ಪದೇ ಪದೇ ವಾಚ್ ವಿಷಯವನ್ನೇ ಏಕೆ ಎತ್ತುತ್ತೀರ..? ಬಿಜೆಪಿ ವಿರುದ್ಧ ಸಿಎಂ ಸಿಡಿಮಿಡಿ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaah-Watch
ಮೈಸೂರು, ಮೇ 7- ಪದೇ ಪದೇ ವಾಚ್ ವಿಷಯವನ್ನೇ ಏಕೆ ಎತ್ತುತ್ತೀರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯವರನ್ನು ಖಾರವಾಗಿ ಪ್ರಶಿಸಿದ್ದಾರೆ. ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಾಚ್ ಕಟ್ಟಿರುವುದು ನಿಜ. ಬಿಜೆಪಿಯವರು ಫೋಟೋ ರಿಲೀಸ್ ಮಾಡಿರುವುದರಲ್ಲಿ ವಾಚ್ ಇದೆಯಾ ಎಂದು ಸಿಎಂ ಪ್ರಶ್ನಿಸಿ, ಬೇರೆ ಏನು ವಿಷಯ ಇಲ್ಲವೆಂದು ಪದೇ ಪದೇ ವಾಚ್ ವಿಷಯ ಎತ್ತುತ್ತೀರಾ. ಅದೆಲ್ಲ 2013ರಲ್ಲೇ ಮುಗಿದಿದೆ ಎಂದು ಖಡಕ್ಕಾಗಿ ಹೇಳಿದರು.ಈ ಚುನಾವಣೆಯಲ್ಲಿ ನನಗೆ ಯಾವುದೇ ಟೆನ್ಷನ್ ಇಲ್ಲ. ನಾವು ಬಹುಮತಗಳಿಸಿ ಸರ್ಕಾರ ರಚಿಸುವುದರಲ್ಲಿ ಅನುಮಾನ ಇಲ್ಲ ಎಂದರು.

ಚಾಮುಂಡೇಶ್ವರಿ ಕ್ಷೇತ್ರಕ್ಕೆ ನಟ ಸುದೀಪ್ ಪ್ರಚಾರಕ್ಕೆ ಬರುತ್ತಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಬರುತ್ತೇನೆಂದು ಹೇಳಿದ್ದರು. ಆದರೆ, ಈವರೆಗೆ ನನಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಬಹುಶಃ ಮೇ 9ರಂದು ಪ್ರಚಾರಕ್ಕೆ ಸುದೀಪ್ ಬರಬಹುದು ಎಂದು ಹೇಳಿದರು. ಇಂದು ಚಾಮರಾಜನಗರ ಹಾಗೂ ನಂಜನಗೂಡಿನಲ್ಲಿ ಪ್ರಚಾರ ಮಾಡುತ್ತೇನೆ. ನಾಳೆ ಮಂಡ್ಯ ಜಿಲ್ಲೆಗೆ ತೆರಳಿ ಪಾಂಡವಪುರದಲ್ಲಿ ದರ್ಶನ್‍ಪುಟ್ಟಣ್ಣಯ್ಯ ಪರ ಪ್ರಚಾರದಲ್ಲಿ ತೊಡಗುವುದಾಗಿ ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ನನಗೆ ಯಾವುದೇ ಭಯವಿಲ್ಲ. ಸೋಲುವವರು ಭಯಪಡುತ್ತಾರೆ. ನಾನೇಕೆ ಭಯಪಡಲಿ, ಚುನಾವಣಾ ರಣರಂಗದಲ್ಲಿ ಮುನ್ನುಗ್ಗುತ್ತೇನೆ. ಸ್ಪಷ್ಟ ಬಹುಮತ ನಮಗೆ ಸಿಗಲಿದೆ. ಈ ಬಾರಿಯೂ ಅಧಿಕಾರ ಹಿಡಿಯುತ್ತೇವೆ ಎಂದು ಪುನರುಚ್ಚರಿಸಿದರು. ನಮ್ಮ ಪ್ರಣಾಳಿಕೆ ಒಪ್ಪುವ ಪಕ್ಷದೊಂದಿಗೆ ಹೋಗುತ್ತೇವೆ ಎಂಬ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ತಾವು ಕಿಂಗ್ ಅನ್ನುತ್ತಿದ್ದರು. ಈಗ ಕಿಂಗ್ ಅಲ್ವಾ ಎಂದು ವ್ಯಂಗ್ಯವಾಡಿದರು.

Facebook Comments

Sri Raghav

Admin