ಮೇಲೆ ಭಾರೀ ಪ್ರಭಾವ ಬೀರಿದೆ.

ಆರಂಭದಿಂದಲೇ ಮುನ್ನಡೆ:

ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಬಿಜೆಪಿ ಮುನ್ನಡೆಯನ್ನು ಕೊನೆಯ ಸುತ್ತಿನವರೆಗೂ ಕಾಯ್ದುಕೊಂಡಿತ್ತು.
ಮೊದಲ ಸುತ್ತಿನಲ್ಲಿ ಎಸ್‍ಪಿ, ಬಿಎಸ್‍ಪಿ ಒಂದಿಷ್ಟು ಪೈಪೋಟಿ ನೀಡಿದವಾದರೂ ತದನಂತರ ಬಿಜೆಪಿ ಫಿನಿಕ್ಸ್‍ನಂತೆ ಎದ್ದು ಬಹುತೇಕ ಎಲ್ಲ ಕಡೆಯೂ ಕಮಲ ಅರಳಿತು.   ರಾಜ್ಯದ ಅವಧ್, ಪೂರ್ವಾಂಚಲ, ಬುಂದೇಲ್‍ಖಂಡ್, ಪೂರ್ವಪ್ರದೇಶ, ಗೋರಖ್‍ಪುರ, ವಾರಣಾಸಿ ಸೇರಿದಂತೆ ಬಹುತೇಕ ಎಲ್ಲ ಕಡೆಯೂ ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ.

ದಲಿತರು, ಜಾಟರು, ರಜಪೂತರು, ಕುರ್ಮಿ, ಬ್ರಾಹ್ಮಣರು ಸೇರಿದಂತೆ ಎಲ್ಲಾ ಸಮುದಾಯದವರು ಬಿಜೆಪಿಯ ಕೈ ಹಿಡಿದಿವೆ.   ಈ ಸಮುದಾಯಗಳ ಮೇಲೆ ಕಣ್ಣಿಟ್ಟಿದ್ದ ಎಸ್‍ಪಿ ಅಭ್ಯರ್ಥಿಗಳು ಹೀನಾಯ ಸೋಲು ಕಂಡಿದ್ದರೆ, ಮಾಯವತಿಯ ದಲಿತ ಬ್ಯಾಂಕ್ ಭದ್ರವಾಗಿದೆ. ಆದರೆ ಸೀಟು ಗಳಿಕೆಯಲ್ಲಿ ಅವರು ಭಾರೀ ಮುಖಭಂಗ ಅನುಭವಿಸಿದ್ದಾರೆ.   6 ಮತ್ತು 7ನೇ ಸುತ್ತಿನ ಮತದಾನದ ವೇಳೆ ಖುದ್ದು ಮೂರು ದಿನ ವಾರಣಾಸಿಯಲ್ಲೇ ವಾಸ್ತವ್ಯ ಹೂಡಿದ್ದ ನರೇಂದ್ರ ಮೋದಿ ಮೋಡಿಗೆ ಮತದಾರರ ಒಲಿದಿದ್ದಾನೆ.   ಗೋರಖ್‍ಪುರ, ವಾರಣಾಸಿ, ಲಕ್ನೋ ಸೇರಿದಂತೆ ಅನೇಕ ಕಡೆ ಬಿಜೆಪಿ ಈ ಎರಡೂ ಪಕ್ಷಗಳನ್ನು ಗುಡಿಸಿ ಹಾಕಿದೆ.   ಈ ಚುನಾವಣೆ ರಾಷ್ಟ್ರ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವಾದರೂ ದೇಶದಲ್ಲೇ ಅತಿಹೆಚ್ಚು ಸಂಸದರನ್ನು ಹೊಂದಿರುವ ಉತ್ತರಪ್ರದೇಶದ ಗೆಲುವು ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿಯ ಗೆಲುವಿಗೆ ಮೆಟ್ಟಿಲಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

+ ಗೋವಾ ಸಿಎಂ ಲಕ್ಷ್ಮಿ ಪರ್ಸೇಕರ್ ಪರಾಭವ

ಪಣಜಿ,ಮಾ.11- ಅಚ್ಚರಿಯ ಬೆಳವಣಿಗೆಯಲ್ಲಿ ಗೋವಾದ ಮುಖ್ಯಮಂತ್ರಿ ಲಕ್ಷ್ಮಿ ಪರ್ಸೇಕರ್ ಪರಾಭವಗೊಂಡಿದ್ದಾರೆ. ಗೋವಾದ ಮಂಡ್ರೇಮ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಲಕ್ಷ್ಮಿ ಪರ್ಸೇಕರ್ ಕಾಂಗ್ರೆಸ್ ಅಭ್ಯರ್ಥಿ ದಯಾನಂದ್ ಪಾಟೀಲ್ ಸೋಪ್ಟೆ ಅವರ ವಿರುದ್ಧ ಸೋಲು ಅನುಭವಿಸಿದ್ದಾರೆ. ಪ್ರಾರಂಭಿಕ ಸುತ್ತಿನಿಂದಲೂ ಹಿನ್ನಡೆ ಅನುಭವಿಸಿದ್ದ ಪರ್ಸೇಕರ್ ಸುಮಾರು 1700ಕ್ಕೂ ಅಧಿಕ ಮತಗಳಿಂದ ಸೋಲು ಅನುಭವಿಸಿ ಮತಗಟ್ಟೆಯಿಂದ ನಿರ್ಗಮಿಸಿದರು.   ಮುಖ್ಯಮಂತ್ರಿಯೇ ಪರಾಭವಗೊಂಡಿರುವುದರಿಂದ ಬಿಜೆಪಿಗೆ ಭಾರೀ ಮುಜುಗರವಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕರ್ ಕೇಂದ್ರದಲ್ಲಿ ರಕ್ಷಣಾ ಸಚಿವರಾದ ಕಾರಣ ರಾಜೀನಾಮೆ ನೀಡಿದ್ದರು. ಅಚ್ಚರಿ ಎಂಬಂತೆ ಮುಖ್ಯಮಂತ್ರಿ ಅಭ್ಯರ್ಥಿಗೆ ಲಕ್ಷ್ಮಿ ಪರ್ಸೇಕರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಅವರೇ ಪರಾಭವಗೊಂಡಿರುವುದರಿಂದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.  [ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ( Live Updates)  ]

+ ಕಾಂಗ್ರೆಸ್‍ಗೆ ಸಂಜೀವಿನಿಯಾದ ಪಂಜಾಬ್ : 

ಚಂಡೀಘಡ ,ಮಾ.11-2014ರ ಲೋಕಸಭೆ ಚುನಾವಣೆ ನಂತರ ಸಾಲು ಸಾಲು ಸೋಲಿನ ಸುಳಿಗೆ ಸಿಲುಕಿದ್ದ ಕಾಂಗ್ರೆಸ್ ಪಕ್ಷಕ್ಕೆ ಪಂಜಾಬ್ ಸಂಜೀವಿನಿಯಾಗಿ ಪರಿಣಮಿಸಿದೆ.
ಎಲ್ಲರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಕಾಂಗ್ರೆಸ್ ಪಂಜಾಬ್‍ನಲ್ಲಿ ಸ್ಪಷ್ಟ ಬಹುಮತದ ಮೂಲಕ ಅಧಿಕಾರದ ಗದ್ದುಗೆ ಹಿಡಿದಿದೆ. ಈ ಮೂಲಕ ತಾನೇ ಆಡಳಿತದಲ್ಲಿದ್ದ ಉತ್ತರಾಖಂಡ್ ಕಳೆದುಕೊಂಡರೂ ಮೋದಿ ಕಣಜದಲ್ಲಿ ಗೆಲುವಿನ ಪತಾಕೆ ಹಾರಿಸಿದೆ.   ರಾಜ್ಯದ ಒಟ್ಟು 117 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 65 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿದೆ. ಆಡಳಿತಾರೂಢ ಶಿರೋಮಣಿ ಅಕಾಲಿದಳ-ಬಿಜೆಪಿ ಮೈತ್ರಿಕೂಟಕ್ಕೆ ಭಾರೀ ಮುಖಭಂಗವಾಗಿದೆ.

ದೆಹಲಿಯಲ್ಲಿ ಮಾಡಿದ ಜಾದೂವಿನಂತೆ ಪಂಜಾಬ್‍ನಲ್ಲೂ ಎಎಪಿ ಅಧಿಕಾರ ಹಿಡಿಯಲಿದೆ ಎಂಬ ಚುನಾವಣೆ ಸಮೀಕ್ಷೆಗಳು ಮತ್ತು ರಾಜಕೀಯ ವಿಶ್ಲೇಷಕರ ಅಭಿಪ್ರಾಯ ಕೈಕೊಟ್ಟಿದೆ.
ಎಎಪಿ ಇಲ್ಲಿ 22 ಕ್ಷೇತ್ರಗಳನ್ನು ಗೆದ್ದಿದ್ದರೆ ಎರಡು ಬಾರಿ ಅಧಿಕಾರ ನಡೆಸಿದ್ದ ಎಸ್‍ಎಡಿ-ಬಿಜೆಪಿ ಮೈತ್ರಿಕೂಟ 30 ಕ್ಷೇತ್ರಗಳನ್ನು ಪಡೆದಿದೆ. ಮುಖ್ಯಮಂತ್ರಿ ಬಾದಲ್ ಸಿಂಗ್ ಅವರ ಭ್ರಷ್ಟಾಚಾರ, ಡ್ರಗ್ ಮಾಫಿಯಾ ನಿರುದ್ಯೋಗ ಸೇರಿದಂತೆ ಹಲವು ಪ್ರಚಲಿತ ಸಮಸ್ಯೆಗಳು ಆಡಳಿತಾ ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಿದೆ.   ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಘೋಷಿಸಿದ ಪರಿಣಾಮ ಕ್ಯಾಪ್ಟನ್ ಅಮರೇಂದ್ರ ಸಿಂಗ್ ಅವರ ವರ್ಚಸ್ಸು ಪಕ್ಷಕ್ಕೆ ವರವಾಗಿ ಪರಿಣಮಿಸಿದೆ.  [ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ( Live Updates)  ]

ಇದೇ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಕ್ರಿಕೆಟಿಗ ನವಜೋತ್ ಸಿದ್ದು ವರ್ಚಸ್ಸು ಕೂಡ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಪ್ರಮುಖವಾಗಿ ಮಾಲ್ಡವ ಪ್ರದೇಶದಲ್ಲಿ ಮತದಾರ ಕಾಂಗ್ರೆಸ್ ಕೈ ಹಿಡಿದಿದ್ದಾನೆ.   ಎರಡು ಅವಧಿಗೆ ಅಧಿಕಾರ ನಡೆಸಿದ ಎಸ್‍ಎಡಿ-ಬಿಜೆಪಿ ಮೈತ್ರಿಕೂಟದಲ್ಲಿ ನಡೆದ ಭ್ರಷ್ಟಾಚಾರ, ಡ್ರಗ್ ಮಾಫಿಯಾದಿಂದ ಬೇಸತ್ತ ಜನ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.   ಇನ್ನು ಭಾರೀ ನಿರೀಕ್ಷೆ ಮೂಡಿಸಿದ್ದ ಎಎಪಿ ಮತದಾರನ ಜಾದೂ ಮಾಡುವಲ್ಲಿ ವಿಫಲವಾಗಿದೆ. ಅಧಿಕಾರ ಹಿಡಿಯುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸವೇ ಅದಕ್ಕೆ ಮುಳುವಾಗಿ ಪರಿಣಮಿಸಿದೆ. ಎಎಪಿ ಆರ್ಭಟ ದೆಹಲಿಗೆ ಸೀಮಿತ ಎಂಬುದು ಮತ್ತೊಮ್ಮೆ ರುಜುವಾತಾಗಿದೆ.

+ ಉತ್ತರಾಖಂಡ್‍ನಲ್ಲಿ ಅರಳಿದ ಕಮಲ

ಡೆಹ್ರಡೂಮ್,ಮಾ.11-ನಿರೀಕ್ಷೆಯಂತೆ ಗಿರಿಶಿಖರಗಳ ನಾಡು ಉತ್ತರಾಖಂಡ್‍ನಲ್ಲಿ ಬಿಜೆಪಿ ಭಾರೀ ಬಹುಮತದ ಮೂಲಕ ಅಧಿಕಾರದ ಗದ್ದುಗೆ ಹಿಡುವಲ್ಲಿ ಯಶಸ್ವಿಯಾಗಿದೆ. ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಎರಡನೇ ಮೂರಕ್ಕೂ ಅಧಿಕದಷ್ಟು ಅಂದರೆ 51 ವಿಧಾನಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದೆ.   ಆಡಳಿತಾರೂಢ ಕಾಂಗ್ರೆಸ್ ಕೇವಲ 16 ಕ್ಷೇತ್ರಗಳಲ್ಲಿ ಗೆದ್ದಿದ್ದರೆ ಬಿಎಸ್‍ಪಿ ಸೇರಿದಂತೆ ಇತರರು ಮೂರು ಕ್ಷೇತ್ರಗಳಲ್ಲಿ ಮಾತ್ರ ವಿಜೇತರಾಗಿದ್ದಾರೆ.  ಕಳೆದ 5 ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಹರೀಶ್ ರಾವತ್ ಆಡಳಿತಾ ವಿರೋಧಿ ಅಲೆ, ಕಾಂಗ್ರೆಸ್‍ನ ಒಳಜಗಳ, ಪ್ರವಾಹ ನಿರ್ವಹಣೆಯಲ್ಲಿ ವಿಫಲವಾಗಿದ್ದು , ಸಚಿವರ ಮೇಲೆ ಕೇಳಿ ಬಂದ ಸಾಲು ಸಾಲು ಹಗರಣಗಳು ಕಾಂಗ್ರೆಸ್‍ಗೆ ದುಬಾರಿಯಾಗಿ ಪರಿಣಮಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಲೆ ವ್ಯವಸ್ಥಿತ ಪ್ರಚಾರ, ಟಿಕೆಟ್ ಹಂಚಿಕೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ಎಚ್ಚರಿಕೆ ಹೆಜ್ಜೆಯನ್ನಿಟ್ಟ ಪರಿಣಾಮ ಬಿಜೆಪಿ ಗೆಲುವು ಸಾಧಿಸಿದೆ.  [ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ( Live Updates)  ]

ಕಳೆದ ವರ್ಷ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಬಂಡೆದಿದ್ದ ಶಾಸಕರ ಅನರ್ಹತೆ, ಸತತವಾಗಿ ಎರಡು ವರ್ಷ ಉಂಟಾದ ಪ್ರವಾಹವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದು ಕೈ ಪಕ್ಷವನ್ನು ಮುಳುಗಿಸಿದೆ.   ರಾಜ್ಯದ ಬಹುತೇಕ ಎಲ್ಲ ಕಡೆ ಬಿಜೆಪಿ ಪ್ರಾಬಲ್ಯ ಸಾಧಿಸಿದೆ. ನೋಟು ಅಮಾನೀಕರಣ, ಮತದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದು ಫಲಿತಾಂಶದಿಂದ ಸ್ಪಷ್ಟವಾಗಿ ಗೋಚರಿಸಿದೆ.   2012ರ ವಿಧಾನಸಭೆ ಚುನಾವಣೆಯಲ್ಲಿ ಕೂದಲೆಳೆ ಅಂತರದಿಂದ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದ್ದ ಬಿಜೆಪಿ ಈ ಬಾರಿ ಎರಡನೇ ಮೂರರಷ್ಟು ಬಹುಮತದ ಮೂಲಕ ಅಧಿಕಾರಕ್ಕೆ ಏರಿದೆ.   ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಕಾರ್ಯಕರ್ತರು ಎಲ್ಲೆಡೆ ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು. ರಾಜಧಾನಿ ಡೆಹ್ರಡೂಮ್‍ನ ಕೇಂದ್ರ ಕಚೇರಿಯಲ್ಲಿ ಸಂಭ್ರಮದ ವಾತಾವರಣ ಮೂಡಿದ್ದರೆ ಕಾಂಗ್ರೆಸ್ ಕಚೇರಿಯಲ್ಲಿ ನೀರವ ಮೌನ ಆವರಿಸಿತ್ತು.

+ ಮೋದಿಯವರ ಅಭಿವೃದ್ಧಿ ಕಾರ್ಯಗಳಿಗೆ ಸಂದ ಗೆಲುವು

ಬೆಳಗಾವಿ, ಮಾ.11-ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಲು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳೇ ಕಾರಣ ಎಂದು ಸಂಸದ ಸುರೇಶ್ ಅಂಗಡಿ ಹೇಳಿದರು.  ಚುನಾವಣಾ ಫಲಿತಾಂಶ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.  ಮಣಿಪುರ, ಉತ್ತರಾಖಂಡ್‍ನಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಇದೆಲ್ಲ ಪ್ರಧಾನಿ ಮೋದಿ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಸಂದ ಗೆಲುವು. ಕುಟುಂಬ ರಾಜಕಾರಣಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಮುಲಾಯಮ್‍ಸಿಂಗ್ ಯಾದವ್ ಅವರ ಹೆಸರು ಹೇಳದೆ ಟೀಕಿಸಿದರು.  ಗೋವಾ ಮತ್ತು ಪಂಜಾಬ್‍ನಲ್ಲಿ ನಮಗೆ ಹಿನ್ನಡೆಯಾಗಿದೆ. ಈ ಕುರಿತು ಪರಾಮರ್ಶೆ ಮಾಡಿಕೊಳ್ಳುತ್ತೇವೆ ಎಂದು ಸುರೇಶ್ ಅಂಗಡಿ ತಿಳಿಸಿದರು.
+ ಬೆಳಗಾವಿಯಲ್ಲಿ ಬಿಜೆಪಿ ಸಂಭ್ರಮದ ಬಣ್ಣದ ಓಕುಳಿ

ಬೆಳಗಾವಿ, ಮಾ.11-ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಉತ್ತರಪ್ರದೇಶದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿರುವುದನ್ನು ಬಣ್ಣದ ಓಕುಳಿ ಆಡುವ ಮೂಲಕ ಕಾರ್ಯಕರ್ತರು ಸಂಭ್ರಮಿಸಿದರು.  ಮಾಜಿ ಶಾಸಕ ಅಭಯಚಂದ್ರಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಡೋಲು ಬಾರಿಸಿ ಪರಸ್ಪರ ಬಣ್ಣ ಹಚ್ಚಿಕೊಳ್ಳುವ ಮೂಲಕ ವಿಜಯೋತ್ಸವ ಆಚರಿಸಿದರು.  ಈ ವೇಳೆ ಮಾತನಾಡಿದ ಅಭಯಚಂದ್ರಪಾಟೀಲ್, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ಆಡಳಿತಕ್ಕೆ ಉತ್ತರ ಪ್ರದೇಶದ ಜನ ಮಾರುಹೋಗಿ ಈ ಬಾರಿಯ ಚುನಾವಣೆಯಲ್ಲಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.  ಉತ್ತರ ಭಾರತದಲ್ಲಿ ಮೋದಿ ಬಿರುಗಾಳಿ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಈ ಬಿರುಗಾಳಿ ಕರ್ನಾಟಕಕ್ಕೂ ತಟ್ಟಲಿದೆ ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin