ಪಠಾಣ್ಕೋಟ್ ದಾಳಿಯಲ್ಲಿ ಪಾಕ್ ಕೈವಾಡವಿರುವ ಕುರಿತು ಸಾಕ್ಷ್ಯ ನೀಡಿದ ಅಮೆರಿಕ

ಈ ಸುದ್ದಿಯನ್ನು ಶೇರ್ ಮಾಡಿ

Pathankot-Attack

ನವದೆಹಲಿ,ಆ.29-ಪಠಾಣ್ಕೋಟ್ ವಾಯುನೆಲೆ ಮೇಲಿನ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಷ್-ಎ-ಮೊಹ್ಮದ್(ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲು ಎನ್ಐಎ ಪರಿಶೀಲನೆಯಲ್ಲಿ ತೊಡಗಿರುವ ಮಧ್ಯೆಯೇ ವಾಯುನೆಲೆ ದಾಳಿಯಲ್ಲಿ ಪಾಕಿಸ್ತಾನದ ಪಾತ್ರ ಸ್ಪಷ್ಟವಾಗಿರುವ ಕುರಿತಂತೆ ದೃಢೀಕರಿಸಿರುವ ಅಮೆರಿಕ ಹಲವು ಸಾಕ್ಷ್ಯಾಧಾರಗಳನ್ನು ಭಾರತಕ್ಕೆ ನೀಡಿದೆ.   ಪಠಾಣ್ಕೋಟ್ ವಾಯುನೆಲೆಯ ಮೇಲೆ ಕಳೆದ ಜನವರಿಯಲ್ಲಿ ನಡೆದ ಉಗ್ರ ದಾಳಿ ವಿಷಯದಲ್ಲಿ ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಯ ವತಿಯಿಂದ ದಾಳಿಯ ರೂವಾರಿ ಮಸೂದ್ ಅಜರ್ ಜೊತೆ ಫೇಸ್ಬುಕ್ ಮೂಲಕ ಸಂಪರ್ಕ ಮಾಡಿ ಮಾತುಕತೆ ನಡೆಸಿರುವುದು ಹಾಗೂ ಪಾಕಿಸ್ತಾನದಲ್ಲಿರುವ ಅಲ್ರಹಮತ್ ಟ್ರಸ್ಟ್ ವತಿಯಿಂದ ಭಾರತದಲ್ಲಿದ್ದ ಮಸೂದ್ ಅಜರ್ ಮತ್ತು ಸಂಗಡಿಗರಿಗೆ ದಾಳಿಯ ವೆಚ್ಚಕ್ಕಾಗಿ ಹಣ ಸಂದಾಯವಾಗಿರುವ ಬಗ್ಗೆ ನಿಖರ ಸಾಕ್ಷಿ-ಪುರಾವೆಗಳನ್ನು ಅಮೆರಿಕ ರಾಷ್ಟ್ರೀಯ ತನಿಖಾ ತಂಡದ (ಎನ್ಐಎ) ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಅಮೆರಿಕ ರವಾನಿಸಿರುವ ಫೇಸ್ಬುಕ್ ಸಾಕ್ಷಿಯಿಂದಾಗಿ ಪಠಾಣ್ಕೋಟ್ ಮೇಲಿನ ದಾಳಿಯಲ್ಲಿ ಪಾಕ್ನ ಕೈವಾಡ ಇರುವುದು ಸ್ಪಷ್ಟವಾಗಿದೆ. ಜೈಷ್-ಎ-ಮೊಹ್ಮದ್ ಮುಖಂಡ ಪಠಾಣ್ಕೋಟ್ ದಾಳಿಕೋರರ ಸೂತ್ರಧಾರ ಕಶೇಫ್ ಜಾನ್ ಎಂಬ ವ್ಯಕ್ತಿ ಅಜರ್ ಜೊತೆ ಇಡೀ ದಾಳಿಯ ಪೂರ್ವ ಹಾಗೂ ನಂತರದ ಸಮಯದಲ್ಲಿ ನಿಕಟ ಸಂಪರ್ಕ ಹೊಂದಿರುವುದು ಇದರಿಂದ ಬಯಲಾಗಿದೆ. ಜನವರಿ ಆರಂಭದಲ್ಲಿ ನಡೆದಿದ್ದ ಈ ದಾಳಿಯಲ್ಲಿ ಜೆಇಎಂನ ಭಯೋತ್ಪಾದಕರಾದ ನಾಸೀರ್ ಹುಸೇನ್, ಹಫೀಝ್ ಅಬುಬಕರ್, ಉಮರ್ ಫಾರೂಖ್ ಮತ್ತು ಅಬ್ದುಲ್ ಖಯಾಮ್ ಯೋಧರ ಗುಂಡಿಗೆ ಬಲಿಯಾಗಿದ್ದರು.

ದಾಳಿಯ ವೇಳೆ ತಾರೀಕ್ ಸಿದ್ದಿಕಿ ಎಂಬ ವ್ಯಕ್ತಿಗೆ ಸೇರಿದ ಇ-ಮೇಲ್ನಿಂದ ಅಲ್ರಹ್ಮತ್ ಸಂಘಟನೆ, ರಂಗೋನೂರ್ಡಾಟ್ಕಾಮ್ ಮತ್ತು ಅಲ್ಕಲಮೊ ಆನ್ಲೈನ್ ಡಾಟ್ ಕಾಂ ವೆಬ್ಸೈಟ್ಗಳ ಮೂಲಕ ಕರಾಚಿಯ ಮಲೀರ್ನಲ್ಲಿರುವ ರಫಾಹ್-ಇ-ಆಮ್ ಸೊಸೈಟಿ ಮೂಲಕ ಮಸೂದ್ ಅಜರ್ ಜೊತೆ ಸಂಪರ್ಕವಿಟ್ಟುಕೊಂಡು ಅಗತ್ಯ ಮಾಹಿತಿ ಹಾಗೂ ಹಣ ರವಾನೆ ಮಾಡಲಾಗಿತ್ತು ಎಂಬುದು ಈ ದಾಖಲೆಗಳಿಂದ ಬಹಿರಂಗಗೊಂಡಿದೆ.  ಈ ಎಲ್ಲಾ ವೆಬ್ಸೈಟ್ ವಿಳಾಸಗಳು ಹಾಗೂ ಸಂಪರ್ಕಿಸಿದ ಸಂಸ್ಥೆಗಳು ಪಾಕಿಸ್ತಾನದಲ್ಲೇ ಇವೆ ಎಂಬುದನ್ನು ದೃಢಪಸಿರುವ ಅಮೆರಿಕ ಅಧಿಕಾರಿಗಳು, ಸಂದೇಶಗಳು ಅಪ್ಲೋಡ್ ಮತ್ತು ಡೌನ್ಲೋಡ್ ಆಗಿರುವ ಸಮಯಗಳನ್ನು ನಿರ್ದಿಷ್ಟವಾಗಿ ನಮೂದಿಸಿದ್ದು, ಪಠಾಣ್ಕೋಟ್ ದಾಳಿ ಸಮಯಕ್ಕೂ ಈ ದಾಖಲೆಗಳಿಗೂ ಸಮಯ ನಿಖರವಾಗಿದೆ.

ಕಶೀಫ್ ಜಾನ್ ತನ್ನ ಫೇಸ್ಬುಕ್ನಲ್ಲಿ ಉಪಯೋಗಿಸಿರುವ ಮೊಬೈಲ್ ಸಂಖ್ಯೆಗೂ ದಾಳಿಕೋರರ ಬಳಿ ಇದ್ದ ಮೊಬೈಲ್ ಸಂಖ್ಯೆಗಳಿಗೂ ಸಂಪರ್ಕ ನಿಕಟವಾಗಿದ್ದು , ಈ ಎಲ್ಲಾ ಸಂಖ್ಯೆಗಳೂ ಲಭ್ಯವಾಗಿವೆ. ಇದರಲ್ಲಿ ಪಂಜಾಬ್ ಗುರುದಾಸ್ಪುರ ಪೊಲೀಸ್ ಎಸ್ಪಿ ಸಲ್ವೀಂದರ್ ಸಿಂಗ್ ಮೊಬೈಲ್ ಸಂಖ್ಯೆಯೂ ನಮೂದಾಗಿದೆ. ಇದರೊಂದಿಗೆ ಪಾಕ್ ನಿವಾಸಿ ಮುಲ್ಲಾದಾದುಲ್ಲಾಹ್ ಎಂಬ ವ್ಯಕ್ತಿಯ ಮೊಬೈಲ್ ಸಂಖ್ಯೆಯ ಸಂಪರ್ಕವೂ ಸಿಕ್ಕಿದೆ. ಈ ಎಲ್ಲಾ ಸಂಖ್ಯೆಗಳೂ ಪಾಕಿಸ್ತಾನದ ಟೆಲಿನಾರ್ ಮತ್ತು ಪಾಕಿಸ್ತಾನ ಟೆಲಿ ಕಮ್ಯೂನಿಕೇಷನ್ ಕಂಪಮಿ ಲಿಮಿಟೆಡ್ ಸಂಸ್ಥೆಗಳಿಂದಲೇ ನಡೆದಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin