ಪರಪ್ಪನ ಅಗ್ರಹಾರ ಜೈಲಲ್ಲಿ ಶಶಿಕಲಾ ಫ್ರೀ ಬರ್ಡ್, ಸ್ಪೋಟಕ ದೃಶ್ಯ ಬಹಿರಂಗ (Video)

ಈ ಸುದ್ದಿಯನ್ನು ಶೇರ್ ಮಾಡಿ

 

ಬೆಂಗಳೂರು, ಆ.21-ವ್ಯಾಪಕ ಭ್ರಷ್ಟಾಚಾರ ಆರೋಪಗಳು ಸಾಬೀತಾಗಿ ಜೈಲು ಪಾಲಾಗಿರುವ ಎಐಎಡಿಎಂಕೆ ಹಂಗಾಮಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ನಟರಾಜನ್ ಅತಿ ಭದ್ರತೆಯ ಪರಪ್ಪನ ಅಗ್ರಹಾರ ಬಂದೀಖಾನೆಯ ಮುಖ್ಯದ್ವಾರ ಪ್ರದೇಶದಲ್ಲಿ ಸ್ವಚ್ಚಂದವಾಗಿ ಅಡ್ಡಾಡುತ್ತಿರುವ ಸ್ಫೋಟಕ ವೀಡಿಯೋ ದೃಶ್ಯ ಬಹಿರಂಗಗೊಂಡಿದ್ದು, ಮತ್ತೊಮ್ಮೆ ದೊಡ್ಡ ಬಿರುಗಾಳಿ ಸೃಷ್ಟಿಸಲಿದೆ.  ಶಶಿಕಲಾರಿಗೆ ಜೈಲಿನಲ್ಲಿ ಅತಿಗಣ್ಯ ವ್ಯಕ್ತಿಗಳ ಉಪಚಾರ ನೀಡಲಾಗುತ್ತಿದೆ ಎಂದು ಜೈಲಿನ ಉನ್ನತಾಧಿಕಾರಿಯಾಗಿದ್ದ ರೂಪಾ ಅವರು ನೀಡಿದ್ದ ವರದಿ ಪೊಲೀಸ್ ವಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿ ಕೆಲವು ಉನ್ನತಾಧಿಕಾರಿಗಳ ತಲೆ ದಂಡ ಮತ್ತು ಎತ್ತಂಗಡಿಯಾಗಿತ್ತು.

ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಸಲ್ಲಿಸಿರುವ ಈ ರಹಸ್ಯ ವೀಡಿಯೋದಲ್ಲಿ ಶಶಿಕಲಾ ಅಲಿಯಾಸ್ ಚಿನ್ನಮ್ಮ ತಮ್ಮ ಪರಮಾಪ್ತೆ ಇಳವರಸಿ (ಆಕೆಯೂ ಇದೇ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ) ಜೊತೆ ಕಾರಾಗೃಹದ ಮೇನ್ ಗೇಟ್ ಬಳಿ ಆರಾಮವಾಗಿ ಓಡಾಡುತ್ತಿರುವ ದೃಶ್ಯವಿದೆ. ಅತಿಭದ್ರತೆಯ ಮತ್ತು ಕಠಿಣ ನಿಯಮಗಳಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಮಾನ್ಯ ಕೈದಿಗೆ ಹೀಗೆ ಸ್ವಚ್ಚಂದವಾಗಿ ಅಡ್ಡಾಡಲು ಸಾಧ್ಯವಿದೆಯೇ ಎಂಬ ಪ್ರಶ್ನೆ ಇದೀಗ ವಿವಾದದ ಸ್ವರೂಪ ಪಡೆಯುತ್ತಿದೆ.

ಈ ಸಿಸಿಟಿವಿ ಕ್ಯಾಮೆರಾ ದೃಶ್ಯದಲ್ಲಿ ಶಶಿಕಲಾ ಅವರು ಸಿವಿಲ್ ಡ್ರೆಸ್‍ನಲ್ಲಿ ಮುಂದೆ ಹೋಗುತ್ತಿರುವ ಹಾಗೂ ಇಳವರಸಿ ಆವರೊಂದಿಗೆ ಬ್ಯಾಗ್ ಹಿಡಿದು ಹಿಂಬಾಲಿಸುತ್ತಿರುವ ದೃಶ್ಯವಿದೆ. ಅವರು ಜೈಲಿನ ಮುಖ್ಯ ಪ್ರವೇಶ ದ್ವಾರದಿಂದ ಒಳಬರುತ್ತಿರುವ ದೃಶ್ಯ ಅನೇಕ ವಿವಾದಗಳನ್ನು ಹುಟ್ಟುಹಾಕಿದೆ. ಶಶಿಕಲಾ ಸಜೆಯಲ್ಲಿರುವಾಗಲೇ ಜೈಲಿಂದ ಹೊರಗೆ ಹೋಗಿ ಒಳಕ್ಕೆ ಬರುತ್ತಿದ್ದಾರೆ. ಈ ವೀಡಿಯೋ ಮತ್ತೊಮ್ಮೆ ವಿವಾದದ ಸಂಚಲನ ಸೃಷ್ಟಿಸಲಿದೆ.

Facebook Comments

Sri Raghav

Admin