ಪದೇ ಪದೇ ಒಡೆಯುವ ಹೇಮಾವತಿ ನಾಲೆ ಸಿಐಡಿ ತನಿಖೆಗೆ ಶಾಸಕ ಸುರೇಶ್‌ಗೌಡ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

suresh-gowda

ತುಮಕೂರು, ಆ.24-ಜಿಲ್ಲೆಗೆ ಬರಬೇಕಾದ ಹೇಮಾವತಿ ನೀರನ್ನು ಸಮರ್ಪಕವಾಗಿ ಹರಿಸಬೇಕು. ಪದೇ ಪದೇ ನಾಲೆ ಒಡೆಯುವುದರ ಬಗ್ಗೆ ಸಿಐಡಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಬಂಧಿಸುವಂತೆ ಗ್ರಾಮಾಂತರ ಕ್ಷೇತ್ರದ ಶಾಸಕ ಸುರೇಶ್‌ಗೌಡ ಒತ್ತಾಯಿಸಿದ್ದಾರೆ.  ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಗೆ ಹೇಮಾವತಿ ನೀರು ಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನೀರಿಗಾಗಿ ಜನರು, ರೈತರು ಬೀದಿಗಿಳಿದು ಹೋರಾಟ ನಡೆಸಿದರೆ ಆಗುವ ಅನಾಹುತಗಳಿಗೆ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೇ ನೇರ ಹೊಣೆಯಾಗಬೇಕಾಗುತ್ತದೆ. ಅಲ್ಲದೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಪ್ಪುಪಟ್ಟಿ ಪ್ರದರ್ಶನ ಹಾಗೂ ಘೇರಾವ್ ಹಾಕುವ ಮುನ್ನ ಸಚಿವರು ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಇತ್ತೀಚೆಗೆ ನಡೆದ ಹೇಮಾವತಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದ ಪ್ರಕಾರ, ಜಿಲ್ಲೆಗೆ 7 ಟಿಎಂಸಿ ನೀರು ನಿಗದಿ ಮಾಡಲಾಗಿದೆ. ಅದರಂತೆ ಕಳೆದ 12ರಂದು ಜಲಾಶಯದಿಂದ ನೀರು ಬಿಡಲಾಗಿತ್ತು. ಆದರೆ, ಎರಡೇ ದಿನಗಳಲ್ಲಿ ನಿಲ್ಲಿಸಲಾಯಿತು. ಕಾರಣ ನಾಲೆಗೆ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದ. ಅವನ ಶವ ಹೊರತೆಗೆಯಲು ನೀರು ನಿಲ್ಲಿಸಲಾಗಿದೆ ಎಂದು ಅಲ್ಲಿನ ಎಂಜಿನಿಯರ್ ತಿಳಿಸಿದರು.  ಕಳೆದ 17ರಂದು ಪುನಃ ನೀರು ಬಿಟ್ಟಿದ್ದು, ಅದು ಕೂಡ ಒಂದೇ ದಿನದಲ್ಲಿ ನಿಲ್ಲಿಸಲಾಗಿತ್ತು. ಕಾರಣ 32ಕಿಮೀ ಬಳಿ ನಾಲೆ ಒಡೆದಿದೆ ಎಂಬ ನೆಪ ಹೇಳಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈಗ ನೀರು ಬಿಡಲಾಗಿದೆ. 2400 ಕ್ಯೂಸೆಕ್ಸ್ ನೀರು ನಿಗದಿಯಾಗಿದ್ದು, ಕೇವಲ 1400 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ.

ಇದರಿಂದ ಗುಬ್ಬಿ, ತುಮಕೂರು, ಗ್ರಾಮಾಂತರ, ಕುಣಿಗಲ್, ಮಧುಗಿರಿ ಸೇರಿದಂತೆ ಮತ್ತಿತರ ತಾಲೂಕುಗಳಲ್ಲಿ ಕುಡಿಯುವ ನೀರಿಗೆ ಅಭಾವ ಬಂದೊದಗಲಿದೆ. ಸುಮಾರು ವರ್ಷಗಳಿಂದ ನಮ್ಮ ಪಾಲಿನ ನೀರು ನಮಗೆ ಸಿಗುತ್ತಿಲ್ಲ ಎಂದು ದೂರಿದ ಅವರು, ಸುಳ್ಳು ನೆಪವೊಡ್ಡಿ ನೀರು ಬಿಡಲು ನಿರಾಕರಣೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕಳೆದ 20 ವರ್ಷಗಳಿಂದ ಹೇಮಾವತಿ ನಾಲೆ ಎಂಜಿನಿಯರ್‌ಗಳು ಹಾಸನದಲ್ಲೇ ಬೀಡು ಬಿಟ್ಟಿದ್ದಾರೆ. ಪದೇ ಪದೇ ನಾಲೆ ಒಡೆಯುವುದಕ್ಕೆ ಇವರೇ ಕಾರಣರಾಗಿದ್ದು, ಹಾಸನದ ಜನರು ಮಾತ್ರ ಜನರೇ, ತುಮಕೂರಿನವರು ಜನರಲ್ಲವೆ ಎಂದು ಪ್ರಶ್ನಿಸಿದರು. ಹೆಚ್ಚು ಜೆಡಿಎಸ್ ಶಾಸಕರನ್ನು ಹೊಂದಿರುವ ತುಮಕೂರು ಕ್ಷೇತ್ರದಲ್ಲಿ ನೀರು ಹರಿಸಲು ಶಾಸಕರು ದಿಟ್ಟ ನಿಲುವು ಕೈಗೊಳ್ಳಬೇಕು. ಅಲ್ಲದೆ, ಒಂದೆಡೆ ಬೀಡು ಬಿಟ್ಟಿರುವ ಎಂಜಿನಿಯರ್‌ಗಳನ್ನು ಎತ್ತಂಗಡಿ ಮಾಡಬೇಕೆಂದು ಒತ್ತಾಯಿಸಿದರು.
ಗೃಹ ಸಚಿವರ ಇನ್‌ ಚಾರ್ಜ್: ಗೃಹ ಇಲಾಖೆಯನ್ನು ಸಮರ್ಪಕವಾಗಿ ಎದುರಿಸಲು ಗೃಹ ಸಚಿವರು ಸಂಪೂರ್ಣವಾಗಿ ವಿಫಲರಾಗಿದ್ದು, ಸಲಹೆಗಾರ ಕೆಂಪಯ್ಯನವರೇ ಗೃಹ ಸಚಿವರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪರಮೇಶ್ವರ್ ಅವರು ಸರಳ-ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಅವರ ಸರಳತೆಯನ್ನೇ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದ ಅವರು, ಹಾಗೆಂದ ಮಾತ್ರಕ್ಕೆ ಪರಮೇಶ್ವರ್ ಅವರು ಅಸಮರ್ಥರೆಂದಲ್ಲ ಎಂದರು.  20 ದೇಶಗಳಲ್ಲಿ ಆಮ್ನೆಸ್ಟಿ ಸಂಘಟನೆ ನಿಷೇಧಿಸಲಾಗಿದೆ. ಆದರೆ, ರಾಜ್ಯದಲ್ಲಿ ನಿಷೇಧಿಸಲು ಏಕೆ ಮೀನಾಮೇಷ ಎಣಿಸಲಾಗುತ್ತಿದೆ. ಕೂಡಲೇ ಸಂಘಟನೆಯನ್ನು ನಿಷೇಧಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ, ಗೂಳೂರು ಶಿವಕುಮಾರ್, ಗಂಗಾಂಜನೇಯ, ಶಾಂತಕುಮಾರ್, ಅನಿತಾ ಸಿದ್ದೇಗೌಡ ಮತ್ತಿತರರಿದ್ದರು.

► Follow us on –Facebook / Twitter  /Google+

Facebook Comments

Sri Raghav

Admin