ಪಟಾಕಿಗಳಂತೆ ಸ್ಫೋಟಗೊಂಡ 900ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್’ಗಳು : 2 ಲಾರಿಗಳು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

Gas-Blast-03

ಚಿಕ್ಕಬಳ್ಳಾಪುರ, ಡಿ.26-ಜಿಲ್ಲೆಯ ಚಿಂತಾಮಣಿ ಹೊರಹೊಲಯದ ಗ್ಯಾಸ್ ಸಿಲಿಂಡರ್ ಗೋದಾಮಿನ ಮುಂದೆ ನಿಲ್ಲಿಸಿದ್ದ ಲಾರಿಯಲ್ಲಿದ್ದ 950 ಕ್ಕೂ ಹೆಚ್ಚು ಸಿಲಿಂಡರ್‍ಗಳು ನಿನ್ನೆ ಮಧ್ಯರಾತ್ರಿ ಇದ್ದಕ್ಕಿದ್ದಂತೆ ಸ್ಫೋಟಗೊಂಡ ಪರಿಣಾಮ ಭೂಕಂಪನದ ಅನುಭವವಾಗಿದ್ದು, ಕಟ್ಟಡಗಳು ಬಿರುಕು ಬಿಟ್ಟಿವೆ. ಆತಂಕಗೊಂಡಿರುವ ಜನ ಮನೆಯಿಂದ ಹೊರಬರಲಾರದೆ ಪರಿತಪಿಸುತ್ತಿದ್ದಾರೆ. ಸಿಲಿಂಡರ್‍ಗಳು ಇನ್ನೂ ಸ್ಫೋಟಗೊಳ್ಳುತ್ತಿರುವುದರಿಂದ ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ಎಚ್‍ಪಿ ಕಂಪೆನಿಗೆ ಸೇರಿದ ಎರಡು ಲಾರಿಗಳಲ್ಲಿದ್ದ ನೂರಾರು ಸಿಲಿಂಡರ್‍ಗಳು ಬಾಂಬ್‍ನಂತೆ ಮಧ್ಯರಾತ್ರಿ 12.45 ರ ವೇಳೆಗೆ ಸ್ಫೋಟಿಸಿದ್ದು, 10 ಕಿ.ಮೀ ವರೆಗೆ ಈ ಸ್ಫೋಟದ ಶಬ್ಧ ವ್ಯಾಪಿಸಿದೆ.

ಸ್ಫೋಟದ ತೀವ್ರತೆಗೆ ಸಿಲಿಂಡರ್‍ಗಳೆಲ್ಲ ಸಿಡಿದು ಚೆಲ್ಲಾಪಿಲ್ಲಿಯಾಗಿವೆ. ಅಕ್ಕಪಕ್ಕದ ಕಟ್ಟಡಗಳು ಬಿರುಕು ಬಿಟ್ಟಿವೆ. ಭಾರೀ ಶಬ್ಧಕ್ಕೆ ಜನ ಮನೆ ಬಿಟ್ಟು ಓಡಿಹೋಗಿದ್ದಾರೆ. ಸ್ಥಳದಲ್ಲಿದ್ದ ಒಂದು ಬುಲೇರೋ ವಾಹನ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸಿಲಿಂಡರ್‍ನಲ್ಲಿರುವ ಗ್ಯಾಸ್ ವಾತಾವರಣದಲ್ಲಿ ಸೇರಿ ಅಪಾಯ ಹೆಚ್ಚಾಗುವ ಸಂಭವವಿರುವುದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿರುವ ನಾಗರಿಕರು ಬೀಡಿ, ಸಿಗರೇಟ್, ವಿದ್ಯುತ್ ದೀಪಗಳನ್ನು ಬಳಸದಂತೆ ಪೊಲೀಸರು ಸಾರ್ವಜನಿಕರಿಗೆ ಸೂಚನೆ ನೀಡಿದರು.
ಕೂಡಲೇ ಮುನ್ನೆಚ್ಚರಿಕೆ ಕ್ರಮ ಅನುಸರಿಸಿದ್ದರಿಂದ ಸಂಭಾವ್ಯ ಅನಾಹುತಗಳನ್ನೂ ಕೂಡ ತಪ್ಪಿಸಲಾಯಿತು. ಘಟನೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಚಿಂತಾಮಣಿ ನಗರದಿಂದ ಸುಮಾರು 3 ಕಿ.,ಮೀ.ದೂರದಲ್ಲಿರುವ ಹೆಚ್.ಪಿ ಗ್ಯಾಸ್ ಏಜೆನ್ಸಿಯ ಎಸ್.ಎಲ್.ಎನ್ ಗೋದಾಮಿನಲ್ಲಿ 1500ಕ್ಕೂ ಅಧಿಕ ಸಿಲಿಂಡರ್‍ಗಳನ್ನು ಶೇಖರಿಸಿಡಲಾಗಿತ್ತು. ಆದರೆ ಇದರಲ್ಲಿ ಸುಮಾರು 300 ಸಿಲಿಂಡರ್‍ಗಳು ಮಾತ್ರ ಅನಿಲ ತುಂಬಿದ ಸಿಲಿಂಡರ್‍ಗಳಿದ್ದು ಇನ್ನುಳಿದವುಗಳು ಖಾಲಿ ಸಿಲಿಂಡರ್‍ಗಳು ಎನ್ನಲಾಗಿದೆ.  ಗೋದಾಮಿನ ಮುಂದೆ ಅನಿಲ ತುಂಬಿದ ಸಿಲಿಂಡರ್‍ಗಳನ್ನು ಹೊತ್ತಿದ್ದ ಎರಡು ಲಾರಿ ನಿಲ್ಲಿಸಲಾಗಿದ್ದು ಇದರ ಚಾಲಕರು ಮತ್ತು ಕ್ಲೀನರ್ ಇಬ್ಬರೂ ಮನೆಗೆ ತೆರಳಿದ್ದರು ಎನ್ನಲಾಗಿದೆ. ಗೋದಾಮಿನ ಸೆಕ್ಯುರಿಟಿ ಗಾರ್ಡ್ ಮಾತ್ರ ಇದ್ದು ಬೆಂಕಿ ತಗುಲಲು ಕಾರಣ ಏನೆಂಬುದು ಇನ್ನು ತಿಳಿದು ಬಂದಿಲ್ಲ.

ಕ್ರಿಸ್‍ಮಸ್‍ನಿಂದ ತಪ್ಪಿದ ದುರಂತ:

ಅನಿಲ ಸಿಲೆಂಡರ್ ಶೇಖರಿಸಿಡಲಾಗಿದ್ದ ಗೋದಾಮಿಗೆ ಕೇವಲ ಸುಮಾರು 200 ಮೀ. ಅಂತರದಲ್ಲಿ ರಾಜೀವ್‍ಗಾಂಧಿ ವಸತಿ ಶಾಲೆ ಇದ್ದು, ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಶಾಲೆಗೆ ರಜೆ ಘೋಷಿಸಿದ ಕಾರಣ ಶಾಲಾ ಮಕ್ಕಳು ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ಇದರಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.

ಬಿರುಕು ಬಿಟ್ಟ ಕಟ್ಟಡಗಳು:

ಎರಡು ಲಾರಿಗಳಲ್ಲಿ ಜೋಡಿಸಿಟ್ಟಿದ್ದ ಸುಮಾರು 950 ಕ್ಕೂ ಹೆಚ್ಚು ಸಿಲಿಂಡರ್‍ಗಳು ಏಕ ಕಾಲದಲ್ಲಿ ಸ್ಫೋಟಗೊಂಡ ಕಾರಣ ಚಿಂತಾಮಣಿ ನಗರ ಸೇರಿದಂತೆ ಸುತ್ತಮುತ್ತಲ ಸುಮಾರು 10 ಕಿ.ಮೀ ವ್ಯಾಪ್ತಿ ಪ್ರದೇಶದ ಹಳ್ಳಿಗಳ ಜನರಿಗೆ ಈ ಸ್ಫೋಟದಿಂದ ಭೂಕಂಪನದ ಅನುಭವವಾಗಿ ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ನಿರಂತರವಾಗಿ ಸಿಡಿಯುತ್ತಿದ್ದ ಸಿಲಿಂಡರ್‍ಗಳ ಸ್ಫೋಟದ ಶಬ್ದಕ್ಕೆ ಮನೆಯಲ್ಲೂ ಇರಲಾರದೆ ಹೊರಗೂ ಬರಲಾರದೆ ಆತಂಕದಲ್ಲಿ ಕಾಲ ಕಳೆದಿದ್ದಾರೆ. ಅಲ್ಲದೆ ಗೋದಾಮಿನ ಸುತ್ತ ಮುತ್ತ ಇದ್ದ ಹಲವು ಮನೆಗಳು ಸ್ಫೋಟದ ತೀವ್ರತೆಗೆ ಬಿರುಕುಬಿಟ್ಟಿದ್ದು ಈ ಮನೆಗಳ ನಿವಾಸಿಗಳು ಪುನರ್‍ಜನ್ಮ ಪಡೆದಂತಾಗಿದೆ.

ಬಾಗೇಪಲ್ಲಿ ಚಿಂತಾಮಣಿ ರಸ್ತೆ ಸಂಚಾರ ಸ್ಥಗಿತ:

ಚಿಂತಾಮಣಿಯಿಂದ ಬಾಗೇಪಲ್ಲಿ ಮಾರ್ಗದಲ್ಲಿರುವ ನಾಯನಹಳ್ಳಿಯಲ್ಲಿ ಈ ಗೋದಾಮು ಇದ್ದು, ಸ್ಫೋಟಗೊಂಡ ಸಿಲಿಂಡರ್‍ಗಳು ಸುಮಾರು 500 ಮಿ. ದೂರಕ್ಕೆ ಸಿಡಿದು ಬಿದ್ದಿದ್ದು, ಈ ಪ್ರದೇಶವೆಲ್ಲ ಸಿಲಿಂಡರ್ ಚೂರುಗಳಿಂದ ತುಂಬಿದ್ದು, ಗೋದಾಮಿನಲ್ಲಿ ಅನಿಲ ತುಂಬಿದ ಸಿಲಿಂಡರ್‍ಗಳು ಇನ್ನೂ ಇದ್ದು, ಇವು ಇನ್ನೂ ಹೊಗೆಯಾಡುತ್ತಲೇ ಇವೆ ಯಾವುದೇ ಕ್ಷಣದಲ್ಲಿ ಇನ್ನಷ್ಟು ಸಿಲಿಂಡರ್‍ಗಳು ಸ್ಫೋಟಗೊಳ್ಳುವ ಆತಂಕ ಇರುವ ಕಾರಣ ಬಾಗೇಪಲ್ಲಿ ಚಿಂತಾಮಣಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.  ಸ್ಥಳಕ್ಕೆ ಆರು ಅಗ್ನಿ ಶಾಮಕ ದಳ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡರಾದರೂ ಸ್ಫೋಟದ ತೀವ್ರತೆ ಹೆಚ್ಚಿದ ಪರಿಣಾಮ ಅಗ್ನಿ ಶಾಮಕ ಸಿಬ್ಬಂದಿ ಸಮೀಪಕ್ಕೆ ಹೋಗಲು ಸಾಧÀ್ಯವಾಗದೆ ಬೆಂಕಿನಂದಿಸುವ ಕಾರ್ಯಾಚಾರಣೆ ಸ್ವಲ್ಪ ಹಿನ್ನಡೆಯಾಯಿತು. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಗಳನ್ನು ಕೈಗೊಂಡಿದ್ದು, ಕಾರ್ಯಾಚರಣೆ ಪೂರ್ಣಗೊಳ್ಳಲು ಇನ್ನಷ್ಟು ಕಾಲಾವಕಾಶ ಅಗತ್ಯವಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಈ ಸಂಜೆ ಗೆ ತಿಳಿಸಿದ್ದಾರೆ.

 

Eesanje News 24/7 ನ್ಯೂಸ್ ಆ್ಯಪ್ –  Click Here to Download 

Gas-Blast-01

Gas-Blast-02
Gas-Blast-04

Facebook Comments

Sri Raghav

Admin