ಪಂಚರಾಜ್ಯಗಳ ಚುನಾವಣೆ ನಂತರ ಎಸ್.ಎಂ.ಕೃಷ್ಣ ಬಿಜೆಪಿ ಸೇರ್ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

S.M.Krishna-01

ಬೆಂಗಳೂರು,ಫೆ.6-ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮುಗಿದ ಬಳಿಕ ಕೇಂದ್ರದ ಮಾಜಿ ಸಚಿವ ಹಿರಿಯ ಮುತ್ಸದ್ದಿ ಎಸ್.ಎಂ.ಕೃಷ್ಣ ಪಕ್ಷ ಸೇರ್ಪಡೆ ಕುರಿತಂತೆ ತೀರ್ಮಾನ ಕೈಗೊಳ್ಳುವುದಾಗಿ ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ತಿಳಿಸಿದ್ದಾರೆ.   ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಎಸ್.ಎಂ.ಕೃಷ್ಣ ಪಕ್ಷ ಸೇರ್ಪಡೆ ಬಗ್ಗೆ ಸಾರ್ವಜನಿಕ ಬಹಿರಂಗ ಹೇಳಿಕೆ ನೀಡಬಾರದೆಂದು ಸೂಚನೆ ಕೊಟ್ಟಿದೆ.   ಹಾದಿಬೀದಿಯಲ್ಲಿ ಬಹಿರಂಗ ಹೇಳಿಕೆ ನೀಡಿದರೆ ಹಿರಿಯರಾದ ಕೃಷ್ಣ ಅವರಿಗೆ ಮುಜುಗರ ಉಂಟಾಗುತ್ತದೆ. ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆ ಹಾಗೂ ಯಾವ ಸ್ಥಾನ ನೀಡಬೇಕು ಎಂಬುದು ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ರಾಜ್ಯ ನಾಯಕರು ಈ ಬಗ್ಗೆ ತುಟಿ ಬಿಚ್ಚಬಾರದೆಂದು ನಿರ್ದೇಶನ ನೀಡಲಾಗಿದೆ.

ಕೃಷ್ಣ ರಾಜ್ಯದ ಅತ್ಯಂತ ಹಿರಿಯ ರಾಜಕಾರಣಿ. ಯಾವ ಸಂದರ್ಭದಲ್ಲಿ ಪಕ್ಷಕ್ಕೆ ಕರೆತರಬೇಕು, ಅವರಿಗೆ ಸೂಕ್ತ ಸ್ಥಾನ ನೀಡುವುದು, ಅವರ ನಾಯಕತ್ವವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದುನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಅಲ್ಲಿಯವರೆಗೂ ಈ ಬಗ್ಗೆ ಹೆಚ್ಚಿನ ಚರ್ಚೆ ಅಗತ್ಯವಿಲ್ಲ ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಿದ್ದಾರೆ.
ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೃಷ್ಣ ಅವರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಬೆಂಗಳೂರಿನಲ್ಲೇ ಇದ್ದ ಅವರು ಕೊನೆ ಕ್ಷಣದಲ್ಲಿ ಬಿಎಸ್‍ವೈ ಜೊತೆ ಮಾತನಾಡಲು ಹಿಂದೇಟು ಹಾಕಿದ್ದರು.

ಮೂಲಗಳ ಪ್ರಕಾರ ಯಡಿಯೂರಪ್ಪನವರ ಆತುರದ ಹೇಳಿಕೆ ಬಗ್ಗೆ ಎಸ್‍ಎಂಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಾನು ಈವರೆಗೂ ನನ್ನ ಬೆಂಬಲಿಗರ ಜೊತೆ ಮಾತುಕತೆ ನಡೆಸಿಲ್ಲ. ಮುಂದೆ ಏನು ತೀರ್ಮಾನ ಕೈಗೊಳ್ಳಬೇಕು ಎಂಬುದರ ಬಗ್ಗೆ ಆಲೋಚಿಸಿಲ್ಲ. ಆದರೆ ಬಿಜೆಪಿ ರಾಜ್ಯಾಧ್ಯಕ್ಷರು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ.   ನಾನು ಯಾವ ಸಮಯದಲ್ಲಿ ಬಿಜೆಪಿಗೆ ಸೇರ್ಪಡೆಯಾಗುತ್ತೇನೆಂದು ಹೇಳಿದ್ದೆ? ಮೋದಿಯವರ ಒಳ್ಳೆಯ ಕೆಲಸಗಳನ್ನು ಮೆಚ್ಚಿ ಅವರ ನಾಯಕತ್ವವನ್ನು ಹೊಗಳಿರಬಹುದು. ಅದೇ ವೇಳೆ ಕೆಲವು ಸಂದರ್ಭಗಳಲ್ಲಿ ನಾನು ಅತಿಯಾಗಿ ಟೀಕೆಯನ್ನು ಮಾಡಿದ್ದೇನೆ. ಹೀಗಾದ ಮಾತ್ರ ನಾನು ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ ಎಂದು ಭಾವಿಸಬೇಕಿಲ್ಲ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಕೇಂದ್ರದ ಸಚಿವರೊಬ್ಬರ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಕೃಷ್ಣ , ಪಕ್ಷದ ನಾಯಕರು ಈ ರೀತಿ ಮನಬಂದಂತೆ ಹೇಳಿಕೆ ಕೊಡುವುದು ನನಗೆ ಇಷ್ಟವಿಲ್ಲ. ಯಾವ ಸಂದರ್ಭದಲ್ಲಿ ನಿರ್ಧಾರ ಕೈಗೊಳ್ಳಬೇಕೆಂಬುದನ್ನು ನಿರ್ಧರಿಸುತ್ತೇನೆ. ಈ ರೀತಿ ಮನಬಂದಂತೆ ಹೇಳಿಕೆ ಕೊಡುವುದು ನನಗೆ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.   ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡ ಕೇಂದ್ರ ವರಿಷ್ಠರು ಎಸ್.ಎಂ.ಕೃಷ್ಣ ಬಿಜೆಪಿ ಸೇರ್ಪಡೆ ಕುರಿತಂತೆ ರಾಜ್ಯ ಘಟಕದ ನಾಯಕರು ಮಾತನಾಡುವ ಅಗತ್ಯವಿಲ್ಲ.   ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ ಹಾಗೂ ಮಣಿಪುರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನಾವೇ ಖುದ್ದು ಮಾತುಕತೆ ನಡೆಸುತ್ತೇವೆ ಎಂದು ಹೇಳುವ ಮೂಲಕ ರಾಜ್ಯ ನಾಯಕರ ಬಾಯಿಗೆ ಬೀಗ ಜಡಿದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin