ಪತಿಯಿಂದ ದುಡ್ಡು ಕೀಳಲು ಮಾಸ್ಟರ್ ಪ್ಲಾನ್ ಮಾಡಿ ಸಿಕ್ಕಿಬಿದ್ದ ಪತ್ನಿ, ಸಾಥ್ ಕೊಟ್ಟವನಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

Crime-Baby--01

ಬೆಂಗಳೂರು, ಅ.13-ಮನೆಗೆ ಬಾರದ ಎರಡನೆ ಪತಿಯಿಂದ ಜೀವನ ನಿರ್ವಹಣೆಗೆ ಹಣ ವಸೂಲಿ ಮಾಡುವ ಉದ್ದೇಶದಿಂದ ಅಪಹರಿಸಲಾಗಿದ್ದ ಒಂದು ವರ್ಷದ ಮಗುವನ್ನು ಪೋಷಕರ ಮಡಿಲು ಸೇರಿಸಿರುವ ಸಂಪಿಗೆಹಳ್ಳಿ ಉಪವಿಭಾಗದ ಪೊಲೀಸರು ಅಪಹರಣಕಾರರ ಕೈಗೆ ಕೋಳ ತೊಡಿಸುವುದರ ಜೊತೆಗೆ ಪರಾರಿಯಾಗಲೆತ್ನಿಸಿದ ಮತ್ತೊಬ್ಬ ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತಿನಗರದ ನಿವಾಸಿ ಶಹನಾಜ್ ಖಾನಮ್(36), ಗೋವಿಂದಪುರದ ನಿವಾಸಿಗಳಾದ ಮಹಮ್ಮದ್ ನೂರುಲ್ಲಾ(23), ಇಸಾಕ್ ಖಾನ್(19) ಹಾಗೂ ಅಬ್ದುಲ್ ವಾಹೀದ್ ಬಂಧಿತ ಆರೋಪಿಗಳು. ಭಾರತಿ ನಗರದ ಐನಾತಿ ಮಹಿಳೆ ಶಹನಾಜ್ ಖಾನಮ್‍ಗೆ ಮೊದಲನೆ ಪತಿ ತೀರಿಕೊಂಡ ನಂತರ ಗೌರಿಪಾಳ್ಯದ ಫೈರೋಜ್‍ಖಾನ್ ಎಂಬಾತನನ್ನು ಎರಡನೆ ಮದುವೆಯಾಗಿದ್ದಳು.  ಫೈರೋಜ್‍ಖಾನ್ ಮೊದಮೊದಲು ಮನೆಗೆ ಬಂದು ಸಂಸಾರ ನಿರ್ವಹಣೆಗೆ ಹಣ ಕೊಡುತ್ತಿದ್ದ. ನಂತರದ ಕಾಲದಲ್ಲಿ ಆತ ಮನೆಗೆ ಬರುವುದನ್ನೇ ಮರೆತಿದ್ದ. ಆತನ ವರ್ತನೆಯಿಂದ ರೋಸಿಹೋದ ಶಹನಾಜ್ ತನಗೆ ಮಗುವಾಗಿದೆ ಎಂದು ನಂಬಿಸಿ ಹಣ ವಸೂಲಿ ಮಾಡುವ ಪ್ಲ್ಯಾನ್ ಹಾಕಿದಳು.

ಇದಕ್ಕಾಗಿ ತನ್ನ ಮಗಳಿಗೆ ಪರಿಚಯವಿದ್ದ ಗೋವಿಂದಪುರದ ನಿವಾಸಿಗಳಾದ ನೂರುಲ್ಲಾ ಮತ್ತವನ ಸಹಚರರಿಗೆ ಆಸ್ಪತ್ರೆಯಿಂದ ಚಿಕ್ಕ ಮಗುವೊಂದು ಅಪಹರಿಸಿ ತಂದುಕೊಡುವಂತೆ ಪುಸಲಾಯಿಸಿದ್ದಳು. ಶಹನಾಜ್ ಸೂಚನೆಯಂತೆ ಮಗು ಅಪಹರಣಕ್ಕೆ ಸಂಚು ರೂಪಿಸಿದ ನೂರುಲ್ಲಾ ಮತ್ತವನ ತಂಡ ಕಳೆದ 5 ರಂದು ಮಧ್ಯಾಹ್ನ ಕೊತ್ತನೂರು ಠಾಣಾ ವ್ಯಾಪ್ತಿಯ ಹೆಗಡೆನಗರ ಸಮೀಪದ ಎಕ್ಸ್ ಸರ್ವೀಸ್ ಬಡಾವಣೆಯ ಲೆಬರ್ ಶೆಡ್‍ನಲ್ಲಿ ವಾಸವಿದ್ದ ದೊಡ್ಡಭೀಮಯ್ಯ ಮತ್ತು ಮಹೇಶ್ವರಿ ದಂಪತಿಯ ಒಂದು ವರ್ಷದ ಶ್ರೀರಾಮ್ ಗಂಡು ಮಗುವನ್ನು ದ್ವಿಚಕ್ರ ವಾಹನದಲ್ಲಿ ಬಂದು ಅಪಹರಿಸಿ ಪರಾರಿಯಾಗಿದ್ದರು.

ಅಪಹರಣಕಾರರು ಮಗು ಅಪಹರಿಸಿದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಈ ಮಾಹಿತಿಯನ್ನು ಆಧರಿಸಿ ಶಹನಾಜ್, ಇಶಾಕ್ ಮತ್ತು ಅಬ್ದುಲ್ ವಾಹೀದ್‍ನನ್ನು ಬಂಧಿಸಲಾಗಿತ್ತು. ಆದರೆ ನೂರುಲ್ಲಾ ಮಾತ್ರ ತಲೆಮರೆಸಿಕೊಂಡಿದ್ದ. ಇಂದು ಮುಂಜಾನೆ ಆತನ ಮನೆ ಮೇಲೆ ದಾಳಿ ಮಾಡಿ ಬಂಧಿಸಲು ಯತ್ನಿಸಿದಾಗ ಆತ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ.

ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿ ಚಿಕಿತ್ಸೆಗಾಗಿ ನೂರುಲ್ಲಾನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತಂತೆ ಪೋಷಕರು ನೀಡಿದ ದೂರು ದಾಖಲಿಸಿಕೊಂಡ ಕೊತ್ತನೂರು ಇನ್ಸ್‍ಪೆಕ್ಟರ್ ಎಚ್.ಹರಿಯಪ್ಪ, ಹಾಗೂ ಇನ್ಸ್‍ಪೆಕ್ಟರ್‍ಗಳಾದ ಅಂಜನ್‍ಕುಮಾರ್, ಶ್ರೀನಿವಾಸ್ ನೇತೃತ್ವದ ತನಿಖಾ ತಂಡ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್, ಡಿಸಿಪಿ ಗಿರೀಶ್, ಎಸಿಪಿ ಬೋಪಯ್ಯ ಮಾರ್ಗದರ್ಶನದಲ್ಲಿ ಅಪಹರಣ ಕೃತ್ಯ ಭೇದಿಸಿ ಮಗುವನ್ನು ಪೊಲೀಸರಿಗೊಪ್ಪಿಸುವಲ್ಲಿ ಯಶಸ್ವಿಯಾಗಿದೆ.

Facebook Comments

Sri Raghav

Admin