ಪರಪ್ಪನ ಅಗ್ರಹಾರ ಜೈಲಲ್ಲಿ ಕೈದಿಗಳ ದಿಢೀರ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Parappana-Agraha-r-021

ಬೆಂಗಳೂರು, ಅ.17- ಹೊರಗಿನಿಂದ ಊಟ ತರಲು ಅವಕಾಶ ಕೊಡದೇ ಇರುವುದು ಮತ್ತು ದೀಪಾವಳಿ ಹಬ್ಬಕ್ಕೆ ಪೆರೋಲ್ ಮೇಲೆ ತೆರಳಲು ಅವಕಾಶ ನೀಡದೇ ಇರುವುದನ್ನು ವಿರೋಧಿಸಿ ಇಂದು ಪರಪ್ಪನ ಅಗ್ರಹಾರದಲ್ಲಿ ಕೈದಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಇಂದು ಬೆಳಗ್ಗೆ ದಿಢೀರ್ ಪ್ರತಿಭಟನೆ ಆರಂಭವಾದಾಗ ಜೈಲು ಅಧಿಕಾರಿಗಳು ತಬ್ಬಿಬ್ಬಾದರು. ಜೈಲಿನಲ್ಲಿ ಊಟದ ಗುಣಮಟ್ಟ ಸರಿಯಿಲ್ಲ. ಈ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಸುಧಾರಣೆಯಾಗಿಲ್ಲ. ವೈಯಕ್ತಿಕವಾಗಿ ಮನೆಯಿಂದ ಊಟ ತರಿಸಿಕೊಳ್ಳಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಜೈಲಿನ ಊಟ ತಿಂದು ಹಲವಾರು ಮಂದಿಗೆ ಆರೋಗ್ಯ ಹದಗೆಟ್ಟಿದೆ. ಇಂತಹ ಸಂದರ್ಭದಲ್ಲಿ ಪೆರೋಲ್ ಮೇಲೆ ಬಿಡುಗಡೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಜೈಲಿನಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ. ಎಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರತಿಭಟನೆ ನಡೆಸುತ್ತಿರುವುದಾಗಿ ಕೈದಿಗಳು ಹೇಳಿದರು. ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕ ಎಂ.ಎಸ್.ಮೆಘರಿಕ್ ಸ್ಥಳಕ್ಕೆ ತೆರಳಿ ಪ್ರತಿಭಟನಾ ನಿರತ ಕೈದಿಗಳ ಜತೆ ಮಾತುಕತೆ ನಡೆಸಿದರು.

ಇತ್ತೀಚೆಗೆ ತಮಿಳುನಾಡಿನ ಶಶಿಕಲಾ ಅವರ ಪ್ರಕರಣದಿಂದ ಜೈಲಿನಲ್ಲಿ ಹಲವಾರು ಅಕ್ರಮಗಳು ಬೆಳಕಿಗೆ ಬಂದಿದ್ದವು. ಕೈದಿಗಳಿಗೆ ವಿವಿಐಪಿ ಉಪಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಶಶಿಕಲಾ ಪ್ರಕರಣದಲ್ಲಿ ಡಿಐಜಿ ರೂಪಾ ಮತ್ತು ಹಿಂದಿನ ಪೊಲೀಸ್ ಮಹಾನಿರ್ದೇಶಕ ಸತ್ಯನಾರಾಯಣರಾವ್ ನಡುವೆ ಬಹಿರಂಗ ಆರೋಪ, ಪ್ರತ್ಯಾರೋಪಗಳು ಕೇಳಿ ಬಂದಿದ್ದವು. ಅನಂತರ ಜೈಲು ಅಧಿಕಾರಿಗಳು ಕೈದಿಗಳನ್ನು ನೋಡಲು ಬರುವವರಿಗೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದ್ದರು. ಹೊರಗಿನಿಂದ ಊಟ ತಂದು ಕೊಡುವುದಕ್ಕೆ ಕಡಿವಾಣ ಹಾಕಿದ್ದರು. ಇದರಿಂದಾಗಿ ಕೈದಿಗಳು ಇಂದು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.

Facebook Comments

Sri Raghav

Admin