ಪರಪ್ಪನ ಅಗ್ರಹಾರದ ಗಣ್ಯಕೈದಿಗಳಿಗೆ ನೀಡುತ್ತಿದ್ದ ರಾಜವೈಭೋಗಕ್ಕೆ ಕತ್ತರಿ

ಈ ಸುದ್ದಿಯನ್ನು ಶೇರ್ ಮಾಡಿ

Sasikala--01

ಬೆಂಗಳೂರು, ಜು.18- ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ರಾಜ್ಯ ಸರ್ಕಾರಕ್ಕೆ ಭಾರೀ ಮುಜುಗರ ಸೃಷ್ಟಿಸಿದ್ದ ಪರಪ್ಪನ ಅಗ್ರಹಾರದಲ್ಲಿರುವ ಗಣ್ಯ ಕೈದಿಗಳಿಗೆ ನೀಡಲಾಗುತ್ತಿದ್ದ ಐಷಾರಾಮಿ ಸವಲತ್ತುಗಳನ್ನು ಬಂದ್ ಮಾಡಲಾಗಿದೆ. ಕಾರಾಗೃಹದಲ್ಲಿರುವ ಕೆಲವು ಕೈದಿಗಳಿಗೆ ಎಲ್ಲಾ ಸವಲತ್ತುಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ ಇಲ್ಲಿನ ಕೆಲ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಡಿಐಜಿಯಾಗಿದ್ದ ಡಿ.ರೂಪಾ ಮುದ್ಗಲ್ ಸರ್ಕಾರಕ್ಕೆ ವರದಿ ನೀಡಿದ್ದರು.

ಈ ವರದಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಲ್ಲದೆ, ಸರ್ಕಾರವನ್ನು ಭಾರೀ ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ಕಾರಣ ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಧೀಖಾನೆ ಡಿಜಿಪಿ ಸತ್ಯನಾರಾಯಣರಾವ್, ಡಿಐಜಿ ರೂಪಾ, ಅಧೀಕ್ಷಕ ಕೃಷ್ಣಕುಮಾರ್ ಸೇರಿದಂತೆ ಕೆಲ ಅಧಿಕಾರಿಗಳನ್ನು ಎತ್ತಂಗಡಿ ಮಾಡಿದ್ದರು.
ಈ ವಿವಾದದ ಕೇಂದ್ರ ಬಿಂದು ಶಶಿಕಲಾ ನಟರಾಜನ್, ನಕಲಿ ಛಾಪಾಕಾಗದ ಹಗರಣದ ಪ್ರಮುಖ ರೂವಾರಿ ಅಬ್ದುಲ್ ಕರೀಂ ಲಾಲ್ ತೆಲಗಿ ಸೇರಿದಂತೆ ಅನೇಕ ಗಣ್ಯ ಕೈದಿಗಳಿಗೆ ನೀಡಲಾಗುತ್ತಿದ್ದ ಸವಲತ್ತುಗಳನ್ನು ಕಳೆದ ರಾತ್ರಿಯಿಂದಲೇ ಕಡಿತಗೊಳಿಸಲಾಗಿದೆ.

ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ, ಅವರ ಆಪ್ತ ಗೆಳತಿ ಇಳವರಸಿ, ದತ್ತು ಪುತ್ರನಿಗೆ ಪ್ರತ್ಯೇಕ ಐದು ಕೊಠಡಿಗಳು, ಅಡುಗೆ ಮನೆ, ಹಾಸಿಗೆ, ದಿಂಬು, ಟಿವಿ, ಪ್ಯಾನ್, ವಿಶೇಷ ಬಟ್ಟೆಗಳು, ದಿನ ಪತ್ರಿಕೆಗಳು, ಹೊರಗಡೆಯಿಂದ ಊಟ, ಅತಿಥಿಗಳನ್ನು ಭೇಟಿ ಮಾಡಲು ಪ್ರತ್ಯೇಕ ಕೊಠಡಿ, ಬ್ಯಾರಿಕೇಡ್ ಸೇರಿದಂತೆ ಇತ್ಯಾದಿ ಸವಲತ್ತುಗಳನ್ನು ನೀಡಲಾಗುತ್ತಿತ್ತು. ಇದಕ್ಕಾಗಿ ಶಶಿಕಲಾ ಜೈಲಿನ ಅಧಿಕಾರಿಗಳಿಗೆ ಎರಡು ಕೋಟಿ ಲಂಚ ನೀಡಿದ್ದಾರೆ ಎಂದು ರೂಪಾ ಆರೋಪ ಮಾಡಿದ್ದರು.

ರೂಪಾ ಮಾಡಿದ್ದ ಆರೋಪಕ್ಕೆ ಪುಷ್ಠಿ ನೀಡುವಂತೆ ನಿನ್ನೆಯಷ್ಟೇ ಜೈಲಿನಲ್ಲಿ ಶಶಿಕಲಾ ಹಾಗೂ ಅವರ ಸಂಗಡಿಗರು ಪಡೆಯುತ್ತಿದ್ದ ಸವಲತ್ತುಗಳು ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾಗಿತ್ತು.  ಇದರಿಂದ ಇನ್ನಷ್ಟು ಮುಜುಗರಕ್ಕೆ ಸಿಲುಕಿದ ಸರ್ಕಾರ ಯಾವುದೇ ಕೈದಿಗಳಿಗೆ ವಿಶೇಷ ಸಲವತ್ತು ನೀಡಬಾರದು. ನ್ಯಾಯಾಲಯದ ಅನುಮತಿ ಇಲ್ಲದೆ ಯಾರೊಬ್ಬರಿಗೂ ನಿಯಮ ಉಲ್ಲಂಘಿಸಿ ಸವಲತ್ತು ನೀಡದಂತೆ ನಿರ್ದೇಶನ ನೀಡಿದೆ.  ಸರ್ಕಾರದಿಂದ ನಿರ್ದೇಶನ ಬರುತ್ತಿದ್ದಂತೆ ಕಳೆದ ರಾತ್ರಿಯಿಂದಲೇ ಎಲ್ಲಾ ಸವಲತ್ತುಗಳೂ ಬಂದ್ ಆಗಿವೆ. ಶಶಿಕಲಾ ಇದೀಗ ಸಾಮಾನ್ಯ ಕೈದಿಯಾಗಿದ್ದು, ಎಲ್ಲರಂತೆ ಬಿಳಿ ಸೀರೆ, ಬಿಳಿ ಕುಪ್ಪಸ ಧರಿಸಬೇಕು. ಅಲ್ಲದೆ, ಜೈಲಿನಲ್ಲಿ ತಯಾರಿಸಿದ ಊಟವನ್ನೇ ಮಾಡಬೇಕು. ಸಾಮಾನ್ಯ ಮಹಿಳಾ ಕೈದಿಗಳ ಜತೆ ಅವರು ಇರಬೇಕಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin