ಪಕ್ಷದಿಂದ ಈಶು ಉಚ್ಚಾಟನೆಗೆ ಯಡ್ಡಿ ಪಟ್ಟು

ಈ ಸುದ್ದಿಯನ್ನು ಶೇರ್ ಮಾಡಿ

Eshwarappa-vs-Yadiyurappa

ಬೆಂಗಳೂರು, ಡಿ.27- ರಾಜ್ಯ ಬಿಜೆಪಿಯಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಕೆಂಡಾಮಂಡಲಗೊಂಡಿರುವ ಯಡಿಯೂರಪ್ಪ ಇದೀಗ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಿ, ಇಲ್ಲದಿದ್ದರೆ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರುವ ಆಸೆ ಮರೆಯಿರಿ ಎಂದು ಹೇಳಿದ್ದು, ಇದರ ಬೆನ್ನಲ್ಲೇ ಡಿ.29ರಂದು ಉಭಯ ನಾಯಕರ ನಡುವೆ ವರಿಷ್ಠರು ಸಂಧಾನ ಸಭೆ ನಡೆಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಯಡಿಯೂರಪ್ಪ ಹಾಗೂ ಈಶ್ವರಪ್ಪ ಇಬ್ಬರಿಗೂ ದಿಲ್ಲಿಗೆ ಬರುವಂತೆ ವರಿಷ್ಠರು ಬುಲಾವ್ ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳು ನಿರ್ಣಾಯಕವಾಗುವ ಲಕ್ಷಣಗಳು ಕಾಣುತ್ತಿವೆ.

ಏನೇ ಮಾಡಿದರೂ ಪಕ್ಷದ ಸಂಘಟನೆಯ ವ್ಯಾಪ್ತಿಯೊಳಗೆ ನಡೆಸಬೇಕು ಎಂದು ಎಷ್ಟು ಹೇಳಿದರೂ ಈಶ್ವರಪ್ಪ ಕೇಳುತ್ತಿಲ್ಲ. ಇವರಿಗೆ ಸಂಘ ಪರಿವಾರದ ಕೆಲ ನಾಯಕರೇ ಕುಮ್ಮಕ್ಕು ಕೊಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅದೇ ರೀತಿ ಮುಂದಿನ ಚುನಾವಣೆಯಲ್ಲಿ ಕನಿಷ್ಠ 30 ರಿಂದ 40ರಷ್ಟು ಸೀಟುಗಳನ್ನು ಸಂಘಟನೆ ಬಲದ ಮೇಲೆ ಪಡೆಯಲು ನಿಮಗೆ ಶಕ್ತಿ ಬರಬೇಕು ಎಂದು ಈಶ್ವರಪ್ಪ ಅವರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಈ ಕುಮ್ಮಕ್ಕು ಹಾಗೂ ಜೆಡಿಎಸ್ ನಾಯಕರು ಕೂಡಾ ಈಶ್ವರಪ್ಪ ಅವರಿಗೆ ಕುಮ್ಮಕ್ಕು ನೀಡುತ್ತಿದ್ದು, ಇದನ್ನೆಲ್ಲ ಗಮನಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸೀಟುಗಳನ್ನು ಗೆದ್ದು ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಬೇಕೆಂಬ ಆಸೆಗೆ ಕೆಲ ಆರ್‍ಎಸ್‍ಎಸ್ ಧುರೀಣರು ಹಾಗೂ ಪಕ್ಷದ ಕೆಲ ನಾಯಕರೇ ಕುಮ್ಮಕ್ಕು ಕೊಡುತ್ತಿದ್ದಾರೆ ಎಂಬ ಅನುಮಾನ ದಿನದಿಂದ ದಿನಕ್ಕೆ ಬಲವಾಗುತ್ತಿದೆ.

ಈಶ್ವರಪ್ಪ ಬೇಕಿದ್ದರೆ ಪಕ್ಷದ ಹೆಸರಿನಲ್ಲಿ ಜಾತಿ ಸಮಾವೇಶ ಮಾಡಲಿ. ಆ ಮೂಲಕ ತಮ್ಮ ಸಮುದಾಯದಲ್ಲಿ ರಾಜಕೀಯ ಪ್ರe್ಞÉಯನ್ನು ಹೆಚ್ಚಿಸಲಿ. ಆದರೆ, ಅದನ್ನು ಹೊರತುಪಡಿಸಿ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟುತ್ತಿರುವುದು ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರಬಾರದು ಎಂಬ ಕಾರಣಕ್ಕಾಗಿಯೇ ಹೊರತು ಬೇರೆ ಕಾರಣಕ್ಕಲ್ಲ. ತಮಗಿರುವ ಮಾಹಿತಿ ಪ್ರಕಾರ, ಪಕ್ಷದ ಅನೇಕ ನಾಯಕರು ಇದಕ್ಕೆ ಬೆಂಬಲ ನೀಡುತ್ತಿದ್ದು, ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಂತಹ ಹುದ್ದೆಗೇರಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಈ ರೀತಿ ಬೆಂಬಲ ನೀಡುತ್ತಿದ್ದಾರೆ.

ಹೀಗಾಗಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಸರ್ಜನೆಯಾಗುವಂತೆ ಸ್ಪಷ್ಟ ಆದೇಶ ನೀಡಿ. ಇಲ್ಲವೆ ಮುಂದಿನ ವಿಧಾನಸಭಾ ಚುನಾವಣೆ ಒಳಗೆ ರಾಜ್ಯದಲ್ಲಿ ಪಕ್ಷ ಇಬ್ಭಾಗವಾಗುವುದನ್ನು ನೀವೇ ಕಣ್ಣಾರೆ ನೋಡಿ ಎಂದು ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಇವತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಮರಳಿ ಸಿಎಂ ಮಾಡುವುದು, ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಗುರಿ ಎಂದು ಈಶ್ವರಪ್ಪ ಹೇಳುತ್ತಾರೆ. ಆದರೆ, ಪಕ್ಷ ಸ್ವಯಂಬಲದ ಮೇಲೆ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳುವುದು ಒಂದು ಗುಂಪಿನ ವ್ಯವಸ್ಥಿತ ಷಡ್ಯಂತ್ರ ಎಂದು ಯಡಿಯೂರಪ್ಪ ವರಿಷ್ಠರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ.

ಹೀಗಾಗಿ ಒಂದೋ, ಬ್ರಿಗೇಡ್ ರಾಜಕೀಯ ನಿಲ್ಲುವಂತೆ ನೋಡಿಕೊಳ್ಳಿ. ಇಲ್ಲವೆ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಲು ನನಗೆ ಅನುಮತಿ ನೀಡಿ. ಅವರು ಎಲ್ಲಿಗೆ ಬೇಕಾದರೂ ಹೋಗಲಿ. ನಾನು ಪಕ್ಷವನ್ನು ಸ್ವಯಂಬಲದ ಮೇಲೆ ಗೆಲ್ಲಿಸಿ ಅಧಿಕಾರಕ್ಕೆ ತರುತ್ತೇನೆ ಎಂಬುದು ಯಡಿಯೂರಪ್ಪ ಅವರ ವಾದ. ಹೀಗೆ ಯಡಿಯೂರಪ್ಪ ದಿನ ಕಳೆದಂತೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿರುದ್ಧ ಕಿಡಿ ಕಾರುತ್ತಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಇದಕ್ಕೆ ನಿರ್ದಿಷ್ಠ ಪರಿಹಾರ ಕಂಡುಕೊಳ್ಳಲು ವರಿಷ್ಠರು ಡಿ.29ರಂದು ಸಂಧಾನ ಸಭೆ ಕರೆದಿದ್ದಾರೆ ಎಂದು ಮೂಲಗಳು ಹೇಳಿವೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin