ಪದಾಧಿಕಾರಿಗಳ ಪಟ್ಟಿ ಬದಲಾವಣೆ ಮಾಡಲು ಸಾಧ್ಯವಿಲ್ಲ : ಅಮಿತ್ ಷಾ

ಈ ಸುದ್ದಿಯನ್ನು ಶೇರ್ ಮಾಡಿ

adgsdgsdgಬೆಂಗಳೂರು,ಆ.5-ಸದ್ಯದ ಪರಿಸ್ಥಿತಿಯಲ್ಲಿ ಪದಾಧಿಕಾರಿಗಳ ಪಟ್ಟಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಎಲ್ಲ ನಾಯಕರು ಅನುಸರಿಸಿಕೊಂಡು ಪಕ್ಷವನ್ನು ಮುನ್ನೆಡೆಸಿಕೊಂಡು ಹೋಗಬೇಕೆಂದು ಬಿಜೆಪಿ ರಾಷ್ಟ್ರೀಯ ನಾಯಕರು, ರಾಜ್ಯ ಘಟಕದ ನಾಯಕರಿಗೆ ನಿರ್ದೇಶನ ನೀಡಿದ್ದಾರೆ.  ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವ ಮುನ್ನ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಬೇಕು. ಏಕಪಕ್ಷೀಯವಾಗಿ ತೆಗೆದುಕೊಂಡು ಪಕ್ಷದಲ್ಲಿ ಗೊಂದಲ ಸೃಷ್ಟಿಸಬಾರದು ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಾಕೀತು ಮಾಡಿದ್ದಾರೆ.   ಸಣ್ಣಪುಟ್ಟ ಗೊಂದಲಗಳಿದ್ದರೂ ದೆಹಲಿಗೆ ಬರಬೇಕಾದ ಅಗತ್ಯವಿಲ್ಲ. ಇದರಿಂದ ಜನತೆಗೆ ಮತ್ತು ಕಾರ್ಯಕರ್ತರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವ ಮುನ್ನ ಎಲ್ಲರೂ ಚರ್ಚೆ ನಡೆಸಿ ಸರ್ವಸಮ್ಮತವಾದ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಜು.29ರಂದು ದೆಹಲಿಗೆ ತೆರಳಿದ್ದ ಮಾಜಿ ಉಪಮುಖ್ಯಮಂತ್ರಿ ಹಾಗೂ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕ ಸಿ.ಟಿ.ರವಿ ಅಮಿತ್ ಷಾರನ್ನು ಭೇಟಿ ಮಾಡಿ ಪದಾಧಿಕಾರಿಗಳ ಪಟ್ಟಿ ಬದಲಿಸುವಂತೆ ಮನವಿ ಮಾಡಿದ್ದರು.

ಇದನ್ನು ಅಷ್ಟೇ ನಯವಾಗಿ ತಿರಸ್ಕರಿಸುವ ಅಮಿತ್ ಷಾ, ಪದಾಧಿಕಾರಿಗಳ ಪಟ್ಟಿ ಬದಲಾವಣೆ ಮಾಡಿದರೆ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮುನಿಸಿಕೊಳ್ಳುತ್ತಾರೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗುತ್ತದೆ. ಹಳೆಯ ಕಹಿ ನೆನಪುಗಳನ್ನೆಲ್ಲ ಮರೆತು ಪಕ್ಷ ಸಂಘಟನೆಗೆ ಗಮನಹರಿಸುವಂತೆ ಉಭಯ ನಾಯಕರಿಗೆ ಸಲಹೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.   ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ಮೇಲೆ ಪಕ್ಷದಲ್ಲಿ ಕೆಲವು ಬದಲಾವಣೆ ಮಾಡಿದ್ದರು. ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಹಿರಿಯ ಉಪಾಧ್ಯಕ್ಷರು ಸೇರಿದಂತೆ ವಿವಿಧ ಮೋರ್ಚಾಗಳ ನೇಮಕಾತಿಗೆ ಭಾರೀ ವಿವಾದ ಸೃಷ್ಟಿಯಾಗಿತ್ತು.  ಈ ಪಟ್ಟಿಯಲ್ಲಿ ಯಡಿಯೂರಪ್ಪ ಬೆಂಬಲಿಗರೇ ಮೇಲುಗೈ ಸಾಧಿಸಿದ್ದು, ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಲಾಗಿದೆ ಎಂದು ಈಶ್ವರಪ್ಪ ನೇತೃತ್ವದಲ್ಲಿ ಸಭೆ ನಡೆದು ದೆಹಲಿ ವರಿಷ್ಠರಿಗೆ ದೂರು ನೀಡಲಾಗಿತ್ತು.

ಪದಾಧಿಕಾರಿಗಳ ಪಟ್ಟಿ ಬದಲಾಯಿಸದ ಕೇಂದ್ರ ವರಿಷ್ಠರು ಬದಲಿಗೆ ಯಡಿಯೂರಪ್ಪ ಕಳುಹಿಸಿದ್ದ ಕೋರ್ ಕಮಿಟಿ ಸದಸ್ಯರ ಪಟ್ಟಿಗೆ ಕೊಕ್ಕೆ ಹಾಕಿತ್ತು. ಬಿಎಸ್‍ವೈ ಜೊತೆ ಗುರುತಿಸಿಕೊಂಡಿರುವ ಶೋಭ ಕರಂದ್ಲಾಜೆ, ರವಿಕುಮಾರ, ಬಸವರಾಜ್ ಬೊಮ್ಮಾಯಿ, ಜಿ.ಎಂ.ಸಿದ್ದೇಶ್ವರ್ ಅವರಗಳ ಹೆಸರನ್ನು ಪರಿಗಣಿಸಿರಲಿಲ್ಲ.  ತುಮಕೂರು, ಶಿವಮೊಗ್ಗ, ದಾವಣಗೆರೆ, ಬೆಳಗಾವಿ ಗ್ರಾಮಾಂತರ, ಚಿಕ್ಕಮಗಳೂರು, ಬಿಜಾಪುರ, ಬಾಗಲಕೋಟೆ ಸೇರಿದಂತೆ ಸುಮಾರು ಎಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತಮ್ಮ ಬಣದವರನ್ನೇ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ ಎಂಬುದು ಈಶ್ವರಪ್ಪನವರ ಆರೋಪವಾಗಿತ್ತು.   ಆದರೆ ಈ ಪಟ್ಟಿ ಬದಲಾವಣೆಗೆ ರಾಷ್ಟ್ರೀಯ ನಾಯಕರು ತಿರಸ್ಕರಿಸಿರುವುದರಿಂದ ಪಕ್ಷದಲ್ಲಿ ಯಡಿಯೂರಪ್ಪನವರೇ ಮೇಲುಗೈ ಸಾಧಿಸಿದ್ದಾರೆ.

Facebook Comments

Sri Raghav

Admin