ಪಟ್ಟಿ ಬಿಡುಗಡೆ ಬೆನ್ನಲ್ಲೇ ಭುಗಿಲೆದ್ದ ಬಂಡಾಯ ಶಮನಕ್ಕೆ ‘ಕೈ’ ನಾಯಕರ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

Congress-01

ಬೆಂಗಳೂರು, ಏ.16- ಕಾಂಗ್ರೆಸ್ ಪಕ್ಷ ನಿನ್ನೆ ಏಕಕಾಲದಲ್ಲಿ 218 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೆ ಭುಗಿಲೆದ್ದ ಬಂಡಾಯ ಶಮನಕ್ಕೆ ನಾಯಕರು ಕಸರತ್ತು ನಡೆಸಿದ್ದಾರೆ. ಹಲವು ಆಕಾಂಕ್ಷಿಗಳು ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಪರ್ಯಾಯ ಚಿಂತನೆ ನಡೆಸಿದ್ದು, ಜೆಡಿಎಸ್, ಬಿಜೆಪಿ ಪಕ್ಷದತ್ತ ಮುಖ ಮಾಡಿದ್ದಾರೆ. ಕೆಲವರು ಪಕ್ಷೇತರರಾಗಿ ನಿಲ್ಲುವ ಚಿಂತನೆಗಳೂ ಕಂಡುಬಂದಿವೆ. ಬಂಡಾಯದ ಲಾಭ ಪಡೆಯಲು ಅನ್ಯ ಪಕ್ಷಗಳು ರಾಜಕೀಯ ಲೆಕ್ಕಾಚಾರ ಹಾಕುತ್ತಿವೆ. ಈ ಬೆನ್ನಲ್ಲೆ ಕಾಂಗ್ರೆಸ್ ಮುಖಂಡರು ಬಂಡಾಯ ಉಪಶಮನ ಮಾಡುವ ಪ್ರಯತ್ನ ನಡೆಸಿದ್ದಾರೆ. ನಿನ್ನೆ ರಾತ್ರಿಯಿಡೀ ಟಿಕೆಟ್ ವಂಚಿತರು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಜತೆ ಸಮಾಲೋಚನೆ ನಡೆಸಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು, ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಲೆಕ್ಕಾಚಾರ ಹಾಕಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇವೆ. ಟಿಕೆಟ್ ಹಂಚಿಕೆಗೂ ಮುನ್ನ ಹಲವಾರು ಸುತ್ತಿನ ಸಭೆಗಳು ನಡೆದಿವೆ. ಪ್ರತಿ ಕ್ಷೇತ್ರದ ಕುರಿತು ಚರ್ಚೆ ನಡೆಸಲಾಗಿದೆ ಎಂದರು.

ಚುನಾವಣೆ ಎಂದ ಮೇಲೆ ಪ್ರತಿ ಕ್ಷೇತ್ರಕ್ಕೂ ಹಲವಾರು ಮಂದಿ ಆಕಾಂಕ್ಷಿಗಳಿರುವುದು ನಿಜ. ಎಲ್ಲರಿಗೂ ಅವಕಾಶ ನೀಡಲು ಸಾಧ್ಯವಾಗುವುದಿಲ್ಲ. ಟಿಕೆಟ್ ಸಿಗದಿದ್ದವರಿಗೆ ಪರ್ಯಾಯ ಅವಕಾಶ ಕಲ್ಪಿಸಲಾಗುವುದು. ನಮ್ಮಲ್ಲಿ ಯಾವುದೇ ಬಂಡಾಯ ಅಥವಾ ಭಿನ್ನಮತಗಳಿಲ್ಲ. ಅಸಮಾಧಾನಗೊಂಡಿರುವ ಆಕಾಂಕ್ಷಿಗಳ ಜತೆ ಮಾತುಕತೆ ನಡೆಸುತ್ತೇವೆ. ವಾತಾವರಣ ತಿಳಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  ಇದಕ್ಕೂ ಮುನ್ನ ಬಾದಾಮಿ, ಬೀದರ್ ದಕ್ಷಿಣ, ತರೀಕೆರೆ, ಕಡೂರು ಸೇರಿದಂತೆ ಹಲವು ಕ್ಷೇತ್ರಗಳ ಆಕಾಂಕ್ಷಿಗಳು ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ತಮಗೇ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದಾರೆ.
ಟಿಕೆಟ್ ಸಿಗದಿದ್ದರೆ ಪರ್ಯಾಯ ಚಿಂತನೆಯ ಎಚ್ಚರಿಕೆ ನೀಡಿದ್ದು, ನಾಯಕರು ಅವರ ಮನವೊಲಿಸುವ ಪ್ರಯತ್ನ ನಡೆಸಿದರು.

ಜಗಳೂರು, ತರಿಕೆರೆ, ತಿಪಟೂರು, ಬಳ್ಳಾರಿ ಗ್ರಾಮಾಂತರ, ಮಾಯಕೊಂಡ, ಕೊಳ್ಳೆಗಾಲ, ಬಾದಾಮಿ, ಕಲಬುರಗಿ ಗ್ರಾಮಾಂತರ, ಶಿರಗುಪ್ಪ, ವಿಜಯನಗರ, ಹಾನಗಲ್, ಬ್ಯಾಡಗಿ ಈ 12 ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಇಂದೂ ಕೂಡ ಬಂಡಾಯದ ಪ್ರತಿಭಟನೆ ಮುಂದುವರಿದಿತ್ತು.
ಬಾದಾಮಿ ಕ್ಷೇತ್ರದ ಶಾಸಕ ಚಿಮ್ಮನಕಟ್ಟಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನೀವು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೀರಿ ಎಂಬ ಹಿನ್ನೆಲೆಯಲ್ಲಿ ನಾನು ಕ್ಷೇತ್ರ ತ್ಯಾಗ ಮಾಡಲು ನಿರ್ಧರಿಸಿದ್ದೆ. ಆದರೆ, ಅಲ್ಲಿ ಬೇರೆಯವರಿಗೆ ಟಿಕೆಟ್ ಆಗಿದೆ. ನಾನೇ ಆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ನನಗೇ ಅವಕಾಶ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೇ ಆ ಕ್ಷೇತ್ರದಲ್ಲಿ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಟಿಕೆಟ್ ಪಡೆದವರು ಸಂಭ್ರಮಿಸಿ, ಹರ್ಷ ವ್ಯಕ್ತಪಡಿಸಿ ಬೆಂಬಲಿಗರೊಂದಿಗೆ ಪ್ರಚಾರದ ಸಂಬಂಧ ಚರ್ಚೆಗೆ ಮುಂದಾದರೆ, ಇತ್ತ ಟಿಕೆಟ್ ವಂಚಿತರು ತಮ್ಮ ಬೆಂಬಲಿಗರೊಂದಿಗೆ ಮುಂದೇನು ಮಾಡಬೇಕು ಎಂಬ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ.  ಇನ್ನು ನಾಮಪತ್ರ ಸಲ್ಲಿಕೆಗೆ 24ರ ವರೆಗೆ ಅವಕಾಶವಿದ್ದು, ಟಿಕೆಟ್ ಪಡೆಯುವ ಕಸರತ್ತನ್ನು ಹಲವರು ಮುಂದುವರಿಸಿದ್ದಾರೆ. ಹಾನಗಲ್ ಕ್ಷೇತ್ರದ ಶಾಸಕ, ಮಾಜಿ ಸಚಿವ ಮನೋಹರ್ ತಹಸೀಲ್ದಾರ್ ಟಿಕೆಟ್ ಕೈ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದಾರೆ. ನಿನ್ನೆ ಈ ಕ್ಷೇತ್ರದಲ್ಲಿ ಇವರ ಬೆಂಬಲಿಗರು ಉಗ್ರ ಪ್ರತಿಭಟನೆ ನಡೆಸಿದ್ದರು. ಇದೇ ರೀತಿ ಟಿಕೆಟ್ ಕೈ ತಪ್ಪಿದ ಹಲವೆಡೆ ಬಂಡಾಯ ತೀವ್ರಗೊಂಡಿದ್ದು, ಪ್ರತಿಭಟನೆ, ಆಕ್ರೋಶ ಮುಗಿಲು ಮುಟ್ಟಿತ್ತು.

ಟಿಕೆಟ್ ಘೋಷಣೆಗೂ ಮುನ್ನವೇ ಸುಳಿವರಿತ ಕಾರ್ಯಕರ್ತರು ನಿನ್ನೆ ಬೆಳಗ್ಗೆಯಿಂದಲೇ ಪ್ರತಿಭಟನೆಯ ಹಾದಿ ಹಿಡಿದಿದ್ದರು. ಕೈ ಪಟ್ಟಿ ಪ್ರಕಟವಾಗುತ್ತಿದ್ದಂತೆ ಈ ಪ್ರತಿಭಟನೆ ತೀವ್ರಗೊಂಡಿತ್ತು. ಕುಣಿಗಲ್‍ನಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಶಾಸಕ ರಾಮಸ್ವಾಮಿಗೌಡ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ತರಿಕೆರೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಪತ್ನಿ ವಾಣಿ ಶ್ರೀನಿವಾಸ್ ಹಾಗೂ ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರೆ, ವಿಧಾನ ಪರಿಷತ್ ಮಾಜಿ ಸದಸ್ಯ ಗಾಯತ್ರಿ ಶಾಂತೇಗೌಡ ಅವರ ಬೆಂಬಲಿಗರು ಚಿಕ್ಕಮಗಳೂರಿನಲ್ಲಿ ರಸ್ತೆ ತಡೆ ನಡೆಸಿ ಟಯರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಕೋಲಾರದಲ್ಲೂ ಕೂಡ ಪ್ರತಿಭಟನೆಯ ಕಾವು ಮುಗಿಲುಮುಟ್ಟಿತ್ತು. ದಾವಣಗೆರೆ, ಬಾದಾಮಿ, ತಿಪಟೂರಿನಲ್ಲೂ ಪ್ರತಿಭಟನೆ ಜೋರಾಗಿತ್ತು. ಟಿಕೆಟ್ ವಂಚಿತರು ನಿನ್ನೆ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಗೆ ದಾವಿಸಿ ಅಂತಿಮ ಹಂತದ ಕಸರತ್ತು ನಡೆಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin