ಪದೇ ಪದೇ ವರ್ಗಾವಣೆಗೆ ಬೇಸತ್ತು ಸರ್ಕಾರದ ವಿರುದ್ಧ ತಿರುಗಿ ಬಿದ್ದ ಐಎಎಸ್ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

IAS-IPS-IFS
ಬೆಂಗಳೂರು,ನ.11- ಪದೇ ಪದೇ ನಮ್ಮನ್ನು ವರ್ಗಾವಣೆ ಮಾಡುತ್ತಿದ್ದರೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕೆಲ ಐಎಎಸ್ ಅಧಿಕಾರಿಗಳು ಸರ್ಕಾರದ ಕಾರ್ಯ ವೈಖರಿ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಆ ಅವರಿಗೆ ಕೆಲ ಹಿರಿಯ ಐಎಎಸ್ ಅಧಿಕಾರಿಗಳು ಪತ್ರ ಬರೆದಿದ್ದು , ಕನಿಷ್ಠ ಪಕ್ಷ ಒಂದು ಇಲಾಖೆಯಲ್ಲಿ ಎರಡು ವರ್ಷವಾದರೂ ಕೆಲಸ ಮಾಡಲು ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.  ಮೂರು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು(ಡಿಸಿ), ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಪಿಸಿ)ಗಳ ಸಭೆ ನಡೆಸಿದ್ದರು.

ಸರ್ಕಾರ ಜಾರಿ ಮಾಡಿರುವ ಕಾರ್ಯಕ್ರಮಗಳನ್ನು ಕಾಲ ಮಿತಿಯೊಳಗೆ ಅನುಷ್ಠಾನ ಮಾಡದಿದ್ದರೆ ಅದಕ್ಕೆ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದರೆ ಮತದಾರರನ್ನು ಸೆಳೆಯಬಹುದು ಎಂಬುದು ಮುಖ್ಯಮಂತ್ರಿಗಳ ಲೆಕ್ಕಾಚಾರವಾಗಿತ್ತು.

ಆದರೆ ಸರ್ಕಾರ ಮೂರ್ನಾಲ್ಕು ತಿಂಗಳಿಗೊಮ್ಮೆ ವರ್ಗಾವಣೆ ಮಾಡುತ್ತಿದ್ದರೆ ನಾವು ಕಾರ್ಯಕ್ರಮಗಳನ್ನು ಜಾರಿ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಹಿರಿಯ ಮತ್ತು ಕಿರಿಯ ಐಎಎಸ್ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ಅಲಳು ತೋಡಿಕೊಂಡಿದ್ದಾರೆ. ಹಿರಿಯ ಐಎಎಸ್ ಅಧಿಕಾರಿಗಳಾದ ಮನೋಜ್‍ಕುಮಾರ್ ಮೀನಾ, ಅಜಯ್ ನಾಗಭೂಷಣ್, ಮನೀಶ್ ಮುದ್ಗಲ್ ಸೇರಿದಂತೆ ಕೆಲ ಐಎಎಸ್ ಅಧಿಕಾರಿಗಳು ಸರ್ಕಾರದ ಕ್ರಮಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಯಾವಾಗ ವರ್ಗಾವಣೆ:

ರಾಜ್ಯ ಸರ್ಕಾರ ಕಳೆದ ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ಅಂತ್ಯಕ್ಕೆ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಆ.9ರಂದು ಜಿಯಾವುಲ್ಲಾ , ಮಂಜುಶ್ರೀ, 14ರಂದು ನಿಲಯ ಮಿತಿಲ್ ಅವರುಗಳನ್ನು ವರ್ಗಾವಣೆ ಮಾಡಲಾಗಿತ್ತು.ಅ.11ರಂದು ಐವರು ಐಎಎಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಯಿತು. ಡಾ.ಜಗದೀಶ್ ಕೆ.ಜಿ, ಶಶಿಕಾಂತ್ ಸೆಂಥಿಲ್, ಶ್ರೀಧರ್.ಎಂಎಸ್ ಸೇರಿದಂತೆ ಮತ್ತಿತರರನ್ನು ವರ್ಗಾವಣೆ ಮಾಡಲಾಗಿತ್ತು. 17ರಂದು ಪುನಃ ಇಬ್ಬರು ಅಧಿಕಾರಿಗಳಾದ ಎಂ.ಎನ್.ಅಜಯ್ ನಾಗಭೂಷಣ್ ಹಾಗೂ ಡಾ.ಎನ್.ಮಂಜುಳ ಅವರನ್ನು , 19ರಂದು ಡಿ.ಪ್ರಾವೀಣ್ಯ ಅವರನ್ನು ವರ್ಗಾಯಿಸಲಾಗಿತ್ತು. ಅ.24ರಂದು ಸಗತ್‍ತಬಸಂ ಅಬ್ರೋ ಅವರನ್ನು ಎತ್ತಂಗಡಿ ಮಾಡಲಾಗಿತ್ತು.

ಸಿಬ್ಬಂದಿ ಕೊರತೆ:

ಕರ್ನಾಟಕಕ್ಕೆ ಕೇಂದ್ರದಿಂದ 314 ಐಎಎಸ್ ಅಧಿಕಾರಿಗಳನ್ನು ಮಂಜೂರು ಮಾಡಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಐಎಎಸ್ ಅಧಿಕಾರಿಗಳ ಸಂಖ್ಯೆ 239. ಖಾಲಿ ಇರುವ ಸಿಬ್ಬಂದಿಯನ್ನು ಭರ್ತಿ ಮಾಡುವಂತೆ ಕೇಂದ್ರಕ್ಕೆ ಹಲವು ಬಾರಿ ಪತ್ರ ಬರೆದಿದೆಯಾದರೂ ಕೇಂದ್ರ ಮಾತ್ರ ಈ ಬಗ್ಗೆ ಗಮನಹರಿಸಿಲ್ಲ. ಇರುವ ಸಿಬ್ಬಂದಿಯೇ ಕಡಿಮೆ ಇರುವಾಗ ಪದೇ ಪದೇ ಎತ್ತಂಗಡಿ ಮಾಡುತ್ತಿದ್ದರೆ ನಾವು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಒಂದು ಇಲಾಖೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಕನಿಷ್ಟ ಪಕ್ಷ 2-3 ತಿಂಗಳು ಬೇಕಾಗುತ್ತದೆ. ಅಂಥದರಲ್ಲೇ ಸರ್ಕಾರ 6 ತಿಂಗಳೊಳಗೆ ವರ್ಗಾಯಿಸಿದರೆ ನಾವು ಏನು ಮಾಡಲು ಸಾಧ್ಯ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ವರ್ಗಾವಣೆ ಮಾಡುತ್ತಿರುವುದು ಆಡಳಿತದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಒಂದು ಬಾರಿ ವರ್ಗಾವಣೆ ಮಾಡಿದರೆ ಎರಡು ವರ್ಷವಾದರೂ ಅದೇ ಇಲಾಖೆಯಲ್ಲಿ ಇರಬೇಕು. ಆಗ ಮಾತ್ರ ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಈ ವರ್ಷದ ಅಂತ್ಯಕ್ಕೆ ಇನ್ನು ಕೆಲವು ಐಎಎಸ್ ಅಧಿಕಾರಿಗಳು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಈಗಾಗಲೇ ನಮಗೆ ಕೆಲಸದ ಒತ್ತಡದಿಂದ ರಜೆ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಹೆಚ್ಚುವರಿಯಾಗಿ ಹೇಗೆ ಕೆಲಸ ನಿಭಾಯಿಸುವುದು ಎಂಬ ನೋವು ಐಎಎಸ್ ಅಧಿಕಾರಿಗಳದ್ದು . ಸರ್ಕಾರ ಕೆಲವರ ಒತ್ತಡಕ್ಕೆ ಮಣಿದು ಬೇಕಾಬಿಟ್ಟಿಯಾಗಿ ವರ್ಗಾವಣೆ ಮಾಡುತ್ತದೆ. ಇದಕ್ಕೆ ಕಡಿವಾಣ ಹಾಕಿದರೆ ಮಾತ್ರ ನಾವು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಸಾಧ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪತ್ರ ಬಂದಿರುವುದು ನಿಜ:

ಇನ್ನು ಐಎಎಸ್ ಅಧಿಕಾರಿಗಳು ತಮಗೆ ಪತ್ರ ಬರೆಯುವುದನ್ನು ಒಪ್ಪಿಕೊಂಡಿರುವ ಮುಖ್ಯ ಕಾರ್ಯದರ್ಶಿ ಸುಭಾಷ್‍ಚಂದ್ರ ಕುಂಟಿಯಾ ಆ ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಆಡಳಿತಕ್ಕೆ ಚುರುಕು ನೀಡುವ ನಿಟ್ಟಿನಲ್ಲಿ ಐಎಎಸ್ ಮತ್ತು ಐಪಿಎಸ್‍ಗೆ ಮೇಜರ್ ಸರ್ಜರಿ ನಡೆಸಿತ್ತು.

Facebook Comments

Sri Raghav

Admin