ಪತ್ನಿ , ಮಕ್ಕಳಿಗೆ ನಿದ್ದೆಮಾತ್ರೆಗಳನ್ನು ತಿನ್ನಿಸಿದ್ದ ಕಾನ್ ಸ್ಟೇಬಲ್ ವಿಷದ ಇಂಜೆಕ್ಷನ್ ಚುಚ್ಚಿಕೊಂಡಿದ್ದ..!
ಬೆಂಗಳೂರು,ಮೇ 24-ಕೈ ಹಿಡಿದ ಪತ್ನಿ ಹಾಗೂ ಇಬ್ಬರು ಮುದ್ದಾದ ಮಕ್ಕಳಿಗೆ ನಿದ್ದೆ ಮಾತ್ರೆಗಳನ್ನು ತಿನಿಸಿ ಕೊಲೆ ಮಾಡಿ ನಂತರ ಹೆಡ್ಕಾನ್ಸ್ಟೇಬಲ್ ಸಹ ಮಾತ್ರ ಸೇವಿಸಿ, ವಿಷದ ಇಂಜೆಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ಪೊಲೀಸರ ತನಿಖೆ ಹಾಗೂ ವೈದ್ಯರ ಹೇಳಿಕೆಯಿಂದ ಗೊತ್ತಾಗಿದೆ. ಪತ್ನಿ ವೀಣಾ ಅವರಿಗೆ 30ಕ್ಕೂ ಹೆಚ್ಚು ನಿದ್ದೆ ಮಾತ್ರೆಯನ್ನು ತಿನ್ನಿಸಿದ್ದ ಕಾನ್ಸ್ಟೇಬಲ್ ಸುಭಾಷ್ಚಂದ್ರ ತನ್ನ ಮಕ್ಕಳಾದ ಮಾನ್ವಿ ಹಾಗೂ ಪೃಥ್ವಿಗೆ ತಲಾ 20 ಮಾತ್ರೆಗಳನ್ನು ತಿನ್ನಿಸಿ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.
ಸುಭಾಷ್ಚಂದ್ರ ಅಲ್ಪ ಪ್ರಮಾಣದಲ್ಲಿ ನಿದ್ದೆ ಮಾತ್ರೆ ಸೇವಿಸಿ ನಂತರ ವಿಷದ ಇಂಜೆಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಬ್ಯಾಪಿಸ್ಟ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಪ್ರಜ್ಞೆ ಬಂದಿರುವ ಇವರಿಂದ ಇನ್ನೂ ಕೆಲವು ಮಾಹಿತಿಗಳನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಗೃಹಕಚೇರಿ ಭದ್ರತೆಗೆ ನಿಯೋಜನೆಗೊಂಡಿದ್ದ ಸುಭಾಷ್ ಚಂದ್ರ ಹೆಚ್ಚು ಸಾಲ ಮಾಡಿಕೊಂಡಿದ್ದರೆಂದು ಹೇಳಲಾಗುತ್ತಿದ್ದು , ಸಾಲವನ್ನು ಕುಟುಂಬ ನಿರ್ವಹಣೆಗೋ ಅಥವಾ ಬೇರೆ ಯಾವ ಕಾರಣಕ್ಕೆ ಸಾಲ ಮಾಡಿದ್ದರು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸ್ನೇಹಿತರ ಪ್ರಕಾರ ಐಪಿಎಲ್ ಬೆಟ್ಟಿಂಗ್ನಲ್ಲಿ ಕಾನ್ಸ್ಟೆಬಲ್ ಹಣ ಹೂಡಲು ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದ್ದರೂ ಈ ಬಗ್ಗೆ ತನಿಖೆ ನಡೆಯುತ್ತಿದೆ.
ಸುಭಾಷ್ಚಂದ್ರ ವಿರುದ್ಧ ಸಂಪಿಗೆಹಳ್ಳಿ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ಒಂದು ಕೊಲೆ ಪ್ರಕರಣ, ಮತ್ತೊಂದು ಆತ್ಮಹತ್ಯೆ ಯತ್ನ ಪ್ರಕರಣ.
ಪತ್ನಿ ಮತ್ತು ಮಕ್ಕಳ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಕಾನ್ಸ್ಟೇಬಲ್ ಸುಭಾಷ್ಚಂದ್ರ ಕೆಲಸ ಮಾಡುತ್ತಿದ್ದ ಸಿಎಂ ಗೃಹ ಕಚೇರಿಯ ಸ್ನೇಹಿತರಿಂದಲೂ ಮಾಹಿತಿ ಕಲೆ ಹಾಕುತ್ತಿದ್ದು , ಸುಭಾಷ್ಚಂದ್ರ ಅವರ ಮೊಬೈಲ್ನಲ್ಲಿದ್ದ ಕರೆಗಳ ಪ್ರಿಂಟ್ಔಟ್ಗಳನ್ನು ತರಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಿನ್ನೆ ಬೆಳಗ್ಗೆ ಸಂಪಿಗೆಹಳ್ಳಿಯಲ್ಲಿ ಈ ಸುದ್ದಿ ಹರಡುತ್ತಿದ್ದಂತೆ ನೆರೆಹೊರೆಯವರು, ಸುತ್ತಮುತ್ತಲಿನ ನಿವಾಸಿಗಳು ಬೆಚ್ಚಿಬಿದ್ದಿದ್ದರು. ಏನೂ ಅರಿಯದ ಮೂರೂವರೆ ವರ್ಷದ ಮಾನ್ವಿ ಹಾಗೂ ಒಂದೂವರೆ ವರ್ಷದ ಪೃಥ್ವಿ ಎಂಬ ಮಗುವನ್ನು ಕಂಡು ಮರುಕಪಟ್ಟಿದ್ದರು. ಒಟ್ಟಾರೆ ತಾನು ಮಾಡಿಕೊಂಡ ಸಾಲಕ್ಕಾಗಿ ಕುಟುಂಬವನ್ನೇ ಬಲಿ ತೆಗೆದುಕೊಂಡಿರುವುದು ವಿಪರ್ಯಾಸ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS