ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಗೆ ಮುಂದಾದ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-BJP

ಬೆಂಗಳೂರು, ಜ.28-ಪಕ್ಷದಲ್ಲಿ ತಮ್ಮ ನಾಯಕತ್ವದ ವಿರುದ್ಧ ಬಂಡೇಳಲು ಕಾರಣವಾಗಿದ್ದ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮುಂದಾಗಿದ್ದಾರೆ.   ಈ ಮೂಲಕ ಪಕ್ಷದಲ್ಲಿ ಉಂಟಾಗಿದ್ದ ಭಿನ್ನಮತವನ್ನು ಶಾಶ್ವತವಾಗಿ ಕೊನೆಗಾಣಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅವರ ಉದ್ದೇಶವಾಗಿದೆ. ಕಳೆದ ರಾತ್ರಿ ನವದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಾಧ್ಯವಾದರೆ ಪದಾಧಿಕಾರಿಗಳ ಪಟ್ಟಿ ಬದಲಾಯಿಸುವಂತೆ ಬಿಎಸ್‍ವೈಗೆ ಸೂಚಿಸಿದ್ದರು.

ಇನ್ನು ಸಭೆಯಲ್ಲಿ ಇದೇ ವಿಷಯ ಪ್ರಸ್ತಾಪಿಸಿದ್ದ ಪಕ್ಷದ ಮುಖಂಡ ಕೆ.ಎಸ್.ಈಶ್ವರಪ್ಪ ಕೆಲವು ಕಡೆ ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿ ಕೆಜೆಪಿಯಿಂದ ವಲಸೆ ಬಂದವರಿಗೆ ಮಣೆ ಹಾಕಲಾಗಿದೆ ಎಂಬ ನೋವನ್ನು ವರಿಷ್ಠರ ಮುಂದೆ ಹೊರಹಾಕಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಮಿತ್ ಷಾ, ಎಲ್ಲೆಲ್ಲಿ ಸಾಧ್ಯವಿದೆಯೋ ಅಂತಹ ಜಿಲ್ಲೆಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿ. ಪಕ್ಷದ ಕಾರ್ಯಕರ್ತರನ್ನಾಗಲಿ, ನಿಷ್ಠಾವಂತರನ್ನು ಕಡೆಗಣಿಸಬಾರದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಲಹೆ ಮಾಡಿದ್ದರು.  ಹೀಗೆ ರಾಷ್ಟ್ರೀಯ ಅಧ್ಯಕ್ಷರಿಂದ ಸಲಹೆ ಬಂದಿರುವುದರಿಂದ ಈಗಾಗಲೇ ನೇಮಕಗೊಂಡಿರುವ ಪದಾಧಿಕಾರಿಗಳ ಪಟ್ಟಿಯಲ್ಲಿ ಸಣ್ಣ ಪ್ರಮಾಣದ ಬದಲಾವಣೆಯಾಗಲಿದೆ ಎಂದು ತಿಳಿದುಬಂದಿದೆ.

ಎಲ್ಲೆಲ್ಲಿ ಬದಲಾವಣೆ:

ಪದಾಧಿಕಾರಿಗಳ ಪಟ್ಟಿ ನೇಮಕವಾದ ಬಳಿ ತಮ್ಮ ವಿರುದ್ಧ ಸಮರ ಸಾರಿದ್ದ ಈಶ್ವರಪ್ಪ ಪಟ್ಟಿ ಪರಿಷ್ಕರಿಸುವಂತೆ ಪಟ್ಟು ಹಿಡಿದಿದ್ದರು. ಪ್ರಮುಖವಾಗಿ ಶಿವಮೊಗ್ಗ, ತುಮಕೂರು, ಚಾಮರಾಜನಗರ, ದಾವಣಗೆರೆ, ಬೀದರ್, ಗುಲ್ಬರ್ಗಾ, ಕಲಬುರಗಿ, ಬೆಳಗಾವಿ ಮತ್ತಿತರ ಕಡೆ ಬದಲಾಯಿಸಬೇಕೆಂಬುದು ಈಶ್ವರಪ್ಪನವರ ಒತ್ತಾಯವಾಗಿತ್ತು.  ಇದೀಗ ಶಿವಮೊಗ್ಗದಲ್ಲಿ ರುದ್ರೇಶ್‍ಗೌಡ, ತುಮಕೂರಿನಲ್ಲಿ ಜ್ಯೋತಿಗಣೇಶ್, ದಾವಣಗೆರೆ ಅರವಿಂದ್ ಜಾಧವ್, ಚಾಮರಾಜನಗರದ ಪ್ರೊ.ಮಲ್ಲಿಕಾರ್ಜುನಪ್ಪ, ಕಲಬುರಗಿಯ ನರಿಬೋಳ ಸೇರಿದಂತೆ ಅಲ್ಲಲ್ಲಿ ತುಸು ಬದಲಾಯಿಸಲು ಯಡಿಯೂರಪ್ಪ ಸಮ್ಮತಿಸಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸಬೇಕೆಂದು ಅಮಿತ್ ಷಾ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅನಿವಾರ್ಯವಾಗಿ ಪಟ್ಟಿ ಪರಿಷ್ಕರಣೆಗೆ ಒಪ್ಪಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin