ಪತ್ರಕರ್ತೆ ಗೌರಿ ಹಂತಕರ ಮಾಹಿತಿ ಸಿಕ್ಕಿದೆ, ಆದರೆ ಬಹಿರಂಗ ಪಡಿಸುವುದಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Cm-BLR

ಬೆಂಗಳೂರು, ಅ.21- ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಮ್ಮ ಬಳಿ ಮಾಹಿತಿ ಇದೆ. ಆದರೆ, ತನಿಖೆಯ ದೃಷ್ಟಿಯಿಂದ ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಕೋರಮಂಗಲದಲ್ಲಿರುವ ಕೆಎಸ್‍ಆರ್‍ಪಿ ಮೈದಾನದಲ್ಲಿ ಗೃಹ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಮಾಧ್ಯಮಗಳು ಹೆಚ್ಚು ವೇಗವಾಗಿ ಕೆಲಸ ಮಾಡುತ್ತಿವೆ. ಯಾವುದೇ ಘಟನೆ ನಡೆದರೂ ಕ್ಷಣ ಕ್ಷಣದ ಮಾಹಿತಿ ಬಿತ್ತರಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಪೊಲೀಸರು ಬಹಳ ಎಚ್ಚರದಿಂದ ಕೆಲಸ ಮಾಡಬೇಕು. ಗೌರಿಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರತಿ ಕ್ಷಣದ ಮಾಹಿತಿಯನ್ನು ಮಾಧ್ಯಮ ಕೇಳುತ್ತಿತ್ತು. ನಮ್ಮ ಬಳಿ ಮಾಹಿತಿ ಇಲ್ಲ ಎಂದಲ್ಲ. ತನಿಖೆಯ ದೃಷ್ಟಿಯಿಂದ ಮಾಹಿತಿ ನೀಡಲಿಲ್ಲ. ಒಂದು ವೇಳೆ ಮಾಹಿತಿ ಬಹಿರಂಗವಾದರೆ ತನಿಖೆ ದಿಕ್ಕು ತಪ್ಪಲಿದೆ ಎಂದರು.

ಪೊಲೀಸ್ ಇಲಾಖೆ ಆಧುನುಕ ತಂತ್ರಜ್ಞಾನವನ್ನು ಅಳವಡಿಸಬೇಕು. ಇಲ್ಲವಾದರೆ ಸಂಘಟಿತ ಅಪರಾಧಗಳನ್ನು ಪತ್ತೆಹಚ್ಚುವುದು ಕಷ್ಟವಾಗಲಿದೆ. ಅಪರಾಧನಂತರ ಮತ್ತು ಅಪರಾಧಕ್ಕೂ ಮುನ್ನ ಪೊಲೀಸರ ಕೆಲಸ  ಅತ್ಯಂತ ಮಹತ್ವಪೂರ್ಣವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಜೀವ ಪಣಕ್ಕಿಟ್ಟು ಕೆಲಸ ಮಾಡಬೇಕಾಗುತ್ತದೆ. ದೇಶಕ್ಕಾಗಿ ಪ್ರಾಣ ಮುಡುಪಾಗಿಟ್ಟಿರುವ ಪೊಲೀಸರು ಮತ್ತು ಯೋಧರು ಸದಾ ಸ್ಮರಣೀಯರು. ಪೊಲೀಸ್ ಸಿಬ್ಬಂದಿಗಳ ವೇತನ ತಾರತಮ್ಯ ನಿವಾರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ 6ನೇ ವೇತನ ಆಯೋಗದಲ್ಲಿ ಅಧ್ಯಯನ ನಡೆಯುತ್ತಿದೆ. ಅದಕ್ಕೂ ಮುನ್ನ ಹಲವಾರು ಸೌಲಭ್ಯಗಳನ್ನು ಒದಗಿಸಲಾಗಿದೆ. 2 ಸಾವಿರ ಭತ್ಯೆ ಹೆಚ್ಚಿಸಲಾಗಿದೆ. ಎಐಎಸ್‍ನ ಕೆಳಹಂತದ ಸಿಬ್ಬಂದಿಗಳಿಗೆ 10 ವರ್ಷಗಳ ನಂತರ ಬಡ್ತಿ ನೀಡಲಾಗಿದೆ ಎಂದು ಹೇಳಿದರು. ಪೊಲೀಸರು ಉತ್ತಮವಾಗಿ ಕೆಲಸ ಮಾಡಿ. ಅಪರಾಧಗಳನ್ನು ತಡೆಗಟ್ಟಿ, ಅಪರಾಧಿಗಳಿಗೆ ಶಿಕ್ಷೆ ಕೊಡಿಸಿದರೆ ಇಲಾಖೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ. ಅದರಿಂದ ಸರ್ಕಾರಕ್ಕೂ ಒಳ್ಳೆಯ ಹೆಸರು ಬರಲಿದೆ ಎಂದರು. ಪೊಲೀಸರು ಕಠಿಣ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕು, ಒತ್ತಡದ ನಡುವೆ ಕಾನೂನು ಸುವ್ಯವಸ್ಥೆಗಾಗಿ ಹೋರಾಡಬೇಕಾಗಿದೆ ಎಂಬುದು ನನಗೆ ಗೊತ್ತಿದೆ. ಅದಕ್ಕಾಗಿ ಪೊಲೀಸರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ತೊಡಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಬೆಳಗವಾಗಿಯ ಅಧಿವೇಶನದ ವೇಳೆ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳಿಗೆ ವಸತಿ ಸೌಲಭ್ಯ ಕೊರತೆ ಇರುವುದು ಗಮನಕ್ಕೆ ಬಂದಿದ್ದು, ಈ ವರ್ಷದಿಂದಲೇ ಸೂಕ್ತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಜತೆಗೆ ಪೊಲೀಸರ ಸಂಸ್ಮರಣೆಗಾಗಿ ಶಾಶ್ವತ ಸ್ಥಳದ ಅಭಾವವಿದೆ. ಹೊಸದಾಗಿ ಜಾಗ ಕೊಡುತ್ತಿದ್ದು, ಅಲ್ಲಿ ಸಂಸ್ಮರಣೆ ದಿನಾಚರಣೆ ನಡೆಸಲು ಶಾಶ್ವತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು. ಪೊಲೀಸ್ ಇಲಾಖೆಯಲ್ಲೂ ಉತ್ತಮ ಕ್ರೀಡಾಪಟುವಿದ್ದು, ಅವರ ಅಭ್ಯಾಸಕ್ಕೆ ಕ್ರೀಡಾಂಗಣ ನಿರ್ಮಿಸಿಕೊಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. 2016 ರ ಸೆಪ್ಟೆಂಬರ್‍ನಿಂದ 2017ರ ಆಗಸ್ಟ್‍ವರೆಗೆ ದೇಶಾದ್ಯಂತ 370ಮಂದಿ ಪೊಲೀಸರು  ಕರ್ತವ್ಯವೇಳೆ ಪ್ರಾಣಾರ್ಪಣೆ ಮಾಡಿದ್ದಾರೆ. ರಾಜ್ಯದಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ಬರಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಇತ್ತೀಚೆಗೆ ಕೆಲವು ಘಟನೆಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಅಪರಾಧಗಳನ್ನು ಮಾಡಲಾಗಿದೆ. ಅವುಗಳನ್ನು ಪತ್ತೆಹಚ್ಚಲು ನಮ್ಮ ಪೊಲೀಸರು  ಸಮರ್ಥರಿದ್ದಾರೆ. ನಮ್ಮ ಪೊಲೀಸರೂ ಆಧುನಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಟಿಪ್ಪು ಜಯಂತಿಯಲ್ಲಿ ಭಾಗವಹಿಸುವುದಿಲ್ಲ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಅವರ ಪತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರದ ಸಚಿವರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಶಿಷ್ಟಾಚಾರದ ಪ್ರಕಾರ ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಹಾಕಬೇಡಿ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡ ಪತ್ರ ಬರೆದಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಲಾಗುವುದು. ಕಾರ್ಯಕ್ರಮಕ್ಕೆ ಬರುವುದು, ಬಿಡುವುದು ಅವರಿಗೆ ಸೇರಿದ ವಿಷಯ ಎಂದು ಹೇಳಿದರು. ಗೃಹ ಸಚಿವ ರಾಮಲಿಂಗಾರೆಡ್ಡಿ, ಡಿಜಿಪಿ ರೂಪ್‍ಕುಮಾರ್ ದತ್ತ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಸರ್ಕಾರದ ಮುಖ್ಯಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಆ, ಹಿರಿಯ ಅಧಿಕಾರಿಗಳಾದ ಕಿಶೋರ್‍ಚಂದ್ರ, ನೀಲಮಣಿರಾಜು, ಎಂ.ಎನ್.ರೆಡ್ಡಿ, ಎ.ಎಂ.ಪ್ರಸಾದ್, ಸ್ವಪ್ನತಿವಾರಿ, ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ತಮ್ಮಯ್ಯ, ಕಸಾಪ ಅಧ್ಯಕ್ಷ ಮನುಬಳಿಗಾರ್, ಹಿರಿಯ ನಟರಾದ ಶಿವರಾಜ್‍ಕುಮಾರ್, ಹುಚ್ಚವೆಂಕಟ್,  ಎಫ್‍ಕೆಸಿಸಿಐ ಅಧ್ಯಕ್ಷ ಕೆ.ರವಿ, ರಾಷ್ಟ್ರೀಯ ಕಾನೂನು  ಶಾಲೆಯ ಕುಲಪತಿ ವೆಂಕಟರಾವ್ ಮತ್ತಿತರರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ನಟ ಹುಚ್ಚವೆಂಕಟ್  ಕರೆಯದೇ ಬಂದ ಅತಿಥಿ ಎಂದು ಹೇಳಲಾಗಿದೆ. ಹುಚ್ಚ ವೆಂಕಟ್ ವಿರುದ್ಧ ಈಗಾಗಲೇ ಹಲವಾರು ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿವೆ. ಅವರು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸುವುದು ಎಷ್ಟು ಸರಿ ಎಂಬ ಆಕ್ಷೇಪ ಕೇಳಿ ಬಂತು. ಇದಕ್ಕೆ ಸ್ಪಷ್ಟನೆ ನೀಡಿರುವ ಹಿರಿಯ ಅಧಿಕಾರಿಗಳು, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಸ್ವಯಂ ಪ್ರೇರಿತವಾಗಿ ಭಾಗವಹಿಸಿದ್ದಾರೆ. ಅವರ ಹಾಜರಾತಿಗೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಹುತ್ಮಾತ ಪೊಲೀಸರು:

* ಎಸ್.ರವಿಕುಮಾರ್, ಎಸ್‍ಪಿ, ಲೋಕಾಯುಕ್ತ, ಮೈಸೂರು.

* ಎಂ.ಬಿ.ಪಾಟೀಲ್, ಎಸ್‍ಪಿ, ಲೋಕಾಯುಕ್ತ, ವಿಜಯಪುರ.

* ಎಂ.ಮೇಶ್‍ಕುಮಾರ್, ಪಿಐ, ಮೈಸೂರು ಜಿಲ್ಲೆ.

* ರಾಮಚಂದ್ರ ಹುಚ್ಚಪ್ಪ ಬಳ್ಳಾರಿ, ಪಿಎಸ್‍ಐ, ಬೆಳಗಾವಿ.

* ಟಿ.ಡಿ.ಜಯರಾಮು, ಎಎಸ್‍ಐ, ಬೆಂಗಳೂರು.

* ಪುಟ್ಟಮಾದಾ, ಎಎಚ್‍ಸಿ, 411, ಬೆಂಗಳೂರು.

* ಅರುಣ್‍ಕುಮಾರ್, ಸಿಪಿಸಿ, 10544, ಬೆಂಗಳೂರು.

* ಎಚ್.ಎಸ್.ರಮೇಶ್, ಸಿಪಿಸಿ, 4074, ಬೆಂಗಳೂರು.

* ಸುರೇಶ್ ಎಸ್.ಡೆಂಗಿ, ಸಿಪಿಸಿ, 12161, ಬೆಂಗಳೂರು

* ರಮೇಶ್ ಡೆಂಗಿ, ಸೋಲಿಸಿ 693, ವಿಜಯಪುರ.

* ಡಿ.ಎಸ್.ಕಿರಣ್‍ಕುಮಾರ್, ಎಪಿಸಿ, 156, ಮೈಸೂರು.

* ಎನ್.ಲಕ್ಷ್ಮಣ, ಎಪಿಸಿ, 140, ಮೈಸೂರು.

Facebook Comments

Sri Raghav

Admin