ಪಕ್ಷ ಸಂಘಟನೆಗೆ ವೇಣುಗೋಪಾಲ್ ತಾಕೀತು : ಜಡ್ಡು ಹಿಡಿದಿದ್ದ ಕಾಂಗ್ರೆಸ್‍ಗೆ ಬಿಸಿ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು, ಅ.6- ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಶಾಸಕರು ಇಂದಿನಿಂದಲೇ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಆ ಕುರಿತು ಪ್ರತಿನಿತ್ಯ ಹೈಕಮಾಂಡ್‍ಗೆ ವರದಿ ನೀಡಬೇಕು. ಸಾಮಾಜಿಕ ಜಾಲತಾಣವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಸಚಿವರು ತಪ್ಪದೇ ಸರ್ಕಾರದ ಸಮರ್ಥನೆಗೆ ಮುಂದಾಗಬೇಕು ಎಂದು ಎಐಸಿಸಿ ಪ್ರಧಾನಕಾರ್ಯದರ್ಶಿ ಪಕ್ಷದ ರಾಜ್ಯದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ತಾಕೀತು ಮಾಡಿದ್ದಾರೆ.

ವಿಧಾನಸೌಧದಲ್ಲಿ ಇಂದು ನಡೆದ ವಿಶೇಷ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನೆ ಮನೆಗೆ ಕಾಂಗ್ರೆಸ್ ಅತ್ಯಂತ ಪರಿಣಾಮಕಾರಿಯಾದ ಅಭಿಯಾನವಾಗಿದ್ದು, ಇದನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಬೂತ್ ಕಮಿಟಿಗಳ ಮೂಲಕ ಪ್ರತಿ ಮನೆ ಮನೆಗೂ ತಲುಪಬೇಕು. ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪಕ್ಷ ಸಂಘಟನೆಗೆ ಸಚಿವರು, ಶಾಸಕರು ಸಂಸದರು, ವಿಧಾನಪರಿಷತ್ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಸಮರೋಪಾದಿಯಲ್ಲಿ ಸಜ್ಜಾಗಬೇಕೆಂದು ಕರೆ ನೀಡಿದರು.

ಸಚಿವರು ಸರ್ಕಾರದ ಸಮರ್ಥನೆಗೆ ಮುಂದಾಗಬೇಕು. ಕೇವಲ ಒಂದಿಬ್ಬರು ಸಚಿವರಷ್ಟೇ ಮಾತನಾಡುತ್ತಾರೆ. ಉಳಿದಂತೆ ಕೆಲವರು ತಮ್ಮಷ್ಟಕ್ಕೆ ತಾವಿದ್ದರೆ ಸಾಲದು ಎಲ್ಲರೂ ಸರ್ಕಾರವನ್ನು ಸಮರ್ಥಿಸಿಕೊಂಡು ಸಾಧನೆಗಳನ್ನು ಬಿಂಬಿಸಬೇಕು. ಪ್ರತಿಪಕ್ಷಗಳಿಗೆ ರಾಜಕೀಯವಾಗಿ ತಿರುಗೇಟು ನೀಡಬೇಕು ಎಂದು ಹೇಳಿದರು. ಕೇವಲ ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯ ಮಂತ್ರಿಗಳು ಮಾತನಾಡಿದರೆ ಸಾಲದು, ಎಲ್ಲರೂ ಮಾತನಾಡಿ ನಮ್ಮ ಸರ್ಕಾರ ಉತ್ತಮ ವಾಗಿ ಕೆಲಸ ಮಾಡುತ್ತಿದೆ. ನಮ್ಮ ಸಾಧನೆಗಳನ್ನು ಜನರ ಬಳಿ ಕೊಂಡೊಯ್ಯಿರಿ. ಇದು ನನ್ನ ಆದೇಶವಲ್ಲ, ನನ್ನ ಮನವಿ ಎಂದು ತಿಳಿಯಿರಿ ಎಂದು ವೇಣುಗೋಪಾಲ್ ಹೇಳಿದರು.

ತಮ್ಮದೇನೇ ಸಮಸ್ಯೆಗಳಿದ್ದರೂ ದಿನದ 24 ಗಂಟೆ ನಾನು, ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರು ಲಭ್ಯವಿರುತ್ತೇವೆ. ಅಲ್ಲಿ ಮಾತನಾಡಿ ಪರಿಹರಿಸಿಕೊಳ್ಳಬಹುದು. ಬಹಿರಂಗವಾಗಿ ಹೇಳಿಕೆಗಳನ್ನು ನೀಡಬೇಡಿ ಎಂದು ಕಿವಿಮಾತು ಹೇಳಿದರು. ಕಾಂಗ್ರೆಸ್ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರದ ಬಗ್ಗೆ ಜನಪರ ಒಲವಿದೆ. ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಅಹರ್ನಿಶವಾಗಿ ಶ್ರಮಿಸಬೇಕಿದೆ.ಕರ್ನಾಟಕ ಕಾಂಗ್ರೆಸ್ ಪಕ್ಷಕ್ಕೆ ಪುನರ್ಜನ್ಮ ನೀಡಿದ ಭೂಮಿ. ದೇಶದಲ್ಲಿ ನಮ್ಮ ಪಕ್ಷ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಇಲ್ಲಿಂದ ಮತ್ತೆ ನಾವು ನೆಲೆ ಕಂಡುಕೊಳ್ಳಬೇಕಿದೆ. ಇಂದಿರಾಗಾಂಧಿ, ಸೋನಿಯಾಗಾಂಧಿಯವರಿಗೆ ರಾಜಕೀಯವಾಗಿ ಶಕ್ತಿ ನೀಡಿದ ಈ ನಾಡಿನಿಂದ ಮತ್ತೆ ಕಾಂಗ್ರೆಸ್ ಪುಟಿದೇಳಬೇಕಾಗಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಹೋರಾಟ ಮಾಡಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಬೇಕು ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ವೇಣುಗೋಪಾಲ್ ಸೂಚ್ಯವಾಗಿ ಹೇಳಿದರು. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿ ಗಳು ಸೇರಿದಂತೆ ಪದಾಧಿಕಾರಿಗಳು ಕ್ರಿಯಾಶೀಲ ರಾಗಿ ಕೆಲಸ ಮಾಡುತ್ತಿದ್ದಾರೆ. ಮನೆ ಮನೆಗೆ ಕಾಂಗ್ರೆಸ್ ನಮ್ಮ ಕಾರ್ಯಕ್ರಮ ಮತ್ತಷ್ಟು ಚುರುಕುಗೊಳ್ಳಬೇಕು. ಪ್ರತಿಪಕ್ಷಗಳು ಮಾಡುವ ಅನಗತ್ಯ ಆರೋಪಕ್ಕೆ ನಮ್ಮ ಮುಖಂಡರು ಸರಿಯಾದ ಪ್ರತಿಕ್ರಿಯೆ ನೀಡಬೇಕು ಎಂದರು. ಮುಖ್ಯಮಂತ್ರಿಗಳ ನೇತೃತ್ವದಲ್ಲೇ ಚುನಾವಣೆ ನಡೆಯಲಿದೆ ಎಂದು ನಾನೇ ಖುದ್ದು ಸ್ಪಷ್ಟಪಡಿಸಿದ್ದೇನೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಅವರು ಹೇಳಿದರು.

ಜಡ್ಡು ಹಿಡಿದಿದ್ದ ಕಾಂಗ್ರೆಸ್‍ಗೆ ಬಿಸಿ :

ಬೆಂಗಳೂರು, ಅ.6- ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಇಂದು ಬೆಂಗಳೂರಿನಲ್ಲಿ ಸರಣಿ ಸಭೆಗಳನ್ನು ನಡೆಸುವ ಮೂಲಕ ಜಡ್ಡು ಹಿಡಿದಿದ್ದ ಕಾಂಗ್ರೆಸ್‍ಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಈವರೆಗೂ ಬೆಂಗಳೂರಿಗೆ ಬಂದಾಗಲೆಲ್ಲಾ ಕುಮಾರಕೃಪ ಅತಿಥಿಗೃಹ ಮತ್ತು ಕಾಂಗ್ರೆಸ್ ಕಚೇರಿಯಲ್ಲಿ ಮಾತ್ರ ಪಕ್ಷದ ಸಭೆಗಳನ್ನು ನಡೆಸುತ್ತಿದ್ದ ಅವರು, ಇಂದು ತಮ್ಮ ಕಾರ್ಯಭಾರವನ್ನು ವಿಧಾನಸೌಧಕ್ಕೂ ವಿಸ್ತರಿಸಿದರು.

ಬೆಳಗ್ಗೆ 10.45ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶಾಸಕಾಂಗ ಸಭೆ ನಡೆಯಿತು. ಸಭೆ ಕರೆಯಲು ಒತ್ತಡ ಹೇರಿದ್ದು ಕೆ.ಸಿ.ವೇಣುಗೋಪಾಲ್ ಎಂಬ ಸುದ್ದಿಗಳಿದ್ದವು. ಅದರಂತೆ ಇಂದಿನ ಸಭೆಗೆ ವೇಣುಗೋಪಾಲ್ ಹಾಜರಾದರು. ಈವರೆಗೂ ಶಾಸಕಾಂಗ ಪಕ್ಷದ ನಾಯಕ ರಾದ ಮುಖ್ಯಮಂತ್ರಿ ಅವರು ಮೊದಲು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆದರೆ, ಇಂದು ಸಿಎಂಗಿಂತಲೂ ವೇಣು ಗೋಪಾಲ್ ಅವರ ಮಾತುಗಳೇ ಹೆಚ್ಚಾಗಿ ಸಭೆಯಲ್ಲಿ ಕೇಳಿಸಿವೆ.
ನಂತರ 12.30ಕ್ಕೆ ಸಚಿವ ಸಂಪುಟದ ಸಭೆ ನಡೆಸಿದ ವೇಣುಗೋಪಾಲ್ ಅವರು, ಶಾಸಕರಿಂದ ಬಂದಿರುವ ದೂರು ಆಧರಿಸಿ ಕೆಲ ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ಮಧ್ಯಾಹ್ನ ಕಾಂಗ್ರೆಸ್ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮನೆ ಮನೆಗೆ ಕಾಂಗ್ರೆಸ್ ಯೋಜನೆಯ ಯಶಸ್ವಿ ಮತ್ತು ವೈಫಲ್ಯಗಳ ಬಗ್ಗೆ ವಿಮರ್ಶೆ ನಡೆಸಿದರು. ನಂತರ ಕೆಪಿಸಿಸಿ ಪದಾಧಿಕಾರಿಗಳ ಸಭೆ ನಡೆಸಿ ಉಸ್ತುವಾರಿ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಯನ್ನು ತೀವ್ರಗೊಳಿಸುವಂತೆ ತಾಕೀತು ಮಾಡಿದರು. ಸಂಜೆ ಮುಂಚೂಣಿ ಘಟಕಗಳ ಪ್ರಮುಖರ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.  ಬೆಳಗ್ಗೆಯಿಂದ ಸಂಜೆ ವರೆಗೂ ನಡೆದ ನಿರಂತರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು, ವೇಣುಗೋಪಾಲ್ ಅವರ ಜತೆಯಲ್ಲೇ ಇದ್ದು, ಸಹಕರಿಸಿದ್ದಾರೆ.

Facebook Comments

Sri Raghav

Admin